ಈ ಸೈಕೋಪಾತ್‌ಗಳಿಗೆ ಹೊರಗೆ ಮಲಗಿದ್ದವರೇ ಟಾರ್ಗೆಟ್! ದಾವಣಗೆರೆಯಲ್ಲಿ ಹಲ್ಲೆ, ಹತ್ಯೆ ಮಾಡುತ್ತಿದ್ದ ಇಬ್ಬರು ಸೈಕೋಪಾತ್‌ಗಳು ಅಂದರ್

ದಾವಣಗೆರೆ: ಮನೆಯ ಹೊರಭಾಗದಲ್ಲಿ ಮಲಗುತ್ತಿದ್ದವರನ್ನು ಟಾರ್ಗೆಟ್ ಮಾಡಿ ಹಣ, ಒಡವೆ, ಮೊಬೈಲ್‌ಗಳನ್ನು ದೋಚಿ ಹಲ್ಲೆ ಮಾಡಿ ಕಾಲ್ಕಿಳುತ್ತಿದ್ದ ಇಬ್ಬರು ಸೈಕೋಪಾತ್‌ಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ಜಿಲ್ಲೆಯ ಹರಿಹರ ತಾಲೂಕಿನ ಎ.ಕೆ ಕಾಲೋನಿಯ ನಿವಾಸಿಗಳಾದ ಮಂಜು (31) ಹಾಗು ಶಿವು (22) ಎನ್ನಲಾಗಿದೆ.
ಇದೇ ಆರೋಪಿಗಳು ಮಾರ್ಚ್ 16ರಂದು ಹರಿಹರದ ಗಾಂಧಿ ಮೈದಾನದ ವಾಣಿಜ್ಯ ಸಂಕೀರ್ಣಗಳ ಮುಂಭಾಗ ಮಲಗಿದ್ದ ಹನುಮಂತಪ್ಪ ಎಂಬುವರ ಪುತ್ರ ಗಿರೀಶ್(21) ಎಂಬಾತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು. ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸರು ಅಂಗಡಿ ಮನೆ ಮುಂಭಾಗ ಮಲಗುವ ಮುನ್ನ ಎಚ್ಚರ ವಹಿಸಿ ಎಂದು ಪ್ರಕಟಣೆ ಮೂಲಕ ಜನರಲ್ಲಿ ಮನವಿ ಮಾಡಿದ್ದರು.
ಹೊರಗೆ ಮಲಗುವ ಮುನ್ನ ಎಚ್ಚರ:
ಇದೇ ಆರೋಪಿಗಳು ಕುಡಿತದ ದಾಸರಾಗಿ ಮೋಜು ಮಸ್ತಿ ಮಾಡಲು ಅಂಗಡಿ, ಮನೆಗಳ ಮುಂದೆ ಮಲಗಿದ್ದ ಜನರನ್ನು ಟಾರ್ಗೆಟ್ ಮಾಡಿ ಹಲ್ಲೆ ನಡೆಸಿ ಅವರಿಂದ ಹಣ ಒಡವೆ ಮೊಬೈಲ್‌ಗಳನ್ನು ದೋಚಿರುವ ಬಗ್ಗೆ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಆದ್ದರಿಂದ ಮನೆಯಿಂದ ಹೊರಗೆ ಮಲಗುವ ಮುನ್ನ ಎಚ್ಚರ ವಹಿಸಿ ಎಂದು ಎಸ್ಪಿ ಸಿ.ಬಿ. ರಿಷ್ಯಂತ್ ಮನವಿ ಮಾಡಿದ್ದಾರೆ. ಬಂಧಿತ ಆರೋಪಿಗಳಾದ ಶಿವು ಹಾಗು ಮಂಜು ಇಬ್ಬರು ಕೂಡ ವಿಕೃತಿ ಮನೋಭಾವದವರಾಗಿದ್ದಾರೆ. ಈ ಪ್ರಕರಣವನ್ನು ಭೇದಿಸಿದ ಸಿಬ್ಬಂದಿ ಡಿವೈಎಸ್ಪಿ ಬಸವರಾಜ್, ಸಿಪಿಐ ಸತೀಶ್ ಹಾಗು ಪಿಎಸ್‌ಐ ಸುನೀಲ್ ಕುಮಾರ್ ನೇತೃತ್ವದ ತಂಡಕ್ಕೆ ಜನ ಅಭಿನಂದನೆ ಸಲ್ಲಿಸಿದ್ದಾರೆ.

 
                         
                       
                       
                       
                       
                       
                       
                      