ನೀರಿನಿಂದ ಜಲಾವೃತವಾದ ಜಗಳೂರಿನ ನರನಹಳ್ಳಿ ಗ್ರಾಮ!
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕು ಬಿಳಿಚೋಡು ಹೋಬಳಿಯ ನರನಹಳ್ಳಿ ಗ್ರಾಮದ ಮನೆ ಮನೆಗಳಲ್ಲಿ ಮತ್ತು ರಸ್ತೆ ಮೇಲೆಲ್ಲ ಮಳೆ ನೀರು ಸಾಗರದಂತೆ ಹರಿದಿದ್ದು ಗ್ರಾಮಸ್ಥರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ನೀರಿನಿಂದ ಜಲಾವೃತವಾದ ಗ್ರಾಮದ ಹೊರವಲಯದಲ್ಲಿ ನೀರು ಸರಾಗವಾಗಿ ಹೋಗದೆ ಹೊರವಲಯದ ನೀರೆಲ್ಲ ಗ್ರಾಮದೊಳಗೆ ಹರಿದಿದೆ. ಇತ್ತ ಗ್ರಾಮದ ಬೀದಿಗಳಲ್ಲಿ ಸುಸಜ್ಜಿತವಾದ ಚರಂಡಿ ವ್ಯವಸ್ಥೆ ಕೂಡ ನಿರ್ಮಿಸಿಲ್ಲ. ಮಳೆ ನೀರು ಗ್ರಾಮದ ರಸ್ತೆ ಮೇಲಿಂದ ಹರಿದು ಪ್ರತಿ ಮನೆ ಮನೆಗಳಲ್ಲೂ ನೀರು ನುಗ್ಗಿದ್ದು, ಗ್ರಾಮಸ್ಥರು ಮಳೆ ನೀರು ಹೊರಹಾಕುವಲ್ಲಿ ಸಾಕುಸಾಕಾಗಿದ್ದಾರೆ.
ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಸಂಬ0ಧಪಟ್ಟ ಗ್ರಾಮ ಪಂಚಾಯ್ತಿ ಗಮನಕ್ಕೆ ತಂದು ಸುಸಜ್ಜಿತವಾದ ತಡೆಗೋಡೆ ಅಥವಾ ಮಳೆ ನೀರು ಸರಾಗವಾಗಿ ಗ್ರಾಮದ ಹೊರಗೆ ಹರಿಯುವಂತೆ ಮಾಡಲು ಮನವಿ ಮಾಡಿದರೂ ಸಹ ಈ ಬಗ್ಗೆ ಸರಿಯಾದ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ಅಷ್ಟೇಅಲ್ಲದೆ ಗ್ರಾಮದ ಹೊರವಲಯದಿಂದ ಗ್ರಾಮದೊಳಗೆ ಹರಿಯುವ ನೀರನ್ನು ತಡೆಗಟ್ಟಲು ಶಾಶ್ವತ ಪರಿಹಾರ ಒದಗಿಸದಿದ್ದರೆ ಬೀದಿಗಿಳಿದು ಉಗ್ರ ಹೋರಾಟಕ್ಕೆ ಅಣಿಯಾಗುವುದಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರನಹಳ್ಳಿ ಗ್ರಾಮದಲ್ಲಿ ಹೊರವಲಯದಿಂದ ಹರಿಯುತ್ತಿರುವ ಮಳೆ ನೀರಿನ ವೀಡಿಯೋ ವಾಟ್ಸಪ್ಗಳಲ್ಲಿ ಹರಿಬಿಡಲಾಗಿದ್ದು, ಮನೆಯೊಳಗೆ ನುಗ್ಗಿರುವ ನೀರನ್ನು ಹೊರತಗೆಯುವಲ್ಲಿ ಗ್ರಾಮಸ್ಥರು ನಿರತರಾಗಿರುವುದನ್ನು ಕಾಣಬಹುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.