ಕೇಂದ್ರ ಸರಕಾರದ ವಿವಿಧ ಯೋಜನೆಗಳನ್ನ ವಿರೋಧಿಸಿ ಹಾಗೂ ಬೇಡಿಕೆಗೆ ಆಗ್ರಹಿಸಿ ಜಿಲ್ಲಾ ಕೇಂದ್ರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಮೆರವಣಿಗೆ

Karmika sangatane

ದಾವಣಗೆರೆ: ಕೇಂದ್ರ ಸರಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ, ರೈತ ವಿರೋಧಿ ಧೋರಣೆ ಹಾಗೂ ಬ್ಯಾಂಕ್ ಖಾಸಗೀಕರಣದ ಪ್ರಸ್ತಾಪವನ್ನು ವಿರೋಧಿಸಿ ಮತ್ತು ಬ್ಯಾಂಕ್‌ಗಳಲ್ಲಿ ಸಾಕಷ್ಟು ನೇಮಕಾತಿ ಮಾಡಲು, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಕ್ರಮ ಕೈಗೊಳ್ಳಲು ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ವಿರೋದಿಸಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು, ನೆರಳು ಬೀಡಿ ಕಾರ್ಮಿಕರ ಸಂಘಟನೆ, ಆಂಜನೇಯ ಕಾಟನ್ ಮಿಲ್ ಎಂಪ್ಲಾಯೀಸ್ ಯೂನಿಯನ್, ಸಾಮಿಲ್ ನೌಕರರ ಸಂಘ, ಮುದ್ರಣ ವಲಯದ ನೌಕರರ ಸಂಘಟನೆ ಹಾಗೂ ಇನ್ನಿತರ ಸಂಘಟನೆಗಳು ಇಂದು ಎರಡನೇ ದಿನವೂ ಮುಷ್ಕರ ನಡೆಸಿದರು‌. ಎರಡನೇ ದಿನದ ಮುಷ್ಕರದ ಅಂಗವಾಗಿ ಇಂದು ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಕಾರ್ಮಿಕರ ಮೆರವಣಿಗೆ, ಮತ ಪ್ರದರ್ಶನ ಹಾಗೂ ಜಯದೇವ ವೃತ್ತದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು.

ದೇಶ ಉಳಿಸಿ – ಜನರನ್ನು ರಕ್ಷಿಸುವುದಕ್ಕಾಗಿ ಈ ಮುಷ್ಕರ…
ಬಲಿಷ್ಠವಾದ ಸಾರ್ವಜನಿಕ ಉದ್ದಿಮೆಗಳು ಮಾತ್ರ ಖಾಸಗಿ ಕಂಪೆನಿಗಳ ಶೋಷಣೆ ತಡೆಯಬಲ್ಲವು…
– ಕೆ.ರಾಘವೇಂದ್ರ ನಾಯರಿ
ಜಿಲ್ಲಾಧ್ಯಕ್ಷ – ಎಐಟಿಯುಸಿ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಹೊತ್ತಿನಲ್ಲೂ ಕಾರ್ಮಿಕರ ಶೋಷಣೆ ನಡೆಯುತ್ತಿದೆ…
– ಹೆಚ್.ಜಿ.ಉಮೇಶ್ ಅವರಗೆರೆ

ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ದೇಶದ ಆಸ್ತಿಯನ್ನು ಉಳಿಸಿಕೊಳ್ಳಲು ಈ ಹೋರಾಟ…
– ಕೈದಾಳೆ ಮಂಜುನಾಥ್
ಎಐಯುಟಿಯುಸಿ AIUTUC

ದಾವಣಗೆರೆ ಜಿಲ್ಲಾ ಜೆಸಿಟಿಯು ಮತ್ತು ಎಐಟಿಯುಸಿ ಅಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ ದೇಶವನ್ನು ಉಳಿಸಿ-ಕಾರ್ಮಿಕರನ್ನು ರಕ್ಷಿಸಿ ಎನ್ನುವ ಘೋಷಣೆಯೊಂದಿಗೆ ದೇಶಾದ್ಯಂತ ಸುಮಾರು 25 ಕೋಟಿ ಕಾರ್ಮಿಕರು ಎರಡು ದಿನಗಳ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಮಾಡುತ್ತಿದ್ದಾರೆ. ದೇಶದ ಆಸ್ತಿಗಳಾದ ಬ್ಯಾಂಕುಗಳು, ವಿಮಾ ಕಂಪೆನಿಗಳು, ರೈಲ್ವೆ, ವಿದ್ಯುತ್ ಪ್ರಸರಣ ಸಂಸ್ಥೆಗಳು, ಟೆಲಿಕಾಂ, ಮೂಲಸೌಕರ್ಯ ಮುಂತಾದ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಮತ್ತು ರಾಷ್ಟ್ರೀಯ ಹಣಗಳಿಕೆಯ ಪೈಪ್‌ಲೈನ್ (NMP) ಅನ್ನು ರದ್ದುಗೊಳಿಸಬೇಕು. ರೈಲ್ವೇ, ವಿದ್ಯುತ್ ಪ್ರಸರಣ ವ್ಯವಸ್ಥೆಗಳು, ಟೆಲಿಕಾಂ ಮೂಲಸೌಕರ್ಯ ಮುಂತಾದ ವಿವಿಧ ಸಾರ್ವಜನಿಕ ವಲಯದ ಉದ್ಯಮಗಳ ಒಡೆತನದ ಭೂಮಿಯೂ ಸಹ ದೇಶದ ಅಮೂಲ್ಯ ಆಸ್ತಿಯಾಗಿದೆ.

ಇವುಗಳನ್ನು ಖಾಸಗಿ ಬಂಡವಾಳಷಾಹಿಗಳಿಗೆ ಮಾರುವ, ಬಂಡವಾಳ ಹಿಂತೆಗೆತ ಮಾಡುವ, ದೀರ್ಘಕಾಲದ ಅವಧಿಗೆ ಖಾಸಗಿಯವರಿಗೆ ಲೀಸ್‌ಗೆ ನೀಡುವ ಹುನ್ನಾರ ನಡೆಯುತ್ತಿದೆ. ಇದು ದೇಶದ ಭವಿಷ್ಯದ ಹಿತ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ. ಉದ್ಯೋಗ ನಷ್ಟ ಮಾಡುವ ಹಾಗೂ ಸಾಮಾಜಿಕ ನ್ಯಾಯ ನೀಡುವ ಮೀಸಲಾತಿ ಸೌಲಭ್ಯಗಳನ್ನು ಕಳೆಯುವ ಈ ಖಾಸಗಿಕರಣ ಪ್ರಕ್ರಿಯೆಯನ್ನು ಹಿಮ್ಮೆಟ್ಟಿಸುವುದಕ್ಕಾಗಿ ಈ ಮುಷ್ಕರವನ್ನು ನಡೆಸುತ್ತಿದ್ದೇವೆ‌. ಬಲಿಷ್ಠವಾದ ಸಾರ್ವಜನಿಕ ಉದ್ದಿಮೆಗಳು ಮಾತ್ರ ಖಾಸಗಿ ಕಂಪೆನಿಗಳ ಶೋಷಣೆ ತಡೆಯಬಲ್ಲವು ಎಂದು ಕೆ.ರಾಘವೇಂದ್ರ ನಾಯರಿ ತಿಳಿಸದರು‌.

ಜಿಲ್ಲಾ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಹೆಚ್‌.ಜಿ.ಉಮೇಶ್ ಅವರಗೆರೆ ಮಾತನಾಡಿ ದೇಶದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ. ಆದರೆ ಈ ಹೊತ್ತಿನಲ್ಲೂ ಕಾರ್ಮಿಕರ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ನೇತೃತ್ವದ ಸರ್ಕಾರವು ಇದನ್ನು ‘ಅಮೃತ ಕಾಲ’ದ ಆರಂಭ ಎಂದು ಹೇಳಿಕೊಳ್ಳುತ್ತಿದ್ದಾರೆ. ದೇಶದ ಜನ ನೆಮ್ಮದಿಯಿಂದ ಇದ್ದಾರೆ ಎಂದು ಕೇಂದ್ರ ಸರಕಾರ ಪ್ರಚಾರ ಮಾಡುತ್ತಿದೆ. ಆದರೆ, ದೇಶದ ಶ್ರಮಿಕ ಜನ ಸಂಕಷ್ಟಗಳ ಮೇಲೆ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚುತ್ತಿರುವ ನಿರುದ್ಯೋಗ, ಮುಳುಗುತ್ತಿರುವ ಆದಾಯ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಮಹಿಳೆಯರಿಗೆ ಸುರಕ್ಷಿತೆ, ಭದ್ರತೆ ಇಲ್ಲದ ಸಂಕಷ್ಟದ ಸಮಯವಾಗಿದೆ. ಈ ಎಲ್ಲಾ ಸಂಕಷ್ಟಗಳು ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ಸೃಷ್ಟಿಯಾಗಿವೆ ಎಂದರು.

ಎಐಯುಟಿಯುಸಿ ಮುಖಂಡ ಕೈದಾಳೆ ಮಂಜುನಾಥ್ ಮಾತನಾಡಿ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ, ದೇಶದ ಆಸ್ತಿಗಳನ್ನು ಉಳಿಸಿಕೊಳ್ಳುವುದಕ್ಕಾ ಈ ಹೋರಾಟ ನಡೆಯುತ್ತಿದೆ. ಜನಪರ ಹೋರಾಟಗಳು ಸರಕಾರವು ಜನರಿಗೆ ಮಾಡುತ್ತಿರುವ ದ್ರೋಹಗಳನ್ನು ತಡೆಯಲು ಯಶಸ್ವಿಯಾಗಿವೆ. ಒಂದು ವರ್ಷಕ್ಕೂ ಹೆಚ್ಚು ಸುದೀರ್ಘ ಕಾಲ ರೈತರು ನಡೆಸಿದ ಹೋರಾಟದಿಂದ ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಂಡಿತ್ತು. ಆದಾಗ್ಯೂ ಕೇಂದ್ರ ಸರಕಾರ ತನ್ನ ಹಠಮಾರಿ ಧೋರಣೆಗಳಿಂದಾಗಿ ದೇಶದ ಸಂಪತ್ತನ್ನು ಮಾರಾಟ ಮಾಡುತ್ತಿದೆ. ಖಾಸಗೀಕರಣವನ್ನು ಬಲಗೊಳಿಸುವ ಪ್ರಕ್ರಿಯೆಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ. ಸರಕಾರದ ಈ ನೀತಿಗಳು ದೇಶವನ್ನು ದುರ್ಬಲಗೊಳಿಸುವುದಾಗಿದೆ. ಹಾಗಾಗಿ ಎರಡು ದಿನಗಳ ಕಾಲ ಮುಷ್ಕರ ನಡೆಸುತ್ತಿದ್ದೇವೆ ಎಂದರು.

ಎಐಟಿಯುಸಿ ಮುಖಂಡ ಅವರಗೆರೆ ಚಂದ್ರು ಮಾತನಾಡಿ ಅಂಗನವಾಡಿ, ಆಶಾ, ಮಧ್ಯಾಹ್ನದ ಬಿಸಿಯೂಟ ಮತ್ತು ಇತರ ಯೋಜನಾ ಕಾರ್ಯಕರ್ತರಿಗೆ ಶಾಸನಬದ್ಧ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಲು ಸರಕಾರವನ್ನು ಒತ್ತಾಯಿಸಿದರು. 60 ಲಕ್ಷಕ್ಕೂ ಹೆಚ್ಚು ‘ಸ್ಕೀಮ್ ವರ್ಕರ್‌ಗಳು’ ಮಹಿಳೆಯರಾಗಿದ್ದಾರೆ. ಅವರು ವಿವಿಧ ಸರ್ಕಾರಿ ಯೋಜನೆಗಳಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸೇವೆಗಳು, ಮಕ್ಕಳ ಆರೈಕೆ ಸೇವೆಗಳು ಇತ್ಯಾದಿಗಳನ್ನು ಒದಗಿಸುವಂತಹ ನಿರ್ಣಾಯಕ ಕೆಲಸಗಳನ್ನು ಮಾಡುತ್ತಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿಯೂ ಅವರು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದರೂ ಅವರೆಲ್ಲರನ್ನು ‘ಸ್ವಯಂಸೇವಕ ಕೆಲಸಗಾರರು’ ಎಂದು ವರ್ಗೀಕರಿಸಲಾಗಿದೆ ಮತ್ತು ಅತ್ಯಂತ ಕಡಿಮೆ ಗೌರವ ಧನವನ್ನು ನೀಡಲಾಗುತ್ತಿದೆ. ಅವರನ್ನು ಕಾಯಂಗೊಳಿಸಬೇಕು ಮತ್ತು ಎಲ್ಲಾ ಶಾಸನಬದ್ಧ ಹಕ್ಕುಗಳೊಂದಿಗೆ ಕಾರ್ಮಿಕರಂತೆ ಪರಿಗಣಿಸಬೇಕು ಎಂದವರು ಆಗ್ರಹಿಸಿದರು.

ಮುಷ್ಕರನಿರತ ಕಾರ್ಮಿಕರನ್ನು ಉದ್ದೇಶಿಸಿ ಮುಖಂಡರಾದ ಬಿ.ಆನಂದಮೂರ್ತಿ, ಜಬೀನಾ ಖಾನಂ, ಕರಿಬಸಪ್ಪ, ಶ್ರೀಹರ್ಷ, ಕೆ.ಪಿ.ಮಧುಸೂದನ್, ಅವರಗೆರೆ ವಾಸು, ರಾಜೇಂದ್ರ ಬಂಗೇರ ಮತ್ತಿತರರು ಮಾತನಾಡಿದರು.

ಇಂದಿನ ಮುಷ್ಕರದಲ್ಲಿ ಜೆಸಿಟಿಯು ನಾಯಕರುಗಳಾದ ಕೆ.ರಾಘವೇಂದ್ರ ನಾಯರಿ, ಹೆಚ್.ಜಿ.ಉಮೇಶ್ ಅವರಗೆರೆ, ಕೈದಾಳೆ ಮಂಜುನಾಥ್, ಅವರಗೆರೆ ಚಂದ್ರು, ಆನಂದ್ ರಾಜ್, ಬಿ.ಆನಂದಮೂರ್ತಿ, ವಿಶ್ವನಾಥ್ ಬಿಲ್ಲವ, ಜಬೀನಾ ಖಾನಂ, ಎಂ.ಬಿ.ಶಾರದಮ್ಮ, ಸುನೀತ್ ಕುಮಾರ್, ಎಸ್.ನಾಗರಾಜ್, ಸರೋಜಮ್ಮ, ಕರಿಬಸಪ್ಪ, ಹೆಚ್.ಎಸ್.ತಿಪ್ಪೇಸ್ವಾಮಿ, ಐರಣಿ ಚಂದ್ರು, ರಾಜೇಂದ್ರ ಬಂಗೇರ, ಆರ್.ಆಂಜನೇಯ, ಮಲ್ಲಮ್ಮ, ಕಾಳಮ್ಮ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!