ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ವಿವಿದ ಪರವಾನಿಗೆ, ಟೆಂಡರ್ ಹೆಸರಲ್ಲಿ ಲಕ್ಷಾಂತರ ಹಣ ಲೂಟಿ – ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ ಆರೋಪ

ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು ವ್ಯಾಪಾಕ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ ಆರೋಪಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿರುವ ಬಿಜೆಪಿ ಆಡಳಿತ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಪ್ರತಿ ತಿಂಗಳು ನಡೆಸಬೇಕಾದ ಕೌನ್ಸಿಲ್ ಸಾಮಾನ್ಯ ಸಭೆಯನ್ನು ಕಳೆದ ೧೦
ತಿಂಗಳಲ್ಲಿ ೨ ಬಾರಿ ಮಾತ್ರ ನಡೆಸಿರುವುದು ಬಿಜೆಪಿ ಆಡಳಿತದ ವೈಫಲಕ್ಕೆ ಸಾಕ್ಷಿಯಾಗಿದೆ ಎಂದರು.
ನಗರೋತ್ಥಾನ ಯೋಜನೆ ಸೇರಿದಂತೆ ಪಾಲಿಕೆಯ ಅಭಿವೃದ್ಧಿ ಯೋಜನೆಗಳಲ್ಲಿ ಹೆಚ್ಚಾಗಿ ಆಯುಕ್ತರು ಹಸ್ತಕ್ಷೇಪ ಮಾಡುತ್ತಿದ್ದು, ಈ ಕಾರಣಕ್ಕಾಗಿ ಆಮೆಗತಿಯಲ್ಲಿ ಕಾಮಗಾರಿಗಳು ಸಾಗುತ್ತಿವೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯುಂಟಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯು ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದು, ಕಟ್ಟಡ ಪರವಾನಿಗೆಗೆ ಎನ್‌ಓಸಿ ಹೆಸರಲ್ಲಿ ಲಕ್ಷಾಂತರ ರು., ಲೂಟಿ ಮಾಡುತ್ತಿದೆ. ಇದಲ್ಲದೆ, ಬೀದಿ ದೀಪ ಬದಲಾವಣೆಯಲ್ಲಿಯೂ ಅವ್ಯವಹಾರ ನಡೆಸಲಾಗುತ್ತಿದ್ದು, ಕಸ ಸಂಗ್ರಹಣೆಗಾಗಿ ಮೂಲ ಕಂದಾಯದಲ್ಲಿ ಕರ ವಸೂಲಿ ಮಾಡಿದ್ದರೂ, ಅಂಗಡಿ, ಮನೆಗಳಿಂದ ಹೆಚ್ಚುವರಿ ಹಣ ವಸೂಲು ಮಾಡಲಾಗುತ್ತಿದೆ ಎಂದು ದೂರಿದರು.
ಮುಖ್ಯಮಂತ್ರಿ ಅನುದಾನದ ನಗರೋತ್ಥಾನ ಯೋಜನೆ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಿಧಾನಗತಿಯಲ್ಲಿದೆ. ಅಕ್ರಮವೆಸಗುವ ಉದ್ದೇಶಕ್ಕೆ ಶೇ.೪೦ರಷ್ಟು ಕಮಿಷನ್‌ಗೊಸ್ಕರ ಸಣ್ಣ ಕಾಮಗಾರಿಗಳನ್ನು ಒಟ್ಟುಗೊಡಿಸಿ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ. ಸೆ.೧೩ರಂದು ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ಸುಮಾರು ೨೫ ಕೋಟಿ ರೂ. ಕಾಮಗಾರಿಗಳಿಗೆ ಅನುಮೊದನೆ ನೀಡಿದ್ದರೂ, ಟೆಂಡರ್ ಕರೆಯುವಲ್ಲಿ ಪಾಲಿಕೆ ಆಯುಕ್ತರು ಹಾಗೂ ಮೇಯರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ, ಸೈಯದ್ ಚಾರ್ಲಿ, ಕಾಂಗ್ರೆಸ್ ಮುಖಂಡ ಯುವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.