ದಾವಣಗೆರೆ: ಕಾಮಗಾರಿ ಮುಗಿದ ನಂತರ ರಸ್ತೆ ಸರಿಪಡಿಸೋದು ಯಾರ ಕೆಲಸ?

ದಾವಣಗೆರೆ: ಕುಡಿಯುವ ನೀರು ಕಲ್ಪಿಸುವ ಯೋಜನೆಯಡಿಯಲ್ಲಿ ಪೈಪ್ಲೈನ್ ಅಳವಡಿಸುವ ಉದ್ದೇಶದಿಂದ ನಗರದಲ್ಲಿ ಕೈಗೊಂಡ ಕಾಮಗಾರಿ ನಂತರ ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಇರುವುದರಿಂದ ದಾವಣಗೆರೆ ಪಾಲಿಕೆ ಹಾಗೂ ಕಾಮಗಾರಿ ಕೈಗೊಂಡ ಸ್ಮಾರ್ಟ್ಸಿಟಿ ಯೋಜನೆ ಅಧಿಕಾರಿಗಳು ದಾವಣಗೆರೆ ಮಹಾನಗರದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿಬಿಡಲಾಗುತ್ತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, ದಾವಣಗೆರೆ ನಗರ ರೈಲ್ವೆ ಅಂಡರ್ ಬ್ರಿಡ್ಜ್ ದಾಟಿ ಮಂಡಿಪೇಟೆ ಹಾಗೂ ರೈಲ್ವೆ ಸ್ಟೇಷನ್ ಕಡೆಗೆ ಹೋಗುವ ರಸ್ತೆ ಪಕ್ಕದಲ್ಲಿ ದಾವಣಗೆರೆ ಸ್ಮಾರ್ಟ್ಸಿಟಿ ಯೋಜನೆಯಡಿಯಲ್ಲಿ ಕುಡಿಯುವ ನೀರು ಕಲ್ಪಿಸುವ ಯೋಜನೆಗೆ ಪೈಪ್ಲೈನ್ ಅಳವಡಿಸಲು ಗುಂಡಿ ತೆಗೆದಿದ್ದು, ಇದನ್ನು ಸರಿಯಾಗಿ ಮುಚ್ಚದೆ ತಗ್ಗುಗುಂಡಿ ಇರುವಂತೆ ಬಿಟ್ಟಿದ್ದಾರೆ. ಇದನ್ನು ಗಮನಿಸಿರುವ ಸಾರ್ವಜನಿಕರು ಕಾಮಗಾರಿ ಮುಗಿದ ಮೇಲೆ ರಸ್ತೆ ಮುಂಚೆ ಇದ್ದ ರೀತಿ ಸಮಪ್ರಮಾಣದಲ್ಲಿರುವಂತೆ ಕೆಲಸ ಮಾಡುವುದು ಯಾರ ಜವಾಬ್ದಾರಿ ಎಂದು ಪ್ರಶ್ನಿಸಿದ್ದಾರೆ. ದೊಡ್ಡ ಪ್ರಮಾಣದ ಲಾರಿಗಳು, ಕಾರು, ಆಟೋ ಇತ್ಯಾದಿ ವಾಹನಗಳು ಇಲ್ಲಿ ಓಡಾಡುತ್ತಿದ್ದು, ಆ ತಗ್ಗುಗುಂಡಿ ಇರುವ ರಸ್ತೆಯಲ್ಲಿಯೇ ಸಾರ್ವಜನಿಕರು ತಮ್ಮ ವಾಹನದಲ್ಲಿ ಸಂಬ0ಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಸಾಗುತ್ತಿದ್ದಾರೆ. ಹಾಗಾಗಿ ಇದನ್ನು ಆದಷ್ಟುಬೇಗ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.

 
                         
                       
                       
                       
                       
                       
                       
                      