3 ಲಕ್ಷ ಹಣ ನೀಡಿಲ್ಲ ಎಂದು 11 ಲಕ್ಷ ಮೌಲ್ಯದ ಅಕ್ಕಿ ಹಾಗೂ ಲಾರಿ ಎಸ್ಕೇಪ್ ಮಾಡಿದ ವರ್ತಕ
ದಾವಣಗೆರೆ: ವರ್ತಕರೊಬ್ಬರಿಗೆ ತಾವು 3 ಲಕ್ಷ ಹಣ ನೀಡಬೇಕಿತ್ತು. ಜ.6 ರವರೆಗೆ ಅದಕ್ಕೆ ಸಮಯಾವಕಾಶವಿದ್ದರೂ ಸಹ ಅವರು ತಮಗೆ ಸೇರಿದ 11 ಲಕ್ಷ ರು., ಮೌಲ್ಯದ ಅಕ್ಕಿ ದಾಸ್ತಾನು ಹಾಗೂ ಲಾರಿಯನ್ನು ಕಾನೂನುಬಾಹಿರವಾಗಿ
ತೆಗೆದುಕೊಂಡು ಹೋಗಿದ್ದಾರೆ ಎಂದು ಅಕ್ಕಿ ವರ್ತಕ ಕೆ.ಎಂ.ಪ್ರಶಾಂತ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ತಮಗೆ ಸೇರಿದ ಜಿಲ್ಲೆಯ ಹರಿಹರ ಹೊರವಲಯದಲ್ಲಿರುವ ದೋಸ್ತಾನ ರೈಸ್‌ಮಿಲ್‌ನಲ್ಲಿದ್ದ ಅಕ್ಕಿ ದಾಸ್ತಾನು ಮತ್ತು ಲಾರಿಯನ್ನು ಕೊಮಾರನಹಳ್ಳಿ
ವಿಜಯಕುಮಾರ್ ಹಾಗೂ ಸಹಚರರು ಡಿ.30ರಂದು ದೌರ್ಜನ್ಯದಿಂದ
ತೆಗೆದುಕೊಂಡು ಹೋಗಿದ್ದಾರೆ ಎಂದು ಆಪಾದಿಸಿದರು.
ರೈಸ್ ಮಿಲ್ ನಲ್ಲಿದ್ದ 25 ಕೆ.ಜಿ. ತೂಕದ 800 ಪ್ಯಾಕೆಟ್ ಅಕ್ಕಿಯನ್ನು ಅಕ್ರಮವಾಗಿ ತೆಗೆದುಕೊಂಡು ಹೋಗಿದ್ದು, ಇದರ ಮೌಲ್ಯ
11.80 ಲಕ್ಷದಷ್ಟಾಗುತ್ತದೆ. ಅಲ್ಲದೆ, ಅಕ್ಕಿಯನ್ನು ಲೋಡ್ ಮಾಡಿದ್ದ ಲಾರಿಯನ್ನೂ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಕಿಡಿಕಾರಿದರು.
ಈ ಬಗ್ಗೆ ಈಗಾಗಲೇ ಹರಿಹರ ಗ್ರಾಮಾಂತರ ಠಾಣೆ ಮತ್ತು ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿಗೆ ದೂರು ನೀಡಲಾಗಿದೆ. ಕಾನೂನು ರೀತಿ ಕ್ರಮ ಕೈಗೊಳ್ಳುವ ಮೂಲಕ ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು
ಒತ್ತಾಯಿಸಿದರು.
ಪ್ರಕಾಶ್, ಮಟ್ಟಿಕಲ್ ವೀರಭದ್ರಸ್ವಾಮಿ ಮತ್ತಿತರರು ಗೋಷ್ಠಿಯಲ್ಲಿದ್ದರು.