ಐಸಿಟಿ ಕಂಪನಿಯೊಂದಿಗೆ ಬಿಐಇಟಿ ಸದಸ್ಯತ್ವ ಒಪ್ಪಂದ

ದಾವಣಗೆರೆ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂವಹನಶೀಲತೆ ಅಗತ್ಯವಿರುವುದರಿಂದ ಬಿಐಇಟಿ ಕಾಲೇಜು ಐಸಿಟಿ ಕಂಪನಿಯೊಂದಿಗೆ ಅಸೋಸಿಯೇಟ್ ಸದಸ್ಯತ್ವ ಒಪ್ಪಂದ ಮಾಡಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ|| ಎಚ್.ಬಿ. ಅರವಿಂದ ತಿಳಿಸಿದ್ದಾರೆ.
ಇಂದಿನ ಹೊಸಯುಗ ಪ್ರತಿಕ್ಷಣ ಹೊಸದನ್ನೇ ಬಯಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಅಪಾರವಾದ ಸ್ಫರ್ಧೆಯನ್ನು ನಿರ್ಮಿಸಿದೆ. ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಂಡು ಬದುಕನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಕೇವಲ ಪರಿಶ್ರಮ, ಶಿಕ್ಷಣ ಸಾಲದಾಗಿದ್ದು, ಅದರ ಜತೆಗೆ ವಿದ್ಯಾರ್ಥಿಗಳು ಸಂವಹನಾಶೀಲತೆ, ಸಮಯ ನಿರ್ವಹಣಾ ಕೌಶಲ್ಯ, ತಂಡದೊಟ್ಟಿಗೆ ಕೆಲಸ ಮಾಡುವ ಕೌಶಲ್ಯ, ಒತ್ತಡ ನಿರ್ವಹಣಾ ಸಾಮರ್ಥ್ಯ ಇತ್ಯಾದಿ ಅನೇಕ ಪಠ್ಯೇತರ ಮೃದು ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅಗತ್ಯವಿರುವದರಿಂದ ಐಸಿಟಿ ಅಕಾಡೆಮಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಐಸಿಟಿ ಅಕಾಡೆಮಿಯು ಕಳೆದ ನಾಲ್ಕು ವರ್ಷಗಳಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಲರ್ನ್ ಥಾನ್, ಪವರ್ ಸೆಮಿನಾರ್, ವೆಬಿನಾರ್, ಸಾಂಘಿಕ ಚರ್ಚೆ ಇತ್ಯಾದಿಗಳ ಮೂಲಕ ಅನೇಕ ಮೃದು ಕೌಶಲ್ಯಗಳಲ್ಲಿ ತರಬೇತಿಯನ್ನು ನೀಡುತ್ತಿದೆ. ಈ ಹೊಸ ಒಪ್ಪಂದದಂತೆ ಇದರ ಜೊತೆಗೆ ವಿವಿಧ ಕಂಪನಿಗಳೊಡನೆ ಒಪ್ಪಂದ ಮಾಡಿಸಿ, ವಿದ್ಯಾರ್ಥಿಗಳಿಗೆ ಉನ್ನತ ತರಬೇತಿಯ ವ್ಯವಸ್ಥೆಯನ್ನು ಮಾಡಿ ಅವರ ಸರ್ವತೋಮುಖ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಈ ಒಪ್ಪಂದವು ಮುಂದಿನ ಐದು ವರ್ಷ ಜಾರಿಯಲ್ಲಿರುತ್ತದೆ ಎಂದವರು ಹೇಳಿದ್ದಾರೆ.
ಒಪ್ಪಂದದ ವೇಳೆ ಐಸಿಟಿ ಕಂಪನಿಯ ರಾಜ್ಯ ಪ್ರಮುಖ ವಿಷ್ಣುಪ್ರಸಾದ್ ಹಾಗೂ ಕಂಪನಿಯ ಜಕಾವುಲ್ಲಾ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪನವರು, ನಿಯೋಜನಾ ಡೀನ್ ಡಾ. ಸಿ.ಆರ್.ನಿರ್ಮಲ ಇವರು ಮತ್ತು ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು ಎಂಬುದಾಗಿ ತಿಳಿಸಿದ್ದಾರೆ.

 
                         
                       
                       
                       
                       
                       
                       
                      