ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗೆ ಮೋದಿ ಮೆಚ್ಚುಗೆ

ನವದೆಹಲಿ: ಸತ್ಯ ಘಟನೆ ಆಧರಿಸಿ ನಿರ್ಮಾಣವಾದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ತಂಡ ಶನಿವಾರ (ಮಾ.12) ನರೇಂದ್ರ ಮೋದಿ ಅವರ ಭೇಟಿ ಮಾಡಿದೆ. ಇದರಿಂದ ಚಿತ್ರ ತಂಡಕ್ಕೆ ಹೊಸ ಉತ್ತೇಜನ ಸಿಕ್ಕಂತಾಗಿದೆ. ಹಲವು ಕಾರಣಗಳಿಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಕ್ತ ಪ್ರಚಾರ ಸಿಗದ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿಲ್ಲ. ಆದರೂ ಈಗ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಂಡ ನರೇಂದ್ರ ಮೋದಿ ಭೇಟಿ ನಂತರ ಫುಲ್ ಖುಷಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತು ಆಡಿರುವುದು ಈ ಖುಷಿಗೆ ಕಾರಣ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚಿತ್ರ ತಂಡ ಪೋಸ್ಟ್ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಅವಕಾಶ ‘ದಿ ಕಾಶ್ಮೀರ್ ಫೈಲ್ಸ್’ ತಂಡಕ್ಕೆ ಸಿಕ್ಕಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ಮಾಪಕ ಅಭಿಷೇಕ್ ಅಗರ್ವಾಲ್, ವಿವೇಕ್ ಅಗ್ನಿಹೋತ್ರಿ ಪತ್ನಿ ಪಲ್ಲವಿ ಜೋಶಿ ಅವರು ಮೋದಿ ಜೊತೆ ಕ್ಲಿಕ್ಕಿಸಿಕೊಂಡ ಈ ಫೋಟೋ ಸಿನಿಪ್ರಿಯರ ವಲಯದಲ್ಲಿ ವೈರಲ್ ಆಗಿದೆ.
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಮತ್ತು ಹತ್ಯೆಯನ್ನು ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ಮಾಣ ಆಗಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ, ಮಿಥುನ್ ಚಕ್ರವರ್ತಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಮೊದಲ ದಿನ ಈ ಸಿನಿಮಾ 3.55 ಕೋಟಿ ರೂ. ಗಳಿಸಿದೆ. ಮೋದಿ ಭೇಟಿ ಬಳಿಕ ಚಿತ್ರಕ್ಕೆ ಭಾರಿ ಪ್ರಚಾರ ಸಿಕ್ಕಿದ್ದು, ಗಳಿಕೆ ಹೆಚ್ಚುವ ಸಾಧ್ಯತೆ ಇದೆ. ಹರಿಯಾಣದಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಲಾಗಿದೆ.
ಸಾಕಷ್ಟು ವಿವಾದಗಳ ಕಾರಣದಿಂದಲೂ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸುದ್ದಿ ಆಗುತ್ತಿದೆ. ಈ ಚಿತ್ರಕ್ಕೆ ಈಗ ಕೋರ್ಟ್ನಿಂದ ನಿರ್ಬಂಧ ಎದುರಾಗಿದೆ. ಭಾರತೀಯ ವಾಯುಪಡೆಯ ಅಧಿಕಾರಿ ರವಿ ಖನ್ನಾ ಅವರ ದೃಶ್ಯಗಳನ್ನು ತೋರಿಸದಂತೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ತಂಡಕ್ಕೆ ಜಮ್ಮು ಕೋರ್ಟ್ ನಿರ್ದೇಶನ ನೀಡಿದೆ. ಮಾರ್ಚ್ 4ರಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ವಿಶೇಷ ಪ್ರದರ್ಶನ ಇರಿಸಲಾಗಿತ್ತು. ಈ ವಿಶೇಷ ಶೋನಲ್ಲಿ ರವಿ ಖನ್ನಾ ಅವರ ಪತ್ನಿ ನಿರ್ಮಲ್ ಖನ್ನಾ ಅವರು ಕೂಡ ಪಾಲ್ಗೊಂಡಿದ್ದರು. ‘ಸಿನಿಮಾದಲ್ಲಿ ನನ್ನ ಪತಿಗೆ ಸಂಬAಧಿಸಿದ ದೃಶ್ಯಗಳನ್ನು ತಿರುಚಲಾಗಿದೆ. ರವಿ ಖನ್ನಾ ಅವರನ್ನು ತಪ್ಪಾದ ರೀತಿಯಲ್ಲಿ ತೋರಿಸಲಾಗಿದೆ’ ಎಂದು ದೂರಿದ್ದರು. ಆದರೆ, ಚಿತ್ರತಂಡ ಆ ಬಗ್ಗೆ ಲಕ್ಷ÷್ಯ ವಹಿಸಲಿಲ್ಲ. ಈ ಕಾರಣಕ್ಕೆ ಅವರು ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದಾರೆ.