ರಷ್ಯಾ ಗಡಿಯಲ್ಲಿ ಅಮೆರಿಕದ 12 ಸಾವಿರ ಸೈನಿಕರು
ಕೀವ್/ಮಾಸ್ಕೋ: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು ಸದ್ಯದಲ್ಲೇ ಮೂರನೇ ವಿಶ್ವ ಯುದ್ಧವಾಗಿ ಮಾರ್ಪಾಡಾಗಲಿದೆಯೇ ಎಂಬ ಅನುಮಾನ ದಟ್ಟವಾಗಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಶನಿವಾರ ಏಕಾಏಕಿ ತನ್ನ 12 ಸಾವಿರ ಸೈನಿಕರನ್ನು ರಷ್ಯಾದ ಗಡಿ ಯುದ್ದಕ್ಕೂ ನಿಯೋಜಿಸಿದ್ದಾರೆ. ರಷ್ಯಾದೊಂದಿಗೆ ಗಡಿ ಹಂಚಿಕೊಂಡಿರುವ ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ, ರೊಮೇನಿಯಾ ದೇಶಗಳಲ್ಲಿ ಅಮೆರಿಕದ ಸೇನೆಗಳಿವೆ. ಜತೆಗೆ, ಉಕ್ರೇನ್‌ನಲ್ಲಿ ಆರಂಭಿಸಿರುವ ಯುದ್ಧವು ಪುಟಿನ್‌ಗೆ ಯಾವ ಕಾರಣಕ್ಕೂ ಜಯ ತಂದುಕೊಡುವುದಿಲ್ಲ ಎಂದೂ ಬೈಡೆನ್ ಗುಡುಗಿದ್ದಾರೆ. ಸೇನೆ ಜಮಾಯಿಸುವ ಮೂಲಕ ಅಮೆರಿಕವು ರಷ್ಯಾ ವಿರುದ್ಧ ನೇರ ಹೋರಾಟಕ್ಕೆ ಸಜ್ಜಾಗಿರುವ ಸುಳಿವು ನೀಡಿದೆ. ಅಮೆರಿಕವು ರಷ್ಯಾ ವಿರುದ್ಧ ದಾಳಿ ಆರಂಭಿಸಿದರೆ 3ನೇ ವಿಶ್ವಯುದ್ಧ ಆರಂಭವಾಯಿತೆಂದೇ ಅರ್ಥ.
3ನೇ ವಿಶ್ವಯುದ್ಧ ಅಲ್ಲ :
ರಷ್ಯಾ ಗಡಿಯಲ್ಲಿ ಸೇನೆ ನಿಯೋಜಿಸಿರುವ ವಿಚಾರವನ್ನು ಶನಿವಾರ ಘೋಷಿಸಿರುವ ಬೈಡೆನ್, ನಾವು ಉಕ್ರೇನ್‌ನಲ್ಲಿ ಮೂರನೇ ವಿಶ್ವ ಯುದ್ಧ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ನ್ಯಾಟೋದ ಪ್ರತಿ ಇಂಚನ್ನೂ ರಕ್ಷಿಸಲು ನಾವು ಬದ್ಧರಾಗಿದ್ದೇವೆ ಎಂಬ ಸಂದೇಶವನ್ನು ರಷ್ಯಾಕ್ಕೆ ರವಾನಿಸುತ್ತಿದ್ದೇವೆ ಎಂದಿದ್ದಾರೆ.
ಹಲವು ನಗರಗಳಿಗೆ ವ್ಯಾಪಿಸಿದ ದಾಳಿ :
ಈ ಹಿಂದೆ ಸಿರಿಯಾ ಹಾಗೂ ಚೆಚೆನ್ಯಾದಲ್ಲಿ ಬಳಸಿದ ಕಾರ್ಯತಂತ್ರವನ್ನೇ ಉಕ್ರೇನ್‌ನಲ್ಲೂ ರಷ್ಯಾ ಬಳಸುತ್ತಿದೆ. ನಿರಂತರ ವೈಮಾನಿಕ ಹಾಗೂ ಶೆಲ್ ದಾಳಿ ಮೂಲಕ ಮೊದಲಿಗೆ ಶಸ್ತ್ರಾಸ್ತ್ರ ಪ್ರತಿರೋಧವನ್ನು ಕಿವುಚಿ ಹಾಕುವುದು ಪುಟಿನ್ ಕಾರ್ಯತಂತ್ರವಾಗಿದೆ. ಅದರಂತೆ, ಆರಂಭದಲ್ಲಿ ಕೆಲವೇ ನಗರಗಳಿಗೆ ಸೀಮಿತವಾಗಿದ್ದ ದಾಳಿಯು ಈಗ ಹಲವು ನಗರಗಳಿಗೆ ವ್ಯಾಪಿಸಿದೆ. ಶನಿವಾರ ರಷ್ಯಾ ಪಡೆಗಳು ಮರಿಯುಪೋಲ್‌ನ ಐತಿಹಾಸಿಕ ಮಸೀದಿಯೊಂದರ ಮೇಲೆ ಶೆಲ್ ದಾಳಿ ನಡೆಸಿದೆ. ಈ ಮಸೀದಿಯಲ್ಲಿ 34 ಮಕ್ಕಳು ಸಹಿತ 80ಕ್ಕೂ ಅಧಿಕ ಮಂದಿ ಆಶ್ರಯ ಪಡೆದಿದ್ದರು. ದಾಳಿಯಿಂದಾಗಿ ಉಂಟಾದ ಸಾವು-ನೋವಿನ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ಉಕ್ರೇನ್ ಹೇಳಿದೆ.
ಮರಿಯುಪೋಲ್‌ನಲ್ಲಿ ಸತತ ದಾಳಿ ನಡೆಸುವ ಮೂಲಕ ರಷ್ಯಾ ಪಡೆ ನಗರಕ್ಕೆ ಆಹಾರ, ನೀರು ಸರಬರಾಜು ಆಗದಂತೆ ಹಾಗೂ ನಾಗರಿಕರ ಸ್ಥಳಾಂತರವಾಗದಂತೆ ನೋಡಿಕೊಳ್ಳುತ್ತಿದೆ. ಮಿಕೋಲಾಯಿವ್ ಎಂಬಲ್ಲಿ ಕ್ಯಾನ್ಸರ್ ಆಸ್ಪತ್ರೆ ಮೇಲೆ ರಷ್ಯಾ ಬಾಂಬ್ ಹಾಕಿದೆ ಎಂದೂ ಹೇಳಲಾಗಿದೆ. ಒಟ್ಟಿನಲ್ಲಿ ರಾಜಧಾನಿ ಕೀವ್, ವಾಸ್ಕೀವ್, ಮರಿಯುಪೋಲ್, ಮೆಲಿಟೋಪೋಲ್ ಸಹಿತ ಹಲವು ನಗರಗಳ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ.
ಬಾಹ್ಯಾಕಾಶ ಕೇಂದ್ರ ಧ್ವಂಸ ಬೆದರಿಕೆ :
ದಿಗ್ಬಂಧನದಿಂದ ನಲುಗಿರುವ ರಷ್ಯಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ (ಐಎಸ್‌ಎಸ್)ವನ್ನು ಧ್ವಂಸಗೊಳಿಸುವ ಬೆದರಿಕೆ ಹಾಕಿ ಅಮೆರಿಕದ ನಾಸಾ ಮತ್ತು ಕೆನಡಾ, ಯುರೋಪ್ ಸಹಿತ ಇತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಗಳಿಗೆ ಪತ್ರ ಬರೆದಿದೆ. ನಿರ್ಬಂಧನಗಳಿಂದಾಗಿ ಬಾಹ್ಯಾಕಾಶ ಕೇಂದ್ರದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನಿರ್ಬಂಧ ತೆರವುಗೊಳಿಸದಿದ್ದರೆ, ಬಾಹ್ಯಾಕಾಶ ಕೇಂದ್ರವನ್ನೇ ನಾಶ ಮಾಡಬೇಕಾಗುತ್ತದೆ. 500 ಟನ್ ತೂಕದ ಐಎಸ್‌ಎಸ್ ಎಲ್ಲಾದರೂ ಪತನಗೊಳ್ಳಲಿದೆ ಎಂದು ರಷ್ಯಾ ಬೆದರಿಕೆ ಹಾಕಿದೆ. ಪ್ರಸ್ತುತ ಈ ಕೇಂದ್ರದಲ್ಲಿ ನಾಸಾದ ನಾಲ್ವರು, ರಷ್ಯಾದ ಇಬ್ಬರು ಮತ್ತು ಯುರೋಪ್‌ನ ಒಬ್ಬ ಗಗನಯಾತ್ರಿ ಇದ್ದಾರೆ.