ಚನ್ನಗಿರಿ ಪಟ್ಟಣ, ಮಲ್ಲಾಡಿಹಳ್ಳಿ ಮತ್ತು 89 ಗ್ರಾಮಗಳ ಕುಡಿವ ನೀರು ಯೋಜನೆಗೆ ಆಡಳಿತಾತ್ಮಕ ಅನುಮೋದನೆ!

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕು ವ್ಯಾಪ್ತಿಯ ಚನ್ನಗಿರಿ ಪಟ್ಟಣ, ಮಲ್ಲಾಡಿಹಳ್ಳಿ ಮತ್ತು ಮಾರ್ಗಮಧ್ಯದ 89 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಚನ್ನಗಿರಿ ಪಟ್ಟಣ, ಮಲ್ಲಾಡಿಹಳ್ಳಿ ಮತ್ತು ಮಾರ್ಗಮಧ್ಯದ 89 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಯ ಅಂದಾಜು ಪರಿಷ್ಕೃತ ಮೊತ್ತ ರೂ. 5926.72 ಲಕ್ಷ (ಐದು ಸಾವಿರದ ಒಂಬೈನೂರ ಇಪ್ಪತ್ತಾರು ಲಕ್ಷದ ಎಪ್ಪತ್ತೆರೆಡು ಸಾವಿರ ರೂಗಳಿಗೆ 2215 ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಈ ಕುರಿತು ಏಪ್ರಿಲ್ 18ರ 2022ರಂದು ಆದೇಶ ಹೊರಡಿಸಿರುವ ಸರ್ಕಾರದ ಪದನಿಮಿತ್ತ ಉಪಕಾರ್ಯದರ್ಶಿ (ಅಭಿವೃದ್ದಿ), ಪ್ರಸ್ತಾಪಿತ ಕಾಮಗಾರಿಗೆ ಸಕ್ಷಮ ಪ್ರಾಧಿಕಾರದ ಅವಶ್ಯವಿರುವ ಅನುಮೋದನೆ ಪಡೆದು ನಂತರ ಮುಂದಿನ ಕ್ರಮವಹಿಸಬೇಕು. ಅನುಮೋದನೆ ನೀಡಲಾದ ಅಂದಾಜಿನ ವ್ಯಾಪ್ತಿಯೊಳಗೆ ಕಾಮಗಾರಿಯನ್ನು ಅನುಷ್ಠಾನಗೊಳಿಸ ತಕ್ಕದ್ದು ಹಾಗೂ ಅಂದಾಜು ಮೊತ್ತದಲ್ಲಿ ಯಾವುದೇ ರೀತಿಯ ಹೆಚ್ಚಳಕ್ಕೆ ಆಸ್ಪದ ನೀಡಬಾರದು ಎಂದು ಸೂಚಿಸಿದ್ದಾರೆ.
ಅಷ್ಟೇಅಲ್ಲದೆ ಈ ಆದೇಶದಲ್ಲಿ ಅನುಮೋದನೆಯಾಗಿರುವ ಯೋಜನೆಯ ಪರಿಷ್ಕೃತ ಅಂದಾಜು ಮೊತ್ತದ ವ್ಯಾಪ್ತಿಯೊಳಗೆ ಮುಖ್ಯ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆ, ಬೆಂಗಳೂರು ಇವರ ಶಿಫಾರಸ್ಸು ಆಧರಿಸಿ ಅನುದಾನ ಬಿಡುಗಡೆಯಾಗತಕ್ಕದ್ದು ಹಾಗೂ ಸದರಿ ವೆಚ್ಚವನ್ನು 2022-23ರ ಸಾಲಿನ IMIS ನಲ್ಲಿ ಅಳವಡಿಸಲು ಮತ್ತು ಯೋಜನೆ ಚಾಲ್ತಿ ಪಾರದರ್ಶಕ ನೀತಿಯನ್ವಯ ಅನುಷ್ಠಾನಗೊಳಿಸತಕ್ಕದ್ದು ಎಂದು ಸೂಚಿಸಿದ್ದಾರೆ.