ಎರಡನೆ ಅಲೆಯ ನಡುವೆ ಕೋವಿಡ್ ಸೋಂಕು ಗೆದ್ದ ಬಾಣಂತಿಯರು, ಹಸುಗೂಸುಗಳು: ಜಿಲ್ಲೆಯಲ್ಲಿ ಸೋಂಕಿತ 142 ಮಂದಿ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ

chigateri hospital gold theft fro covid death patient doctor relative garudavoice

ದಾವಣಗೆರೆ : ಕೋವಿಡ್ ಸೋಂಕಿನ ಭೀತಿ ಗಟ್ಟಿಮುಟ್ಟಾಗಿರುವವರನ್ನೇ ಹೈರಾಣಾಗಿಸುವಂತಹ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಯರು, ಬಾಣಂತಿಯರು ಮತ್ತು ಹಸುಗೂಸುಗಳು ಗುಣಮುಖರಾಗುವ ಮೂಲಕ ಕೊರೊನಾವನ್ನು ಗೆದ್ದಿದ್ದಾರೆ. ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಗರ್ಭಿಣಿಯರ ಚಿಕಿತ್ಸೆಗಾಗಿಯೇ ಪ್ರತ್ಯೇಕ ಐಸೋಲೇಷನ್ ವಾರ್ಡ್ ಪ್ರಾರಂಭಿಸಲಾಗಿದೆ. ಇಲ್ಲಿಯೂ ಕೂಡ ಬೆಡ್ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು, ವಿಶೇಷವಾಗಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೊಂಕಿತ ಗರ್ಭಿಣಿಯರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಹಾಗೂ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ ಸುರಕ್ಷಿತ ಹೆರಿಗೆಯನ್ನೂ ಇಲ್ಲಿನ ವೈದ್ಯರು ಕೈಗೊಂಡು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕೊರೊನಾ ಮೂರನೆ ಅಲೆ ಮಕ್ಕಳಿಗೆ ತೀವ್ರ ಸಂಕಷ್ಟ ತರುವ ಸಾಧ್ಯತೆ ಇದೆ ಎನ್ನುವಂತಹ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿರುವ ಸಂದರ್ಭದಲ್ಲಿಯೇ, ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡಿಸಿ, ಬಾಣಂತಿಯರು ಹಾಗೂ ಹಸುಗೂಸುಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿರುವುದು, ಆತಂಕದ ನಡುವಿನ ಒಳ್ಳೆಯ ಸುದ್ದಿ.

ಸೋಂಕು ಗೆದ್ದ 142 ಬಾಣಂತಿಯರು :
ಕೋವಿಡ್‍ನ ಎರಡನೆ ಅಲೆ ಪ್ರಾರಂಭವಾದ ಏಪ್ರಿಲ್ ನಿಂದ ಈವರೆಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಒಟ್ಟು 124 ಗರ್ಭಿಣಿಯರಿಗೆ ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಹೆರಿಗೆ ಮಾಡಿಸಲಾಗಿದೆ. ಈ ಪೈಕಿ 70 ಸೋಂಕಿತ ಗರ್ಭಿಣಿಯರಿಗೆ ನಾರ್ಮಲ್ ಹೆರಿಗೆಯಾಗಿದ್ದರೆ, 54 ಸಿಸೇರಿಯನ್ ಹೆರಿಗೆಗಳಾಗಿವೆ. 18 ಹಸುಗೂಸುಗಳಿಗೆ ಸೋಂಕು ತಗುಲಿದ್ದು, ಈ ಪೈಕಿ 16 ಶಿಶುಗಳು ಕೊರೊನಾ ಸೋಂಕಿನಿಂದ ಗುಣಮುಖವಾಗಿವೆ. ತೀವ್ರ ಕ್ಲಿಷ್ಟಕರ ಪರಿಸ್ಥಿತಿಯ ಕಾರಣದಿಂದ ಕೇವಲ 02 ಶಿಶುಗಳು ಮಾತ್ರ ಸೋಂಕು ಗೆಲ್ಲಲಾರದೆ ಸಾವಿಗೆ ಶರಣಾಗಿವೆ. ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಶುಶ್ರೂಷಕರು ಸೋಂಕಿತ ಗರ್ಭಿಣಿಯರು, ಬಾಣಂತಿಯರ ಹಾಗೂ ಹಸುಗೂಸುಗಳ ಆರೋಗ್ಯ ಸುರಕ್ಷತೆಗಾಗಿ ಕೈಗೊಂಡ ವಿಶೇಷ ಕಾಳಜಿಯಿಂದಾಗಿ, ಇವರು ಸೋಂಕಿನಿಂದ ಗುಣಮುಖರಾಗಲು ಸಾಧ್ಯವಾಯಿತು.

ಗರ್ಭಿಣಿಯರು, ಬಾಣಂತಿಯರು ಕೊರೊನಾ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಒಳ್ಳೆಯದು, ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದರೂ, ತಕ್ಷಣ ವೈದ್ಯರ ಗಮನಕ್ಕೆ ತಂದು ಚಿಕಿತ್ಸೆ ಪಡೆದರೆ ಯಾವುದೇ ಸಮಸ್ಯೆಯಾಗುವುದಿಲ್ಲ, ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿಯೂ ಒಟು 18 ಸೋಂಕಿತ ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆಯಾಗಿದ್ದು, ಈ ಪೈಕಿ 07 ಸಹಜ ಹೆರಿಗೆ ಹಾಗೂ 11 ಸಿಸೇರಿಯನ್ ಹೆರಿಗೆ ಮಾಡಿಸಲಾಗಿದೆ.
-ಜಿಲ್ಲಾಸ್ಪತ್ರೆಯ ತಜ್ಞ ವೈದ್ಯ ಡಾ. ಗಿರಿಧರ್

ಎದೆ ಹಾಲಿನಿಂದ ಸೊಂಕು ಹರಡಲ್ಲ :

ಕೊರೊನಾ ಇದ್ದರೂ ಕೂಡ ಮಾಸ್ಕ್ ಧರಿಸಿ, ತಾಯಂದಿರು ಹಸುಗೂಸುಗಳಿಗೆ ಹಾಲುಣಿಸಬಹುದು. ತಾಯಿಯ ಎದೆ ಹಾಲಿನಿಂದ ಕೊರೊನಾ ಸೋಂಕು ಮಗುವಿಗೆ ಹರಡುವುದಿಲ್ಲ. ಆದರೆ ಹಾಲುಣಿಸುವಾಗ ತಾಯಂದಿರು ಅತ್ಯಂತ ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸದೆ ಕೆಮ್ಮುವುದು, ಸೀನುವುದು ಮಾಡುವುದರಿಂದ ಮಗುವಿಗೆ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಹೀಗಾಗಿ ತಾಯಂದಿರು ತಪ್ಪದೆ ಮಾಸ್ಕ್ ಧರಿಸಿಯೇ ಮಗುವಿಗೆ ಹಾಲುಣಿಸಬೇಕು, ಬಳಿಕ ಮಗುವನ್ನು ಸುರಕ್ಷಿತ ಅಂತರದಲ್ಲಿ ಪ್ರತ್ಯೇಕವಾಗಿ ಮಲಗಿಸಬೇಕು, ಹಾಲುಣಿಸುವ ಮೊದಲು ಹಾಗೂ ನಂತರ, ಪ್ರತಿ ಬಾರಿಯೂ ತಾಯಿ ಕೈಯನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಒಂದು ವೇಳೆ ಬಾಟಲಿಯಿಂದ ಮಗುವಿಗೆ ಹಾಲುಣಿಸುತ್ತಿದ್ದರೆ, ಪ್ರತಿ ಬಾರಿಯೂ ನಿಪ್ಪಲ್ ಅನ್ನು ಬಿಸಿ ನೀರಿನಿಂದ ತಪ್ಪದೆ ಸ್ವಚ್ಛಗೊಳಿಸಬೇಕು. ಸೊಂಕು ಮುಕ್ತವಾಗುವವರೆಗೂ ತಾಯಂದಿರು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ, ತಾಯಿ, ಮಗುವಿನ ಆರೋಗ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ.

-ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ. ಮೀನಾಕ್ಷಿ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!