ಶಿವಮೊಗ್ಗದಲ್ಲಿ ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಮಾವೇಶ ಹಾಗೂ ಉದ್ಘಾಟನಾ ಕಾರ್ಯಕ್ರಮ

ದಾವಣಗೆರೆ : ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಶಿವಮೊಗ್ಗ ಜಿಲ್ಲಾ ಮಟ್ಟದ ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಮಾವೇಶ ಹಾಗೂ ಉದ್ಘಾಟನಾ ಕಾರ್ಯಕ್ರಮ ಶಿವಮೊಗ್ಗ ನಗರದ ಕುವೆಂಪು ರಂಗಮAದಿರದಲ್ಲಿ ನೆರವೇರಿತು. ಬಂಜಾರ ಗುರುಪೀಠ ಚಿತ್ರದುರ್ಗದ ಪರಮಪೂಜ್ಯ ಸರ್ದಾರ್ ಶ್ರೀ ಸೇವಾಲಾಲ್ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಶಾಶ್ವತ ನೆಲೆ ಇಲ್ಲದೆ ಬದುಕುತ್ತಿರುವ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದವರಿಗೆ ಸರ್ಕಾರದ ವತಿಯಿಂದ ನಿವೇಶನ, ವಸತಿ ಹಾಗೂ ಕೃಷಿ ಭೂಮಿಗೆ ಹಕ್ಕುಪತ್ರ ಮತ್ತು ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ವಿಚಾರವಾಗಿ ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು ಹಾಗೂ ಹಕ್ಕಿಪಿಕ್ಕಿ ಸಮುದಾಯದ ಜ್ವಲಂತ ಸಮಸ್ಯೆಗಳು ಹಾಗೂ ಸಂಘಟನೆಯ ಮಹತ್ವದ ಕುರಿತಾಗಿ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ.ಆರ್ ತಿಳಿಸಿದ್ದಾರೆ.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಡಿ.ಎಸ್ ಗುರುಮೂರ್ತಿ, ಹಕ್ಕಿಪಿಕ್ಕಿ ಬುಡಕಟ್ಟು ಯುವ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಪುನೀತ್ ಕುಮಾರ್, ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಲೇಶಪ್ಪ, ಸೂಡಾ ಮಾಜಿ ಸದಸ್ಯರಾದ ದೇವರಾಜ್ ಮಂಡೇನಕೊಪ್ಪ, ದಲಿತ ಸಂಘರ್ಷ ಸಮಿತಿಯ ಮುಖಂಡರಾದ ರಂಗನಾಥ್, ಬಂಜಾರ ರಕ್ಷಣಾ ವೇದಿಕೆಯ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಉಮಾ ಮಹೇಶ್ವರನಾಯ್ಕ್, ಸಂತ ಸೇವಾಲಾಲ್ ಬಂಜಾರ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಉಷಾ ನಾಯಕ್, ಬಂಜಾರ ರಕ್ಷಣಾ ವೇದಿಕೆಯ ಶಿವಮೊಗ್ಗ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷರಾದ ಮಂಜುಳಾ ಬಾಯಿ, ಬೀರನಹಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಜಯಕೀರ್ತಿ, ಹಕ್ಕಿಪಿಕ್ಕಿ ಸಮುದಾಯದ ಮುಖಂಡರಾದ ಪಾರಿಜಾತ, ಗೇರುವಾಸಿ ಸೇರಿದಂತೆ ಹಕ್ಕಿಪಿಕ್ಕಿ ಸಮುದಾಯದ ಸಹಸ್ರಾರು ಜನರು ಭಾಗವಹಿಸಿದ್ದರು.

 
                         
                       
                       
                       
                       
                       
                       
                      