ಕೊರೋನಾ ಪರಿಸರದ ಪಾಠ ಕಲಿಸಲು ಬಂದಿರಬಹುದೇ? ವಿಭಿನ್ನ ರೀತಿಯಲ್ಲಿ ಪರಿಸರ ದಿನ ಆಚರಣೆ – ಡಾ. ಎಚ್. ಕೆ. ಎಸ್. ಸ್ವಾಮಿ

ದಾವಣಗೆರೆ: ಮನುಷ್ಯ ಪರಿಸರವನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾನೆ, ಅದರ ಪ್ರತಿಫಲವಾಗಿ ಇವತ್ತು ಪರಿಸರ ನಮ್ಮನ್ನು ಹಲವು ರೀತಿಯಲ್ಲಿ ಕಾಡುತ್ತಿದೆ. ಆರೋಗ್ಯಪೂರ್ಣವಾದ ಪರಿಸರ ನಾಶವಾಗಿ, ಅನಾರೋಗ್ಯ ಪೂರಕವಾದ ಪರಿಸರ ನಮ್ಮ ದೈನಂದಿನ ಜೀವನದಲ್ಲಿ ತೊಂದರೆ ಉಂಟುಮಾಡುತ್ತಿದೆ. ಕರೋನವೆಂಬ ಮಾರಿ ನಮ್ಮನ್ನ ಸರಿಪಡಿಸಲು ಬಂದಂತಿದೆ. ಪರಿಸರ ನೀಡಿದ ನೀರು, ಗಾಳಿ, ಜಲ, ಮಣ್ಣು, ಮಾಲಿನ್ಯ ಮಾಡಿ, ಬದುಕಿಗಾಗಿ ಪರಿತಪಿಸುವಂತಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.

ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ವಿಶ್ವ ಪರಿಸರ ದಿನಾಚರಣೆ” ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೋನ ನೆಪದಲ್ಲೂ ನಾವು ಸಾಕಷ್ಟು ಪರಿಸರ ಹಾನಿಯನ್ನು ಮಾಡಿದ್ದೇವೆ, ಸತ್ತ ಹೆಣಗಳನ್ನ ಸುಡಲು ಮರಗಳನ್ನ ನಾಶ ಮಾಡಿ, ಸುಡಲು ಸಾದ್ಯವಾಗದ ಹೆಣಗಳನ್ನ ನದಿಗಳಿಗೆ ಎಸೆದು ನೀರನ್ನು ಮಲಿನಗೊಳಿಸಿದ್ದೇವೆ. ಕರೋನ ಬಂದ ಮೇಲೆÉ ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಯಾಗಿ, ಮಹಾನಗರಗಳಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿತ್ತು. ಲಾಕ್ ಡೌನ್ ತೆಗೆದ ತಕ್ಷಣ ಮತ್ತೆ ಸಂಚಾರ ಹೆಚ್ಚಾಗಿ, ಮಾಲಿನ್ಯ ಹೆಚ್ಚಾಗುತ್ತಿದೆ ಎಂದರು.

ಲಾಕ್ ಡೌನ್ ಸಮಯದಲ್ಲಿ ಸ್ವಲ್ಪ ಸೈಕಲ್ ಬಳಕೆ ಹೆಚ್ಚಾಯಿತು. ಬಡವರು ಸೈಕಲ್ ಬಳಕೆ ಮಾಡಿ ಪ್ರಯಾಣ ಬೆಳೆಸಿದರು. ನಂತರವೂ ಸಹ ಸಂಚಾರದಲ್ಲಿ ಒತ್ತಡ ಕಡಿಮೆ ಮಾಡಲು ನಾವು ಸೈಕಲ್‍ಗಳನ್ನು ಬಳಸಬೇಕಾಗಿತ್ತು. ಪೆಟ್ರೋಲ್ ಗಾಡಿಗಳು ಪ್ರಾರಂಭವಾದ ಕೂಡಲೇ ನಾವು ಸೈಕಲ್ ಬಿಡುತ್ತೇವೆ. ಓಝೋನ್ ಪದರವನ್ನು ಸಹ ನಾಶ ಮಾಡಿಕೊಂಡಿದ್ದೇವೆ, ನೀರನ್ನು, ವಿದ್ಯುತ್ತನ್ನು ಮಿತವಾಗಿ ಬಳಸುತ್ತಿಲ್ಲ. ಆಹಾರ ಸಾಮಗ್ರಿಗಳನ್ನು ದುಂದುವೆಚ್ಚ ಮಾಡಿ, ವ್ಯರ್ಥ ಮಾಡುತ್ತಿದ್ದೇವೆ. ಕರೋನ ಸಮಯದಲ್ಲಿ ಬಡವರಿಗೆ ಫುಡ್ ಕಿಟ್ ನೀಡುವ ದೃಶ್ಯ ನಮ್ಮ ಮನಸ್ಸಿನಲ್ಲಿ ಉಳಿಯಬೇಕು. ಭೂಮಿಯ ಮೇಲೆ ರೈತರು ಓತ್ತಡದ ವ್ಯವಸಾಯ ಮಾಡುತ್ತಿದ್ದು, ರಾಸಾಯನಿಕಗಳನ್ನು ಸಿಂಪಡಿಸಿ, ಕುಡಿಯುವ ನೀರು ಮಲಿನಮಾಡಿಕೋಳ್ಳುತ್ತಿದ್ದೇವೆ ಎಂದರು.

ಜನರ ಜೀವನಶೈಲಿ ಸರಳವಾಗಿಲ್ಲ, ಆಡಂಬರದಿಂದ ಕೂಡಿದ್ದು, ಅತಿ ಹೆಚ್ಚು ವಸ್ತುಗಳನ್ನ ಜನ ಖರೀದಿ ಮಾಡುವುದನ್ನು ನಾವು ಲಾಕ್ ಡೌನ್ ಓಪನ್ ಆದಾಗ ನೋಡಬಹುದು. ಮುಗಿಬಿದ್ದು ಜನ ವಸ್ತುಗಳನ್ನು ಖರೀದಿ ಮಾಡುತ್ತಾರೆ. ನಾವು ಸ್ವಲ್ಪವೂ ಸರಳತೆ ಅಳವಡಿಸಿಕೊಂಡಿಲ್ಲ. ಕರೋನದಿಂದ ಗ್ರಾಮೀಣ ಜನರ ಕೆಲಸವಿಲ್ಲದಂತಾಗಿ ನಗರಗಳಿಗೆ ಮರು ವಲಸೆ ಹೋಗುತ್ತಿದ್ದಾರೆ, ವಲಸೆಯಿಂದ ಅಲ್ಲಿ ಕೊಳಚೆ ಪ್ರದೇಶಗಳ ನಿರ್ಮಾಣವಾಗುತ್ತಿದೆ. ವರ್ಷಪೂರ್ತಿ ನಾವು ಪರಿಸರ ಜಾಗೃತಿ ಕಾÀರ್ಯಕ್ರಮಗಳನ್ನ ಮಾಡಿದರೂ ಸಹ ಸಾಲದಾಗಿದೆ.

ಜನರ ಮನಸ್ಸಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವಂತಹ ಕೆಲಸಗಳಾಗಬೇಕಾಗಿದೆ. ಶಿಕ್ಷಣದಲ್ಲಿ ಮಕ್ಕಳಿಗೆ ಪರಿಸರ ಜಾಗೃತಿಯನ್ನು ಮೂಡಿಸಿ, ಜನರ ಚಟುವಟಿಕೆಗಳಲ್ಲಿ ಬದಲಾವಣೆ ತಂದಾಗ ಮಾತ್ರ ಭೂಮಿಯ ಆರೋಗ್ಯವನ್ನ ಕಾಪಾಡಬಹುದು ಎಂದರು.

ಕಾರ್ಯಕ್ರಮದಲ್ಲಿ ಹೆಚ್. ಎಸ್. ರಚನ ಮತ್ತು ಹೆಚ್. ಎಸ್. ಪ್ರೇರಣ, ಪರಿಸರದ ಗೀತೆಗಳನ್ನ ಹಾಡಿ ಜನರನ್ನ ಜಾಗೃತಗೊಳಿಸಲಾಯಿತು. ಪರಿಸರದ ಬಿತ್ತಿ ಪತ್ರಗಳನ್ನ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕೆಜೆವಿಸ್ ಉಪಾಧ್ಯಕ್ಷರಾದ ಶ್ರೀ. ಜಯದೇವಮೂರ್ತಿ, ಶ್ರೀಮತಿ ಸುಮ ಕೆಂಚರೆಡ್ಡಿ, ಭಾರತಿ, ಅಂಶುಲ್, ಚಂದ್ರಪ್ಪ ಹಾಜರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!