ಖರೀದಿಯಲ್ಲಿ ಮೋಸವಾದ್ರೆ ದೂರು ದಾಖಲಿಸಿ: ಗೋಖಲೆ ಘಾಳಪ್ಪ


ದಾವಣಗೆರೆ: ಗ್ರಾಹಕರು ವ್ಯಾಪಾರ, ಖರೀದಿ, ಸೇವೆ ಹೀಗೆ ವಿವಿಧ ವ್ಯವಹಾರಗಳಲ್ಲಿ ವಂಚನೆಗೊಳಗಾದರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಗೋಖಲೆ ಘಾಳಪ್ಪ ಹೇಳಿದರು.

ನಗರದ ಜನತಾಬಜಾರ್ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಲಾದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಹಕರು ತಾವು ಕೊಳ್ಳುವ ಪ್ರತಿಯೊಂದು ವಸ್ತುಗಳ ಬೆಲೆ, ಗುಣಮಟ್ಟ, ಪ್ರಮಾಣ, ಅದರಲ್ಲಿನ ಅಂಶಗಳು ಇವೆಲ್ಲವನ್ನು ತಾಳ್ಮೆಯಿಂದ ಪರಿಶೀಲಿಸಬೇಕು.  ಖರೀದಿಗೆ ಪ್ರತಿಯಾಗಿ ಬಿಲ್ ಅಥವಾ ರಸೀದಿ ತಪ್ಪದೆ ಕೇಳಿ ಪಡೆಯಬೇಕು. ಗ್ರಾಹಕರು ಎಚ್ಚರವಾಗುವವರೆಗೂ ಅನ್ಯಾಯ, ಶೋಷಣೆ ಹಾಗೂ ಮೋಸ ನಿಲ್ಲುವುದಿಲ್ಲ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಇಂತಹ ದೂರುಗಳು ಸಲ್ಲಿಕೆಯಾಗುವುದೇ ಅಪರೂಪವಾಗಿದೆ. ಅಂದಮಾತ್ರಕ್ಕೆ ಜಿಲ್ಲೆಯಲ್ಲಿ ಗ್ರಾಹಕರಿಗೆ ಮೋಸ, ವಂಚನೆ, ಶೋಷಣೆ ನಡೆಯುತ್ತಿಲ್ಲ ಎಂದರ್ಥವಲ್ಲ. ಯಾರೂ ಕೂಡ ದೂರು ಸಲ್ಲಿಸಲು, ತಮ್ಮ ಹಕ್ಕು ಚಲಾಯಿಸಲು ಮುಂದಾಗುತ್ತಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.  ಅನ್ಯಾಯ, ಮೋಸಕ್ಕೆ ಒಳಗಾದರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.

ದ್ವಿಚಕ್ರ ವಾಹನ ಸಂಚಾರ ಮಾಡುವವರ ತಲೆ ಸುರಕ್ಷಿತವಾಗಿರಲಿ ಎಂದು ಸರ್ಕಾರ ಐಎಸ್‌ಐ ಮಾರ್ಕ್ ಹೊಂದಿರುವ ಗುಣಮಟ್ಟದ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿದರೆ, ಸಾರ್ವಜನಿಕರು ಕಾನೂನಿನಿಂದ, ಪೊಲೀಸರಿಂದ ತಪ್ಪಿಸಿಕೊಳ್ಳಲು ತೋರಿಕೆಗಾಗಿ, ಕಡಿಮೆ ದರದ, ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿ, ಅಪಘಾತಕ್ಕೊಳಗಾದಾಗ, ಜೀವ ಬಲಿಕೊಡುತ್ತಿದ್ದಾರೆ. ಇದು ಸಾರ್ವಜನಿಕರ ಅಸಡ್ಡೆಗೆ ಉದಾಹರಣೆಯಷ್ಟೆ.   ಇನ್ನಾದರೂ, ಸಾರ್ವಜನಿಕರು ತಮ್ಮ ಹಕ್ಕು ಕರ್ತವ್ಯಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಜ್ಯೋತಿ ರಾಧೇಶ್ ಜಂಬಗಿ ಮಾತನಾಡಿ, ಗ್ರಾಹಕರ ಸಂರಕ್ಷಣಾ ಕಾಯ್ದೆಗೆ 2019 ರಲ್ಲಿ ತಿದ್ದುಪಡಿಯಾಗಿದ್ದು, ಇದರಿಂದಾಗಿ ಗ್ರಾಹಕರಿಗೆ ಕಾಯ್ದೆಯಲ್ಲಿ ಇನ್ನಷ್ಟು ಹೆಚ್ಚಿನ ರಕ್ಷಣೆ ಹಾಗೂ ಹಕ್ಕು ದೊರೆತಂತಾಗಿದೆ. ಈ ಮೊದಲು ಇದ್ದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಇದೀಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವಾಗಿ ಬದಲಾಗಿದೆ. ಕಾಯ್ದೆ ತಿದ್ದುಪಡಿ ಬಳಿಕ ಗ್ರಾಹಕರಿಗೆ ರಕ್ಷಣೆಯ ಹಕ್ಕು, ಮಾಹಿತಿ ಪಡೆಯುವ, ಆಯ್ಕೆಯ, ಅಹವಾಲು ಸಲ್ಲಿಸುವ, ಪರಿಹಾರ ಪಡೆಯುವ, ಗ್ರಾಹಕರ ಕುರಿತ ಅರಿವು, ಶಿಕ್ಷಣ ಪಡೆಯುವ ಹಕ್ಕು ದೊರೆತಿದೆ ಎಂದು ತಿಳಿಸಿದರು.

ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಹೆಚ್.ಎಸ್. ರಾಜು ಮಾತನಾಡಿ, ಜಿಲ್ಲೆಯಲ್ಲಿ ತೂಕ ಮತ್ತು ಅಳತೆಗೆ ಸಂಬಂಧಿಸಿದಂತೆ ಒಟ್ಟು 1297 ತಪಾಸಣೆ ನಡೆಸಿದ್ದು, ಇದರಲ್ಲಿ 386 ಅಪರಾಧ ಪತ್ತೆಯಾಗಿದೆ. ಇದಕ್ಕಾಗಿ ಸಂಬಂಧಪಟ್ಟವರಿಗೆ 6.70 ಲಕ್ಷ ರು., ದಂಡ ವಿಧಿಸಲಾಗಿದೆ. ದಾವಣಗೆರೆಯಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದು, 1.6 ಕಿ.ಮೀ. ವರೆಗಿನ ಪ್ರಯಾಣಕ್ಕೆ ಗರಿಷ್ಟ 30 ರೂ. ದರ ನಿಗದಿಪಡಿಸಿದೆ. ಇದಕ್ಕಿಂತ ಹೆಚ್ಚಿನ ದರವನ್ನು ಆಟೋ ಚಾಲಕರು ಕೇಳಿದರೆ, ಪೊಲೀಸ್ ಇಲಾಖೆಗೆ ಅಥವಾ ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.

ಆಹಾರ ಇಲಾಖೆ ನಿವೃತ್ತ ವ್ಯವಸ್ಥಾಪಕ ಪಿ. ಅಂಜಿನಪ್ಪ ವಿಶೇಷ ಉಪನ್ಯಾಸ ನೀಡಿದರು.  ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷೆ ಹೆಚ್. ಅನಿತಾ, ಆಹಾರ ಇಲಾಖೆ ಉಪನಿರ್ದೇಶಕ ಬಿ.ಟಿ. ಪ್ರಕಾಶ್ ಇದ್ದರು.  ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೇಸ್ವಾಮಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ನುಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!