ಕುವೆಂಪು ಆಶಯದಂತೆ ವಿಶ್ವಮಾನವರಾಗೋಣ: ಡಿಸಿ ಮಹಾಂತೇಶ್ ಬೀಳಗಿ ಕರೆ

ದಾವಣಗೆರೆ: ಕುವೆಂಪು ಅವರು ನೀಡಿರುವ ಮಾನವೀಯ ಮೌಲ್ಯಗಳು ಮತ್ತು ಬದುಕಿನ ಸಂದೇಶಗಳನ್ನ ಪುನರ್‌ಮನನ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಂಡು, ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯಂತೆ ನಮ್ಮನ್ನು ನಾವು ಯಾವುದೇ ಧರ್ಮ, ಜಾತಿಗೂ ಕಟ್ಟಿಹಾಕಿಕೊಳ್ಳದೇ ಮನುಷ್ಯರಾಗಿ ಬದುಕೋಣ. ಆ ಮೂಲಕ ಕುವೆಂಪು ಅವರ ಎಲ್ಲಾ ಮತವರ್ಗಗಳನ್ನು ದಾಟಿ, ಮನುಜಮತಕ್ಕೆ ಸೇರೋಣ ಎಂದು ಕರೆ ನೀಡಿದರು.

ಹಿರಿಯ ಪತ್ರಕರ್ತರಾದ ಬಿ.ಎನ್. ಮಲ್ಲೇಶ್ ಮಾತನಾಡಿ, ಕುವೆಂಪು ಅವರು ನಾವುಗಳು ಕೇವಲ ಮನುಷ್ಯ ಅಥವಾ ಮಾನವರಾಗದೇ ವಿಶ್ವ ಮಾನವರಾಗೋಣ ಎಂದಿದ್ದಾರೆ. ಅಂತಹ ಮಹನೀಯರನ್ನು ಫೋಟೋಗಷ್ಟೇ ಸೀಮಿತಗೊಳಿಸದೆ ಅವರ ವಿಚಾರಧಾರೆ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ, ನಮ್ಮ ನಡವಳಿಕೆಗಳಲ್ಲೂ ಬದಲಾವಣೆ ಮಾಡಿಕೊಳ್ಳೋಣ ಎಂದರು.

ಕನ್ನಡ ನಾಡು ನುಡಿಯ ಬಗೆಗೆ ಅಪಾರ ಅಭಿಮಾನ ಹೊಂದಿದ್ದ ಅವರು, ಕನ್ನಡ ಹೆಸರಷ್ಟೇ ಅಲ್ಲ, ಅದೊಂದು ಮಂತ್ರ, ಶಕ್ತಿ, ಮೈಮನಗಳನ್ನ ರೋಮಾಂಚನಗೊಳಿಸುವ ದಿವ್ಯ ಶಕ್ತಿ ಎಂದು ನಂಬಿದ್ದರು. ಇದರೊಂದಿಗೆ ಹೆಣ್ಣಿನ ಬಗೆಗೂ ಅಪಾರ ಗೌರವ ಹೊಂದಿದ್ದರು ಎಂದು ನೆನೆದರು.

ಕುವೆಂಪು ಅವರು ಹಾಸ್ಯ ಪ್ರಜ್ಞೆಯ ಮೂಲಕ ಪ್ರಸಂಗವೊಂದನ್ನು ಹೇಳುತ್ತಿದ್ದರು. ಕಾಲ್ಪನಿಕವಾಗಿ ತಾನು ಮರಣಹೊಂದಿ ಸ್ವರ್ಗದ ಬಾಗಿಲಿಗೆ ಹೋದಾಗ ನಾನು ರಾಷ್ಟ್ರ ಕವಿ ಎಂದರೂ ಸ್ವರ್ಗದ ಬಾಗಿಲು ತೆರೆಯಲಿಲ್ಲ, ನಾನು ರಾಮಾಯಣ ದರ್ಶನಂ ಪುಸ್ತಕ ಬರೆದಿದ್ದೇನೆಂದರೂ ಬಾಗಿಲು ತೆರೆಯಲಿಲ್ಲ, ಕೊನೆಗೆ ನಾನು ಹೇಮಾವತಿಯ ಗಂಡ ಎಂದಾಗ ಸ್ವರ್ಗದ ಬಾಗಿಲು ತೆರೆಯಿತು ಎಂದು ಹೇಳುತ್ತಾ ನಾವು ಹೆಣ್ಣನ್ನ ಪೂಜಿಸಿದರೆ ಸಾಲದು, ಅವರಿಗೆ ಗೌರವ ಕೊಡಬೇಕು, ಅದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದನ್ನು ಈ ಮೂಲಕ ಹೇಳಿದ್ದಾರೆ ಎಂದು ತಿಳಿಸಿದರು.

ವೈಚಾರಿಕತೆಗೂ ಬಹಳ ಒತ್ತುಕೊಟ್ಟಿದ್ದ ಅವರು ಮೂಢನಂಬಿಕೆ ಸೇರಿದಂತೆ ಅಜ್ಞಾನ ಹೋಗಲಾಡಿಸಿ, ವೈಚಾರಿಕತೆ ಬೆಳಸಿಕೊಳ್ಳಿ ಎಂದು ಯುವಜನಾಂಗಕ್ಕೆ ಕರೆ ನೀಡಿದ್ದು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಲು ಪ್ರೇರೇಪಿಸುತ್ತಿದ್ದರು ಎಂದರು.

ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಒಕ್ಕಲಿಗ ಸಮಾಜದ ಮುಖಂಡರಾದ ಅಶೋಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೌಸರ್ ರೇಷ್ಮ, ನಗರಾಭಿವೃದ್ದಿ ಕೋಶದ ಯೋಜನಾಧಿಕಾರಿ ನಜ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇದ್ದರು.  ಕಾರ್ಯಕ್ರಮದ ಅಂಗವಾಗಿ ಕುವೆಂಪುರವರ ವಿಶ್ವ ಮಾನವ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಿದರು.

Leave a Reply

Your email address will not be published. Required fields are marked *

error: Content is protected !!