ಏಳು ರೂಪಾಯಿ ಕ್ಯಾರಿ ಬ್ಯಾಗ್‌ಗೆ ಐದು ಸಾವಿರ ದಂಡ! ಕ್ಯಾರಿ ಬ್ಯಾಗ್ ನೀಡಲು ಶುಲ್ಕ

ದಾವಣಗೆರೆ: ಕ್ಯಾರಿ ಬ್ಯಾಗ್ ನೀಡಲು ಶುಲ್ಕ ವಿಧಿಸಿದ ತಪ್ಪಿಗೆ ಕಂಪನಿಯೊ0ದಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಐದು ಸಾವಿರ ದಂಡ ವಿಧಿಸಿ, 3 ಸಾವಿರ ದಾವೆ ಖರ್ಚನ್ನು ನೀಡುವಂತೆ ನಿರ್ದೇಶಿಸಿದೆ.
ಹರಿಹರದ ವಕೀಲೆ ಎಚ್.ಬಿ. ನೀತು ಶಾಮನೂರು ರಸ್ತೆಯಲ್ಲಿರುವ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರಿಟೇಲ್ ಲಿಮಿಟೆಡ್ ಕಂಪನಿ ಪ್ಯಾಂತಲೂನ್ಸ್ ಮಳಿಗೆಯಲ್ಲಿ ಎರಡು ಜೊತೆ ಶೂ ಹಾಗೂ ಬ್ಯಾಗ್ ಖರೀದಿಸಿದ್ದರು. ಆದರೆ ನೀತು ಅನುಮತಿ ಇಲ್ಲದೇ ಕ್ಯಾರಿಬ್ಯಾಗ್ ಶುಲ್ಕ ಎಂದು ರೂ.7 ಅನ್ನು ಬಿಲ್ ಜೊತೆಗೆ ಸೇರಿಸಿದ್ದರು. ಈ ಸಂಬ0ಧ ನೀತು ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಕ್ಯಾರಿ ಬ್ಯಾಗ್ ಮೇಲೆ ಕಂಪನಿ ಹೆಸರು ನಮೂದಿಸಿರುವುದರಿಂದ ಬ್ಯಾಗ್‌ನ ಶುಲ್ಕವನ್ನು ಹಿಂಪಡೆಯುವ0ತೆ ಮಾಡಿದ್ದ ಮನವಿಗೆ ಮಳಿಗೆಯ ಅಧಿಕಾರಿಗಳು ಕಿವಿಗೊಡಲಿಲ್ಲ. ಬದಲಾಗಿ ಉಳಿದ ಗ್ರಾಹಕರ ಎದುರಿನಲ್ಲೇ ಅಪಹಾಸ್ಯ ಮಾಡಿದ್ದರು. ಹೀಗಾಗಿ ನೀತು ಅವರು 2020ರ ಮೇ 20ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ ಹಾಗೂ ಸದಸ್ಯ ಸಿ.ಎಸ್. ತ್ಯಾಗರಾಜನ್ ಅವರು ಕಂಪನಿಯು ಸೇವಾಲೋಪವೆಸಗಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರತಿವಾದಿಗಳಾದ ಮುಂಬೈನ ಆದಿತ್ಯ ಬಿರ್ಲಾ ಫ್ಯಾಷನ್ ಅಂಡ್ ರಿಟೇಲ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಂಪನಿಯ ದಾವಣಗೆರೆಯ ಮಳಿಗೆಯ ಪ್ರಧಾನ ವ್ಯವಸ್ಥಾಪಕ ಅವರು ಕ್ಯಾರಿಬ್ಯಾಗ್‌ಗೆ ವಿಧಿಸಿದ್ದ 7 ರೂ.ನ್ನು ವಾಪಸ್ ನೀಡಬೇಕು. ಜೊತೆಗೆ ದೈಹಿಕ ಹಾಗೂ ಮಾನಸಿಕ ತೊಂದರೆ ನೀಡಿರುವುದಕ್ಕೆ ದಾವೆ ವೆಚ್ಚವಾಗಿ 3 ಸಾವಿರ ಹಾಗೂ ದಂಡನಾತ್ಮಕ ಹಾನಿಗಾಗಿ ರೂ.5 ಸಾವಿರವನ್ನು 30 ದಿನಗಳ ಒಳಗೆ ನೀಡಬೇಕು. ಸಕಾಲಕ್ಕೆ ಪಾವತಿಸದಿದ್ದರೆ ಶೇ. 6ರಷ್ಟು ಬಡ್ಡಿ ಸಹಿತ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ಮಳಿಗೆಗೆ ಕಾಲ ಕಾಲಕ್ಕೆ ತೆರಳಿ ಕ್ಯಾರಿ ಬ್ಯಾಗ್ ಶುಲ್ಕ ಪಡೆಯುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಕ್ಯಾರಿ ಬ್ಯಾಗ್ ಶುಲ್ಕ ಪಡೆಯುವುದಿಲ್ಲ ಎಂಬ ಲೆಕ್ಕ ಹಾಕಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ. ಈ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು. ಗ್ರಾಹಕರ ಪರವಾಗಿ ವಕೀಲ ವಿಜಯೇಂದ್ರ ಎಂ.ಎನ್. ವಾದ ಮಂಡಿಸಿದ್ದರು.
garudavoice21@gmail.com 9740365719