ಬ್ಲ್ಯಾಕ್ ಫಂಗಸ್ ಭಯಬೇಡ:ಅಧಿಕಾರಿಗಳ ಕಾರ್ಯಕ್ಕೆ ಎಂ ಎಲ್ ಸಿ ಬೋಜೆಗೌಡ ಬೇಸರ: ತಾಲ್ಲೂಕು ಆಸ್ಪತ್ರೆಗಳಿಗೆ ಆಕ್ಸಿಜನ್ ಘಟಕ – ಡಾ.ಸುದಾಕರ್

ಬ್ಲ್ಯಾಕ್ ಫಂಗಸ್ ಆತಂಕ ಬೇಡ,ಇದು ಸಾಂಕ್ರಾಮಿಕ ರೋಗವಲ್ಲ,ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಮಾಧ್ಯಮಗಳು ದಯವಿಟ್ಟು ವೈಭವೀಕರಿಸಬೇಡಿ.ಡಾ ಸುದಾಕರ್ ಮನವಿ
ದಾವಣಗೆರೆ: ಬ್ಲ್ಯಾಕ್ ಫಂಗಸ್ ಆತಂಕದ ಅಗತ್ಯವಿಲ್ಲ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡುಬಂದಿದ್ದು, ಜಿಲ್ಲೆಯಲ್ಲಿಯೂ ಈವರೆಗೆ 15 ರಿಂದ 20 ಜನರಿಗೆ ಸೋಂಕು ಕಂಡುಬಂದಿದೆ. ಈ ಸೋಂಕಿಗೆ ರಾಜ್ಯದಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕುವಂತೆ ಮಾಡಲಾಗಿದೆ. ಸೋಂಕು ನಿವಾರಣೆಗೆ ಅಗತ್ಯವಿರುವ ಔಷಧಿ ಪೂರೈಕೆಗೂ ಕ್ರಮ ವಹಿಸಲಾಗಿದ್ದು, ಇದು ಸಾಂಕ್ರಾಮಿಕ ರೋಗವಲ್ಲ, ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟಿರಾಯ್ಡ್ ಬಳಕೆ, ಅನಿಯಂತ್ರಿತ ಮಧುಮೇಹ ಮುಂತಾದ ಕಾರಣಗಳಿಂದ ಈ ಸೋಂಕು ಉಂಟಾಗುತ್ತಿದೆ. ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆ ಹೊಂದಿರುವವರ ಆರೋಗ್ಯ ತಪಾಸಣೆಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಬಿಡುಗಡೆಯಾದ ದಿನದಿಂದ 03, 07,15 ದಿನಗಳ ಅವಧಿಯಲ್ಲಿ ಅವರಿಗೆ ಯಾವ ಬಗೆಯ ಪರೀಕ್ಷೆ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಬ್ಲ್ಯಾಕ್ ಫಂಗಸ್ ಸೋಂಕಿನ ಬಗ್ಗೆ ಮಾಧ್ಯಮಗಳು ದಯವಿಟ್ಟು ವೈಭವೀಕರಿಸುವ ಮೂಲಕ, ಈಗಾಗಲೆ ಕೋವಿಡ್ನಿಂದ ಮಾನಸಿಕವಾಗಿ ಆತಂಕದಲ್ಲಿರುವ ಸಮಾಜದಲ್ಲಿ ಇನ್ನಷ್ಟು ಭಯದ ವಾತಾವರಣ ಕಲ್ಪಿಸಬೇಡಿ ಎಂದು ಆರೋಗ್ಯ ಸಚಿವರು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಭೋಜೇಗೌಡ ಅವರು ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ಸಭೆಯಲ್ಲಿ ಅಸಮಾಧಾನ: ವ್ಯಕ್ತಪಡಿಸಿದರು. ಸೋಂಕಿತರಿಗೆ ಯಾವುದೇಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ, ಯಾರು ಯಾವುದೇ ಮಟ್ಟದ ಪ್ರಭಾವ ಬಳಸಿದರೂ, ಬೆಡ್ ದೊರೆಯುತ್ತಿಲ್ಲ. ಖಾಸಗಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಿಂದ ನಿಗದಿತ ಪ್ರಮಾಣದಲ್ಲಿ ಬೆಡ್ ಪಡೆಯದಿರುವುದನ್ನು ಪ್ರಸ್ತಾಪಿಸಿ, ಈ ನಿಟ್ಟಿನಲ್ಲಿ ಸಚಿವರು ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಶಿಕ್ಷಕರನ್ನು ಕೋವಿಡ್ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಿದ್ದು, ಎಲ್ಲ ಶಿಕ್ಷಕರಿಗೂ
ಲಸಿಕಾಕರಣ ಆಗಬೇಕು. ಜಿಲ್ಲೆಯಲ್ಲಿ ಇನ್ನೂ 700 ಕ್ಕೂ ಹೆಚ್ಚು ಶಿಕ್ಷಕರಿಗೆ ಲಸಿಕೆ ನೀಡಿಲ್ಲ. ಸೋಂಕಿತರ ಪ್ರಾಥಮಿಕ 10 ಹಾಗೂ ದ್ವಿತೀಯ ಹಂತದ 20 ಸಂಪರ್ಕಿತರಿಗೆ ಕೋವಿಡ್ ಟೆಸ್ಟ್ ಮಾಡಬೇಕು, ಆದರೆ
ಜಿಲ್ಲೆಯಲ್ಲಿ ಇದು ಆಗುತ್ತಿಲ್ಲ. ಹೀಗಾಗಿ ಸೋಂಕು ಏರಿಕೆಯಾಗುತ್ತಿದೆ ಎಂದು ಅಸಮಾಧನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು, ಈಗಾಗಲೆ ಕೋವಿಡ್ ಕರ್ತವ್ಯದಲ್ಲಿರುವ ಸರ್ಕಾರಿ ನೌಕರರು, ಶಿಕ್ಷಕರು, ಆರೋಗ್ಯ ಕಾರ್ಯಕರ್ತರು, ಮಾಧ್ಯಮದವರು, ಬ್ಯಾಂಕ್ ಹಾಗೂ ರೈಲ್ವೆ ಸಿಬ್ಬಂದಿಗಳಿಗೆ ಲಸಿಕೆ ನೀಡುವಂತೆ ನಿರ್ದೇಶನ ನೀಡಲಾಗಿದೆ. ಖಾಸಗಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಿಂದ ನಿಗದಿತ ಪ್ರಮಾಣದ ಬೆಡ್ ಗಳನ್ನು ಸರ್ಕಾರದ ಆದೇಶಕ್ಕೆ ಅನುಗುಣವಾಗಿ ತಪ್ಪದೆ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಎಲ್ಲ ತಾಲ್ಲೂಕುಗಳಿಗೆ ಆಕ್ಸಿಜನ್ ಘಟಕ: ಕೋವಿಡ್ ರೋಗಿಗಳಿಗಾಗಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿಯೂ ಆಕ್ಸಿಜನ್ ಘಟಕವನ್ನು ಸ್ಥಾಪಿಸುವ ಆಲೋಚನೆ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಅವರು ತಮ್ಮ ಟ್ರಸ್ಟ್ ವತಿಯಿಂದ 1.5 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಘಟಕ ನೀಡಲು ಕ್ರಮ ವಹಿಸಿದ್ದಕ್ಕಾಗಿ ಹಾಗೂ ಚನ್ನಗಿರಿ ಶಾಸಕರು ಹಾಗೂ ಕೆಸ್ಎಸ್ಡಿಎಲ್ ಅಧ್ಯಕ್ಷರಾದ ಮಾಡಾಳ್ ವಿರುಪಾಕ್ಷಪ್ಪ ಅವರು ಕೂಡ ಚನ್ನಗಿರಿಯಲ್ಲಿ ನಿಗಮದ ವತಿಯಿಂದ ಆಕ್ಸಿಜನ್ ಘಟಕ ಸ್ಥಾಪಿಸಲು ಮುಂದಾಗಿದ್ದಕ್ಕಾಗಿ ಸರ್ಕಾರದ
ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ದಾವಣಗೆರೆ ಜಿಲ್ಲೆಗೆ ಒಟ್ಟು 115 ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ವಿವಿಧ ಮೂಲಗಳಿಂದ ಒದಗಿಸಲಾಗಿದೆ. ರಾಜ್ಯದಲ್ಲಿ 18-44 ವರ್ಷದವರಿಗೆ ಲಸಿಕೆಯನ್ನು ನೀಡುವ ಕಾರ್ಯಕ್ಕೆ ಮರು ಚಾಲನೆ ನೀಡಲಾಗುತ್ತಿದ್ದು, ಡಿಸೆಂಬರ್ ಒಳಗಾಗಿ ಎಲ್ಲರಿಗೂ ಲಸಿಕೆ ಕೊಡಿಸುವ ಪ್ರಯತ್ನ ಮಾಡಲಾಗುವುದು. ಜಿಲ್ಲೆಗೆ ಕೋವಿಡ್ಗೆ ನೀಡಲಾಗುವ ಯಾವುದೇ ಔಷಧಿಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.
ಸಭೆಯಲ್ಲಿ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಮಾಡಾಳ್ ವಿರುಪಾಕ್ಷಪ್ಪ, ಎಸ್.ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ,ರಾಮಪ್ಪ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯತ್ ಸಿಇಒ ಡಾ. ವಿಜಯ ಮಹಾಂತೇಶ್, ಜೆಜೆಎಂಸಿ ಹಾಗೂ ಎಸ್ಎಸ್ ವೈದ್ಯಕೀಯ ಕಾಲೇಜುಗಳ ನಿರ್ದೇಶಕರು, ಪ್ರಾಂಶುಪಾಲರು, ಡಿಹೆಚ್ಒ ಡಾ. ನಾಗರಾಜ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.