ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿ ಅರ್ಥಪೂರ್ಣ ಆಚರಣೆ- ಮಹಾಂತೇಶ್ ಬೀಳಗಿ 

dc mahantesh bilagi
ದಾವಣಗೆರೆ : ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶದ ಮಹಾನ್ ಚೇತನ ಡಾ. ಬಾಬು ಜಗಜೀವನರಾಂ ಅವರ ಜಯಂತಿಯನ್ನು ಈ ಬಾರಿ ಜಿಲ್ಲಾ ಕೇಂದ್ರದಲ್ಲಿ ಮೆರವಣಿಗೆ ಸಹಿತ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಬುಧವಾರ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಜಯಂತಿ ಆಚರಣೆ ಸಂಬಂಧ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಳೆದೆರಡು ವರ್ಷಗಳಿಂದ ಕೋವಿಡ್ ಸೋಂಕು ವ್ಯಾಪಕವಾಗಿದ್ದ ಕಾರಣಕ್ಕಾಗಿ ಸರ್ಕಾರ ಹೊರಡಿಸಿದ ಮಾರ್ಗಸೂಚಿಯಂತೆ ಎಲ್ಲ ಮಹನೀಯರ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಸಾರ್ವಜನಿಕರ ಸಹಕಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಇಳಿಮುಖವಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಬಂದಿದೆ. ಆದಾಗ್ಯೂ ಪ್ರತಿದಿನ ನಿಯಮಿತವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಸರ್ಕಾರವೂ ಕೂಡ ಮಹನೀಯರ ಜಯಂತಿಯನ್ನು ಸರಳವಾಗಿ ಆಚರಿಸಲು ನಿರ್ದೇಶನ ನೀಡಿದೆ. ಜಯಂತಿಗಳ ಆಚರಣೆಯ ಜೊತೆಗೆ ಕೋವಿಡ್ ಗಂಡಾಂತರದಿಂದ ಪಾರಾಗುವುದು ಕೂಡ ಅಷ್ಟೇ ಮುಖ್ಯವಾಗಿದೆ ಎಂದರು.
ಏ. 05 ರಂದು ಡಾ. ಬಾಬು ಜಗಜೀವನರಾಂ ಅವರ ಜಯಂತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಂಕೇತಿಕ ಹಾಗೂ ಸರಳವಾಗಿ ಆಚರಿಸಲಾಗುವುದು. ಏ. 14 ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಜೊತೆಗೆ ಡಾ. ಬಾಬು ಜಗಜೀವನರಾಂ ಅವರ ಜಯಂತಿಯನ್ನೂ ಕೂಡ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಅಂದು ಬೆಳಿಗ್ಗೆ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಅವರ ಭಾವಚಿತ್ರದ ಮೆರವಣಿಗೆಗೆ ನಗರದ ಅಂಬೇಡ್ಕರ್ ಸರ್ಕಲ್ನಲ್ಲಿ ಚಾಲನೆ ನೀಡಲಾಗುವುದು. ಬಳಿಕ ಮೆರವಣಿಗೆಯು ಜಯದೇವ ವೃತ್ತ, ಗಾಂಧಿ ವೃತ್ತ ಮೂಲಕ ಮಹಾನಗರಪಾಲಿಕೆ ವರೆಗೆ ಸಾಗಿ ಬರಲಿದೆ. ಮೆರವಣಿಗೆಯಲ್ಲಿ ಡೊಳ್ಳು, ಹಲಗೆ ವಾದನ ಸಹಿತ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಗೆ ಅಗತ್ಯವಿರುವ ವಾಹನ ವ್ಯವಸ್ಥೆಯನ್ನು ಮಹಾನಗರಪಾಲಿಕೆಯಿಂದ ಕೈಗೊಳ್ಳಬೇಕು. ವೇದಿಕೆ ಸಮಾರಂಭವನ್ನು ಮಹಾನಗರಪಾಲಿಕೆ ಆವರಣದಲ್ಲಿರುವ ಬಯಲು ಸಭಾಂಗಣದಲ್ಲಿ ಆಯೋಜಿಸಲಾಗುವುದು. ಕಾರ್ಯಕ್ರಮಕ್ಕೆ ಶಿಷ್ಠಾಚಾರದಂತೆ ಎಲ್ಲ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಉಭಯ ಮಹನೀಯರ ಜೀವನ ಸಾಧನೆಗಳ ಕುರಿತು ವಿಶೇಷ ಉಪನ್ಯಾಸ, ಹೋರಾಟದ ಗೀತಗಾಯನ ಏರ್ಪಡಿಸಲಾಗುವುದು. ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ಗೈರು ಹಾಜರಾದವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಂಬೇಡ್ಕರ್ ಹಾಗೂ ಜಗಜೀವನರಾಂ ಅವರ ಜೀವನ ಸಾಧನೆ ಕುರಿತಂತೆ ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಪ್ರತಿ ವಿಭಾಗದಲ್ಲಿ ತಲಾ ಮೂವರು ವಿಜೇತರ ವಿವರವನ್ನು ನೀಡಿ, ಜಯಂತಿ ಸಮಾರಂಭದಲ್ಲಿ ಮಕ್ಕಳಿಗೆ ಬಹುಮಾನ ಹಾಗೂ ಪ್ರಮಾಣಪತ್ರವನ್ನು ನೀಡಬೇಕು. ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಜಯಂತಿ ಆಚರಣೆ ಮಾಡಿ, ಫೋಟೋ ಸಹಿತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಡಿಡಿಪಿಐ ಹಾಗೂ ಡಿಡಿಪಿಯು ಅವರಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಮುಖಂಡರುಗಳು ಈ ಸಂದರ್ಭದಲ್ಲಿ ಮಾತನಾಡಿ, ಡಾ. ಅಂಬೇಡ್ಕರ್ ಅವರ ಕೃತಿಗಳು, ಭಾಷಣ, ಲೇಖನಗಳು ಯುವಪೀಳಿಗೆಗೆ ತಲುಪುವಂತಾಗಬೇಕು. ಹೋರಾಟಗಾರರನ್ನು ಗುರುತಿಸಿ, ಸಮಾರಂಭದಲ್ಲಿ ಗೌರವಿಸಬೇಕು. ಪೌರಕಾರ್ಮಿಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಬೇಕು. ಅದ್ಧೂರಿ ಆಚರಣೆಗಿಂತ, ಅರ್ಥಪೂರ್ಣ ಆಚರಣೆಗೆ ಮಹತ್ವ ನೀಡಬೇಕು. ಜಯಂತಿ ಆಚರಣೆಗೆ ಸರ್ಕಾರ 01 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕು. ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ತ್ವರಿತವಾಗಿ ಪೂರ್ಣಗೊಳ್ಳಬೇಕು. ಸಾಧಕರನ್ನು ಗುರುತಿಸಿ ಜಿಲ್ಲಾ ಮಟ್ಟದಲ್ಲಿ ಅಂಬೇಡ್ಕರ್ ಹಾಗೂ ಜಗಜೀವನರಾಂ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಒ ಡಾ. ಚನ್ನಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಮಗೊಂಡ ಬಸರಗಿ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಾಮದೇವಪ್ಪ, ಸಮಾಜದ ಮುಖಂಡರುಗಳಾದ ಅಣಜಿ ಅಂಜಿನಪ್ಪ, ಹೆಚ್. ಮಲ್ಲೇಶಪ್ಪ, ಹೆಚ್. ಎನ್. ನೀಲಗಿರಿಯಪ್ಪ, ಹೆಗ್ಗೆರೆ ರಂಗಪ್ಪ, ಬಿ. ದುಗ್ಗಪ್ಪ, ಹೆಚ್.ಸಿ. ಮಲ್ಲಪ್ಪ, ಜಿ.ಎಸ್. ವೆಂಕಟೇಶಬಾಬು, ಸೋಮಲಾಪುರ ಹನುಮಂತಪ್ಪ, ಹರಿಹರ ಜೈಮುನಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!