ಸಂಗೀತದಿಂದ ಮನಃಶಾಂತಿ ಸಿಗಲಿದೆ: ಬಸವಪ್ರಭು ಶ್ರೀ

ದಾವಣಗೆರೆ: ಒತ್ತಡದ ಜೀವನದಲ್ಲಿ ಜನರು ಮನಃಶಾಂತಿಯನ್ನೇ ಕಳೆದುಕೊಂಡಿದ್ದಾರೆ. ಕಳೆದುಕೊಂಡಿರುವ ಶಾಂತಿ, ನೆಮ್ಮದಿ ಸಿಗಬೇಕೆಂದರೆ ಸಂಗೀತವನ್ನು ಕೇಳಿರಿ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.
ಶಿವಯೋಗಿ ಮಂದಿರದಲ್ಲಿ ಭಾರತರತ್ನ ಪಂಡಿತ್ ಭೀಮಸೇನ ಜೋಶಿಯವರ ಜನ್ಮಶತಾಬ್ದಿ ಅಂಗವಾಗಿ ಏರ್ಪಡಿಸಿದ್ದ ಭೀಮಪಲಾಸ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಆಧುನಿಕ ಜೀವನದಲ್ಲಿ ಎಲ್ಲಿಲ್ಲದ ಒತ್ತಡ, ಅವಸರ ಕಂಡು ಬರುತ್ತಿದೆ. ಹಾಗಾಗಿ ಯಾರಿಗೂ ಸಹ ಶಾಂತಿ, ನೆಮ್ಮದಿಯೇ ಇಲ್ಲದಂತಾಗಿದೆ. ಜನರು ಹೆಚ್ಚು ಸಂಪಾದನೆ ಮಾಡಬೇಕೆಂದು ದುರಾಸೆಯಿಂದ ದುಡಿಯುತ್ತಿದ್ದಾರೆ. ಹಾಗಾಗಿ, ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ವಿಷಾದಿಸಿದರು.
ಜೀವನದಲ್ಲಿ ಧ್ಯಾನ ಮತ್ತು ಅಧ್ಯಾತ್ಮಿಕತೆಯಿಂದ ನೆಮ್ಮದಿ ದೊರೆಯುತ್ತದೆ. ಅದೇ ತೆರನಾಗಿ ಸಂಗೀತದಿಂದ ನೆಮ್ಮದಿ ಲಭಿಸುತ್ತದೆ. ಅದರಲ್ಲೂ ಹಿಂದೂಸ್ತಾನಿ ಸಂಗೀತ ಹೆಚ್ಚಿನ ನೆಮ್ಮದಿ ನೀಡುತ್ತದೆ. ಈಗಿನ ಸಂಗೀತ ಕೇಳಿದರೆ ಹಾಡು, ಗಾಯನಕ್ಕಿಂತಲೂ ಶಬ್ದವೇ ಹೆಚ್ಚಾಗಿ ಕೇಳಿ ಬರುತ್ತದೆ. ಅತೀವ ಶಬ್ದದ ಸಂಗೀತಕ್ಕೆ ಇಂದಿನ ಯುವ ಜನಾಂಗ ಮಾರು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತರತ್ನ ಪಂಡಿತ್ ಭೀಮಸೇನ್ ಜೋಶಿಯವರು ಹಿಂದೂಸ್ತಾನಿ ಸಂಗೀತಕ್ಕೆ ಕೀರ್ತಿ ತಂದವರು. ಅವರ ಅಮೋಘ ಸಂಗೀತ ಸೇವೆಗಾಗಿ ಭಾರತರತ್ನ ದಂತಹ ಅತ್ಯುನ್ನತ ಪ್ರಶಸ್ತಿ ಕೊಡಮಾಡಿದೆ. ಅವರ ಜನ್ಮ ಶತಮಾನೋತ್ಸವ ಅಂಗವಾಗಿ ದಾವಣಗೆರೆಯಲ್ಲಿ ‘ಭೀಮಪಲಾಸ’ ಹಮ್ಮಿಕೊಂಡಿರುವುದು ಸಂತೋಷ ದ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.
ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ. ರವೀಂದ್ರನಾಥ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ, ಪದ್ಮಶ್ರೀ ಪಂಡಿತ ವೆಂಕಟೇಶ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ, ವಿದುಷಿ ಸಂಗೀತಾ ಕಟ್ಟಿ, ನಗರಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಇತರರು ಇದ್ದರು. ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಎಸ್. ಆರ್. ಗಂಗಪ್ಪ ವಾದಿಸಿದರು.
ಪಂ. ವೆಂಕಟೇಶ್ ಕುಮಾರ್, ಸಂಗೀತಾ ಕಟ್ಟಿ, ತೋಟಪ್ಪ ಉತ್ತಂಗಿ, ಆನಂದಗೌಡ ಪಾಟೀಲ್ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

 
                         
                       
                       
                       
                       
                       
                       
                      