ಹದಡಿ: ಭವಿಷ್ಯದ ಪೀಳಿಗೆ ಉಳಿವಿಗೆ ಭೂಮಿ ರಕ್ಷಿಸಿ! ಜೆ.ಆರ್.ಷಣ್ಮುಖಪ್ಪ

hadadi

ದಾವಣಗೆರೆ : ಕೃಷಿ ಭೂಮಿಯಿಂದ ಲಾಭವಿಲ್ಲವೆಂಬ ಕಾರಣಕ್ಕೆ ಹಣಕ್ಕೆ ಮಾರುಹೋಗಿರುವ ರೈತರು ತಮ್ಮ ಭೂಮಿ ಮಾರಾಟ ಮಾಡುತ್ತಿದ್ದಾರೆ. ಆದರೆ ಜಮೀನು ಮಾರಾಟ ಮಾಡಿದ ಹಣ ಬಹಳ ದಿನ ಇರುವುದಿಲ್ಲ ಎಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ಹೇಳಿದರು.

ದಾವಣಗೆರೆ ತಾಲೂಕಿನ ಹದಡಿ ಕೃಷಿ ಪತ್ತಿನ ಸಹಕಾರದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಗೆ ದಿನದಿಂದ ದಿನಕ್ಕೆ ಬೆಲೆ ಏರುತ್ತಿದೆ. ಜಮೀನು ಇದ್ದರೆ ಬೆಳೆ ಬೆಳೆದು ಹಸಿವು ನೀಗಿಸಿಕೊಳ್ಳಬಹುದು. ಆದರೆ ಹಣ ಇದ್ದರೆ ಬಹಳ ದಿನ ಇರುವುದಿಲ್ಲ ಎಂದರು. ಸಹಕಾರಿ ಸಂಘವು ರೈತರಿಗಾಗಿಯೇ ಇದ್ದು ಸಾಲ ಕೊಡುತ್ತವೆ. ಅಲ್ಲದೇ ಕೆಲವೊಮ್ಮೆ ಸಾಲವು ಮನ್ನವಾಗುತ್ತದೆ. ಈ ಕಾರಣದಿಂದ ರೈತರು ಕೈಗೆ ಬಂದ ಬೆಲೆಗೆ ಭೂಮಿ ಮಾರಾಟ ಮಾಡದೆ ಭವಿಷ್ಯದ ಪೀಳಿಗೆಗೆ ಭೂಮಿ ಉಳಿಸುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕೆಂದು ಕರೆ ನೀಡಿದರು. ಸರಕಾರಗಳು ಕೃಷಿಯನ್ನೂ ಕೂಡ ಉದ್ಯಮ ಎಂದು ಪರಿಗಣಿಸಿದರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯವಾಗಲಿದೆ. ರೈತರ ಅಭಿವೃದ್ಧಿಯ ಮಾತುಗಳು ಕೇವಲ ಭಾಷಣಗಳಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು. ಈ ನಿಟ್ಟಿನಲ್ಲಿ ರೈತೋತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡಲು ಸರಕಾರ ಮುಂದಾಗಬೇಕೆ0ದು ಆಗ್ರಹಿಸಿದರು.

1984ರಿಂದ ಸಹಕಾರಿ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿದ್ದೇನೆ. 2018ರಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಅನುಭವವಿದ್ದು, ಪ್ರತಿ ಸಹಕಾರ ಸಂಘದ ಅಭಿವೃದ್ಧಿಗೆ ಮೂರು ಕೋಟಿ ಸಾಲ ನೀಡಿದ್ದೇ. ಈ ಸಾಲವನ್ನು ಕೆಲ ಸಂಘಗಳು ಉತ್ತಮವಾಗಿ ಬಳಸಿಕೊಂಡವು. ಇನ್ನು ಕೆಲವು ಸಂಘಗಳು ಅವರಲ್ಲೇ ಆದ ಕೆಲವು ಭಿನ್ನಭಿಪ್ರಾಯದಿಂದ ನಷ್ಟವಾದವು. ಈ ರೀತಿ ಆಗಬಾರದು ಇದು ನನ್ನ ಸಹಕಾರ ಸಂಘವಾಗಿದ್ದು, ಎಲ್ಲರೂ ಸೇರಿ ಅಭಿವೃದ್ಧಿ ಮಾಡೋಣ ಎಂಬ ನಿಲುವನ್ನು ಹೊಂದಿದರೆ ಮಾತ್ರ ಸಹಕಾರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಹದಡಿ ಸಂಘದ ನಿರ್ದೇಶಕ ಮಾಲತೇಶ್ ಮಾತನಾಡಿ, ಜೆ.ಆರ್. ಷಣ್ಮುಖಪ್ಪ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ವೇಳೆ ಸಂಘಕ್ಕೆ 3.38 ಕೋಟಿ ರೂ ಸಾಲ ನೀಡಿದ್ದರು. ಈ ಸಂಘದ ಅಭಿವೃದ್ಧಿಯಲ್ಲಿ ಅವರ ಪಾತ್ರ ಗಣನೀಯವಾಗಿದೆ. ಇದೀಗ ಸಂಘದ ನೂತನ ಕಟ್ಟಡ ಮತ್ತು ಗೋದಾಮು ನಿರ್ಮಾಣಕ್ಕೆ ನಬಾರ್ಡ್ನಿಂದ ಅನುದಾನ ಕೊಡಿಸಲು ಪ್ರಯತ್ನಿಸಬೇಕೆಂದು ಮನವಿ ಮಾಡಿದರು. ಸಂಘದ ಹಿರಿಯ ನಿರ್ದೇಶಕ ಲಿಂಗಣ್ಣ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಹನುಮಂತಪ್ಪ, ಸಂಘದ ಉಪಾಧ್ಯಕ್ಷೆ ಚಂದ್ರಮ್ಮ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಸಿಇಒ ರಾಧಾ ನಿರೂಪಿಸಿದರು.

 

garudavoice21@gmail.com 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!