ಬಸ್ ನಿಲ್ದಾಣದಲ್ಲಿ ಕಣ್ಮರೆಯಾದ ಗ್ರಾಮದ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್, ಹುಡುಕ್ತಾನೆ ಇರೋಣ ಗ್ರಾಮದ ಹೆಸರು?

ದಾವಣಗೆರೆ : ಜನರ ತೆರಿಗೆ ಹಣದಿಂದ ನಡೆಯುವ ಸರ್ಕಾರ, ಜನರ ಹಣದಿಂದಲೇ ಅಭಿವೃದ್ಧಿ ಕೆಲಸ ಮಾಡುವ ಜನಪ್ರತಿನಿಧಿಗಳು ಅದಕ್ಕೆ ತಗುಲಿದ ಖರ್ಚು ವೆಚ್ಚದ ಮಾಹಿತಿ ಸರಿಯಾಗಿ ಬರೆಸದಿದ್ದರೂ ಅವರ ಹೆಸರನ್ನಂತು ದಪ್ಪ ಅಕ್ಷರಗಳಲ್ಲಿ ಬರೆಸಿರುತ್ತಾರೆ. ಈ ರೀತಿ ಇರುವ ಒಂದು ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡ ಲಾಗಿದ್ದು ವ್ಯಾಪಕ ಚರ್ಚೆಗೆ ಒಳಗಾಗಿದೆ. ಬಸ್ ನಿಲ್ದಾಣಗಳಲ್ಲಿ ಅದು ಯಾವ ಗ್ರಾಮದ ವ್ಯಾಪ್ತಿಗೆ ಒಳಪಡುತ್ತೆಯೋ ಆ ಗ್ರಾಮದ ಹೆಸರನ್ನು ದಪ್ಪ ಹೆಸರಿನಲ್ಲಿ ಬರೆಸಬೇಕು. ಆಗ ಬೇರೆ ಗ್ರಾಮಗಳಿಂದ ಬರುವ ಜನರಿಗೆ ಇದು ಯಾವ ಊರು ಎಂಬುದು ತಿಳಿಯುತ್ತದೆ. ಆದರೆ ಇತ್ತೀಚಿಗೆ ಯಾವ ಶಾಸಕರ ಅವಧಿಯಲ್ಲಿ ಕಾಮಗಾರಿ ನಡೆದಿದೆಯೋ ಆ ಶಾಸಕರ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಸಿರುತ್ತಾರೆ, ಗ್ರಾಮದ ಹೆಸರನ್ನು ಚಿಕ್ಕ ಅಕ್ಷರಗಳಲ್ಲಿ ಅಥವಾ ಹೆಸರೇ ನಮೂದಿಸದೇ ಇರುವುದು ಸಾಮಾನ್ಯ ಸಂಗತಿಯಾಗಿದೆ ಈಗಿನ ರಾಜಕೀಯ ವ್ಯವಸ್ಥೆಯಲ್ಲಿ.


ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮವೊಂದರಲ್ಲಿ 2020-21ನೇ ಸಾಲಿನ ಶಾಸಕರ ಪ್ರದೇಶಭಿವೃದ್ಧಿ ಯೋಜನೆ ಅಡಿಯಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದ್ದು ಗ್ರಾಮ ಮತ್ತು ಯೋಜನೆ ಹಾಗೂ ಖರ್ಚು ವೆಚ್ಚದ ಮಾಹಿತಿಗಿಂತ ಶಾಸಕರ ಹೆಸರೇ ದಪ್ಪ ಅಕ್ಷರಗಳಲ್ಲಿ ಕಾಣುವಂತೆ ಬರೆಸಲಾಗಿದೆ. ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರ ಹೆಸರೇ ದಪ್ಪ ಅಕ್ಷರಗಳಲ್ಲಿ ಕಾಣುತ್ತಿದ್ದೂ ಗ್ರಾಮದ ಹೆಸರು ಎಲ್ಲಿದೆ ಎಂದು ಹುಡುಕಾಡಬೇಕಾಗಿದೆ. ಇದನ್ನು ಗಮನಿಸಿದ ವ್ಯಕ್ತಿ ಒಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿಬಿಟ್ಟು ಈ ಊರ ಹೆಸರು? ಇದು ಸ್ವಂತ ಕಟ್ಟಡವೇ ಎಂದು ಬರೆದಿದ್ದಾರೆ. ಅಂದರೆ ಇದು ಶಾಸಕರ ಸ್ವಂತ ಕಟ್ಟಡವೇ ಎನ್ನುವಂತೆ ಪ್ರಶ್ನಿಸಿದ್ದಾರೆ. ಇನ್ನು ನೆಟ್ಟಿಗರು ಹುಡುಕ್ತಾನೇ ಇರೋಣ ಎಂದು ಹಾಸ್ಯ ಚಟಾಕಿ ಹಾರಿಸುವ ಮೂಲಕ ಸರ್ಕಾರದ ಕೆಲಸವನ್ನು ಪ್ರಶ್ನಿಸಿದ್ದಾರೆ.

ಜನ ಸಾಮಾನ್ಯರು ತೆರಿಗೆ ಕಟ್ಟುವ ಮೂಲಕ ದೇಶ ಅಭಿವೃದ್ಧಿಗೆ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿರುವಾಗ ಜನರ ಹಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಶಾಸಕರು ತಮ್ಮ ಹೆಸರನ್ನು ಬರೆಸುವುದು ಎಷ್ಟರ ಮಟ್ಟಿಗೆ ಸರಿ? ಕೊನೆಯ ಪಕ್ಷ ಗ್ರಾಮದ ಹೆಸರನ್ನು ಬರೆಸದೆ ಇದ್ದರೆ ಹೇಗೆ? ಬೇರೆ ಗ್ರಾಮಗಳಿಂದ ಬರುವ ಜನ ಊರು ಯಾವುದೆಂದು ನೋಡುತ್ತಾರೆ ಹೊರತು ಶಾಸಕರ ಹೆಸರು ನೋಡುವುದಿಲ್ಲ.. ಹಾಗಾಗಿ ಗ್ರಾಮದ ಹೆಸರು ದಪ್ಪ ಅಕ್ಷರಗಳಲ್ಲಿ ಬರೆಸಬೇಕೆಂಬುದು ಇದರ ತಿರುಳು.

Leave a Reply

Your email address will not be published. Required fields are marked *

error: Content is protected !!