ಮನೆಬಾಗಿಲಿಗೆ ಕಂದಾಯ ದಾಖಲೆ ವಿತರಿಸಲು ಕ್ರಮವಹಿಸಿ, ಮಾರ್ಚ್ 21ರಿಂದ 27ರೊಳಗೆ ದಾಖಲೆ ವಿತರಿಸಲು ಗಡುವು
ವಿದ್ಯಾನಾಯ್ಕ್ ಅರೇಹಳ್ಳಿ
ದಾವಣಗೆರೆ : ಯಾವ ರೈತರ ಮನೆಬಾಗಿಲಿಗೆ ಕಂದಾಯ ದಾಖಲೆಗಳು ಸ್ವೀಕೃತವಾಗಿರುವುದಿಲ್ಲವೋ ಅಂತಹ ರೈತರಿಗೆ 21ನೇ ಮಾರ್ಚ್ 2022 ರಿಂದ 27ನೇ ಮಾರ್ಚ್ 2022ರ ಅವಧಿಯಲ್ಲಿ ರಾಜ್ಯದ ಎಲ್ಲಾ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಪಹಣಿ (ಆರ್.ಟಿ.ಸಿ.), ಅಟ್ರಾಸ್, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಉಚಿತ ವಾಗಿ ವಿತರಿಸಲು ಕ್ರಮ ವಹಿಸುವಂತೆ ಸೂಚಿಸಿ ಕಂದಾಯ ಇಲಾಖೆ ಹಾಗೂ ಸರ್ಕಾರದ ಉಪಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಎಂ.ಎನ್ ಇವರು ಮಾ. 19ರಂದು ಸುತ್ತೋಲೆ ಹೊರಡಿಸಿದ್ದಾರೆ.
ಅಷ್ಟೇಅಲ್ಲದೆ ಎಲ್ಲಾ ರೈತರುಗಳಿಗೆ ಕಂದಾಯ ದಾಖಲೆಗಳು ಉಚಿತವಾಗಿ ತಲುಪಿಸಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ರೈತರುಗಳ ಆಧಾರ್ ಕಾರ್ಡ್ ಬಳಸಿ ಗುರುತಿಸುವುದು. ಒಂದು ವೇಳೆ ಆಧಾರ್ ಕಾರ್ಡ್ ಲಭ್ಯವಿಲ್ಲದಿದ್ದಲ್ಲಿ ಪಡಿತರ ಚೀಟಿ ಬಳಸಿ ಗುರುತಿಸುವುದು. ಮುಂದುವರೆದು, ರೈತರ ಮೊಬೈಲ್ ಸಂಖ್ಯೆ ಲಭ್ಯವಿದ್ದಲ್ಲಿ ಸಂಗ್ರಹಿಸಬೇಕೆಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ಕಂದಾಯ ದಾಖಲೆಗಳನ್ನು ರೈತರ ಮನಬಾಗಿಲಿಗೆ ತಲುಪಿಸುವ ಮಹತ್ತರ ಯೋಜನೆಯನ್ನು ಹಮ್ಮಿಕೊಂಡಿದ್ದು, ಇದರನ್ವಯ ಭೂಮಾಲೀಕತ್ವದ ಕಂದಾಯ ದಾಖಲೆಗಳಾದ, ಪಹಣಿ (ಆರ್.ಟಿ.ಸಿ) ಅಟ್ರಾಸ್, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ರೈತರ ಮನೆ ಬಾಗಿಲಿಗೆ ಒದಗಿಸಲಾಗುತ್ತಿದೆ.
ಮುಖ್ಯಮಂತ್ರಿಗಳವರು ಹಾಗೂ ಕಂದಾಯ ಸಚಿವರು 12ನೇ ಮಾರ್ಚ್ 2022 ರಂದು ಉದ್ಘಾಟಿಸಿ ಚಾಲನೆ ನೀಡಿರುತ್ತಾರೆ. ಇದೇ ರೀತಿಯಾಗಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳು ಈ ಯೋಜನೆಗೆ ಚಾಲನೆ ನೀಡಿರುತ್ತಾರೆ. ಈ ಯೋಜನೆಯನ್ವಯ ದಿನಾಂಕ 12 ಮತ್ತು 13ನೇ ಮಾರ್ಚ್ 2022 ರಂದು ಎಲ್ಲಾ ಜಿಲ್ಲೆಗಳಲ್ಲಿ ಅಂದಾಜು 50 ಲಕ್ಷ ರೈತ ಕುಟುಂಬಗಳಿಗೆ, ಸುಮಾರು 4 ಕೋಟಿ ದಾಖಲೆಗಳನ್ನು ವಿತರಿಸಲಾಗಿರುತ್ತದೆ. ಅಲ್ಲದೆ, ರಾಜ್ಯದ ಎಲ್ಲಾ ರೈತರುಗಳಿಗೆ ಅವರುಗಳ ಕಂದಾಯ ದಾಖಲೆಗಳನ್ನು ಉಚಿತ ವಾಗಿ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಈಗಾಗಲೇ ನಿರ್ದೇಶನ ನೀಡಲಾಗಿರುತ್ತದೆ. ಮುಂದುವರೆದು, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಕೆಳಗಿನಂತೆ ಕ್ರಮವಹಿಸಲು ತಿಳಿಸಲಾಗಿದೆ.