ಕಡ್ಡಾಯ ಸಮವಸ್ತ್ರ ಜಾರಿಗೆ ಹಿಂಜಾವೇ ಒತ್ತಾಯ.
ದಾವಣಗೆರೆ: ಸಮಾನತೆಯನ್ನು ಬೋಧಿಸುವ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ಪಾಲನೆ ಮಾಡಬೇಕೆಂದು ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಇತ್ತೀಚೆಗೆ ರಾಜ್ಯದಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಶಾಲೆ, ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುವುದಾಗಿ ಹಠ ಮಾಡುತ್ತಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದೆ. ಸರಕಾರಿ ಶಾಲೆ ಎಂಬುದು ಸಮಾಜದಲ್ಲಿ ವಿದ್ಯಾದಾನದ ಕೇಂದ್ರವಾಗಿದ್ದು, ಮಕ್ಕಳು ಜಾತಿ, ಮತ, ಪಂಥ, ವರ್ಗಭೇದವಿಲ್ಲದೇ ಪಾಠ ಕಲಿಯಬೇಕಿದೆ ಎಂದರು.
ಸಾಮರಸ್ಯದಿಂದ ಕುಳಿತುಕೊಂಡು ಜ್ಞಾನಾರ್ಜನೆ ಪಡೆಯಲಿ ಎನ್ನುವ ನಿಟ್ಟಿನಲ್ಲಿ ಸಮವಸ್ತ್ರದ ಶಿಸ್ತನ್ನು ತರಲಾಗಿದೆ. ಮೊದಲು ಭಾರತೀಯ ಸಂಸ್ಕೃತಿಯ ವಿದ್ಯಾದೇವತೆ ಸರಸ್ವತಿ ಪೂಜೆಯನ್ನು ಸೆಕ್ಯುಲರಿಸಂನ ಹೆಸರಿನಲ್ಲಿ ಈಗಾಗಲೇ ನಿಲ್ಲಿಸಲಾಗಿದ್ದು ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ. ಈಗ ಶಾಲೆಯಲ್ಲಿ ಮಕ್ಕಳಿಗೆ ಮತಾಧಾರಿತ ತಾರತಮ್ಯ ಮೂಡುವಂತಹ ಉಡುಗೆ ತೊಡುಗೆಗಳಿಗೆ ಅವಕಾಶ ನೀಡುವುದು ಗಾಯದ ಮೇಲೆ ಉಪ್ಪನ್ನು ಸವರಿದಂತೆ ಆಗುತ್ತದೆ ಎಂದು ಹೇಳಿದರು.
ಹಿಜಾಬ್ ಧರಿಸುವುದು ಸಂವಿಧಾನ ನೀಡಿದ ಧಾರ್ಮಿಕ ಹಕ್ಕು ಎಂದು ಪ್ರತಿಪಾದನೆ ನಡೆಯುತ್ತಿದೆ. ಹಾಗೆ ಹೇಳುವಾಗ ಅದೇ ಸಂವಿಧಾನ ಭಾರತೀಯರೆಲ್ಲರಿಗೆ ಸಮಾನತೆಯನ್ನೂ ಪಾಲಿಸಲು ಹೇಳಿರುವುದನ್ನು ಉದ್ದೇಶಪೂರ್ವಕವಾಗಿ ಮರೆಯಲಾಗುತ್ತದೆ. ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕನ್ನು ದುರುಪಯೋಗ ಮಾಡಿಕೊಂಡು ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಮತಿಯ ಪ್ರತ್ಯೇಕತೆಯನ್ನು ಎತ್ತಿಹಿಡಿಯುವ ಪ್ರಯತ್ನದ ಹಿಂದೆ ಮತಾಂಧ ಜಿಹಾದಿ ಮಾನಸಿಕತೆಯ ಶಕ್ತಿಗಳಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಕಿಡಿಕಾರಿದರು.
ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಧರಿಸಿ ಬರುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಹಿಂದು ವಿದ್ಯಾರ್ಥಿಗಳು ಕೆಲವು ಕಾಲೇಜುಗಳಲ್ಲಿ ಕೇಸರಿ ಶಾಲು ಧರಿಸಿ ಬರುತ್ತಿರುವುದು ಸುದ್ದಿಯಾಗುತ್ತಿದೆ. ಇದು ಮುಂದುವರಿದು ಎಲ್ಲಾ ಕೋಮಿನ ವಿದ್ಯಾರ್ಥಿಗಳು ಅವರವರ ಸಾಂಪ್ರಧಾಯಿಕ ಉಡುಪು ಧರಿಸಿ ಕಾಲೇಜುಗಳಿಗೆ ಬಂದರೆ ಶೈಕ್ಷಣಿಕ ವಾತಾವರಣ ಸಂಪೂರ್ಣ ಹದಗೆಡುತ್ತದೆ. ಶಾಲಾ ಕಾಲೇಜುಗಳು ಮಕ್ಕಳ ಮನಸ್ಸಿನಲ್ಲಿ ಸಮಾನತೆಯ ಭಾವನೆ ಬೆಸೆಯಬೇಕೆ ಹೊರತು ಮಾನಸಿಕತೆಯನ್ನಲ್ಲ. ಆದ್ದರಿಂದ ಸಮಾಜದ ಶಾಂತಿಯ ಕಳಕಳಿಯುಳ್ಳ ಸರಕಾರ ಇಂತಹ ಗೊಂದಲಕಾರಿ ಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಈ ವೇಳೆ ಸತೀಶ ಪೂಜಾರಿ, ವೀರೇಶ್, ಮಂಜುನಾಥ್, ಗಣೇಶ, ಚಂದ್ರಮೌಳಿ, ಗಿರೀಶ, ಮಂಜುನಾಥ ಗಾಳಿ, ಮುನಿರಾಜ್, ಸಿದ್ದೇಶ ಇತರರು ಇದ್ದರು.