ಹೊನ್ನೂರಿನಲ್ಲಿ ‘ಗೀರ್ ‘ ಗಮ್ಮತ್ತು.! ಗೋಲೋಕ ನೋಡಲು ಕಣ್ಣೆರೆಡು ಸಾಲದು.!

ದಾವಣಗೆರೆ : ದಾವಣಗೆರೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂದು ಎಚ್.ಕಲ್ಪನಹಳ್ಳಿಯ ಸರ್ವೀಸ್ ರೋಡ್ ನಲ್ಲಿ ಸಾಗುವ ವೇಳೆ ಸಿಗೋದು ಹೊನ್ನೂರು. ಈ ಹಳ್ಳಿ ಒಳಹೊಕ್ಕಂತೆ ತರಕಾರಿ ತೋಟಗಳು ಹಸಿರು ಹಾಸಿನಂತೆ ಕಾಣುತ್ತವೆ.
ಹಸಿರು ಚಾದರದ ನಡುವಿನ ರಸ್ತೆಯಲ್ಲಿ ಹಾಯ್ದು, ಸ್ವಲ್ಪ ಮುಂದೆ ಸಾಗಿದರೆ ಕಂದು ಬಣ್ಣದ ಹಸುಗಳಿರುವ ಅಂಗಳವೊಂದು ಕಾಣುತ್ತದೆ. ಅದೇ ಶ್ರೀ ಪಾದರಾಜು
ಗೋಲೋಕ’!
ಇವರ ಗೋಲೋಕದಲ್ಲಿ ಗುಜರಾತ್‌ನ 13 ಗಿರ್ ಆಕಳುಗಳಿವೆ. ಒಂದು ಹಸು ಐದರಿಂದ ಏಳು ಲೀಟರ್ ಹಾಲು ಕರೆಯುತ್ತದೆ. ದಿನಕ್ಕೆ ನಲವತ್ತರಿಂದ ಐವತ್ತು ಲೀಟರ್ ಹಾಲು ಕರೆಯುತ್ತಾರೆ. ಆದರೆ ಹಾಲನ್ನು ಮಾರಾಟ ಮಾಡುವುದಿಲ್ಲ…ಬದಲಾಗಿ ಬೆಣ್ಣೆ, ತುಪ್ಪವನ್ನು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ಮಾರಾಟ ಮಾಡುತ್ತಾರೆ. ಗೀರ್ ತಳಿ ತುಪ್ಪ ತುಸು ದರ ಹೆಚ್ಚಿದ್ದು, ಕೆಜಿಗೆ ಎರಡೂವರೆ ಸಾವಿರ ರೂ.ಗೆ ಮಾರಾಟ ಮಾಡುತ್ತಾರೆ. ಇವರ ಗೋಲೋಕ, ಇತರ ರೈತರಿಗೆ ಗಿರ್ ತಳಿ ಸಾಕಣೆಗೆ ಪ್ರೇರಣೆಯಾಗಿದೆ.
ಶ್ರೀಪಾದರಾಜುಗೆ ಮೊದಲಿನಿಂದಲೂ ಹೈನೋದ್ಯಮದಲ್ಲಿ ಆಸಕ್ತಿ..ಆದರೆ ಹಸು ಸಾಕುವ ಆಸಕ್ತಿ ಇರೋರಿಗೆ ಜರ್ಸಿ ಹಸು ಸಾಕಲು ಇಂಟ್ರಸ್ಟ್ ಇದ್ದರೂ, ಅವುಗಳನ್ನು ಸಾಕುವುದು ಅವರಿಗೆ ಕಷ್ಟವೆನಿಸಿತ್ತು. ಆಗ ಶ್ರೀಪಾದರಾಜುವಿಗೆ ಹೊರಹೊಮ್ಮಿದ್ದೇ ಗಿರ್ ತಳಿಯ ದೇಸಿ ಆಕಳು ಸಾಕುವ ಯೋಚನೆ. ಅದಕ್ಕಾಗಿ ಬ್ರೋಕರ್ ನ್ನು ಸಂಪರ್ಕಿಸಿ ಗುಜರಾತ್ ಗೆ ಹೋಗಿ ಅಲ್ಲಿಂದ ಒಂದು ಹಸುವಿಗೆ ಒಂದೂವರೆ ಲಕ್ಷ ರೂ ಕೊಟ್ಟು ಗೀರ್ ತಳಿ ಆಕಳುಗಳನ್ನು ತಂದರು.
ಉಪಯುಕ್ತ ಗುಣ: ದೇಸಿ ತಳಿಗಳ ಪೈಕಿ ಗಿರ್ ಹಸುವಿಗೆ ಅತಿ ಹೆಚ್ಚು ರೋಗ ನಿರೋಧಕ ಶಕ್ತಿಯಿದೆ. ಕರುಳಿಗೆ ಸಂಬಂಧಿಸಿದ ಮತ್ತು ಉಷ್ಣವಲಯದ ರೋಗ ಬಾಧೆ ತೀರಾ ಕಡಿಮೆ. ಕೆಚ್ಚಲು ಬಾವು, ಕಾಲು ಬಾಯಿ ರೋಗ ಸೇರಿದಂತೆ ವೈರಾಣು ವ್ಯಾಧಿಗಳೂ ಕಡಿಮೆಯೇ.ಶ್ರೀ ಪಾದರಾಜು ಹೇಳುವಂತೆ ”ಗಿರ್ ತಳಿ ಸಾಕಲು ಹೆಚ್ಚು ಸೂಕ್ತ. ಇದಕ್ಕೆ ಹಲವು ಕಾರಣಗಳಿವೆ. ಹಸಿರೆಲೆ ಹರಡಿದ ಕೊಟ್ಟಿಗೆಯಲ್ಲಿ ಇವುಗಳನ್ನು ಕಟ್ಟಬಹುದು. ಕೊಟ್ಟಿಗೆಯಲ್ಲಿ ಸಗಣಿಯ ಮೇಲೆ ಮಲಗಿದರೂ ಯಾವುದೇ ಸಮಸ್ಯೆ ಇಲ್ಲ. ಸಗಣಿ ಗಟ್ಟಿಯಾಗಿರುತ್ತದೆ. ಸಾವಯವ ಕೃಷಿಗೆ ಗಿರ್ ತಳಿ ಹಸುವಿನ ಸಗಣಿ ಗೊಬ್ಬರ ಅತೀ ಉಪಯುಕ್ತ. ಹಾಲು ಕರೆಯುವಾಗ ಒದೆಯುವುದಿಲ್ಲ. ಮೇಯಲು ಅನುಕೂಲವಾದ ಜಾಗವಿದ್ದರೆ ಬಿಡಬಹುದು. ಉದ್ದವಾದ ಬಾಲವಿರುವುದರಿಂದ ಸದಾಕಾಲ ಅದನ್ನು ಬೀಸುತ್ತ ಕೀಟಗಳು ಬಳಿಗೆ ಬರದಂತೆ ಸ್ವ ನಿಯಂತ್ರಣ ಮಾಡಿಕೊಳ್ಳುತ್ತದೆ”.
ಗರ್ಭ ಕಟ್ಟಿದರೂ ಆರು ತಿಂಗಳುಗಳ ಕಾಲ ಹಾಲು ಕೊಡುತ್ತದೆ. ಅಲ್ಲದೆ ಇತರ ದನಗಳಿಗೆ ಕೊಡುವಷ್ಟೇ ಪಶು ಆಹಾರವನ್ನು ಗರ್ಭ ಧರಿಸಿದ ದನಗಳಿಗೂ ಕೊಡುತ್ತಾರೆ. ಉದ್ದು ಮತ್ತು ಗೋದಿ ಬೂಸಾ, ಜೋಳದ ಹುಡಿ, ಪಶು ಆಹಾರ ಸೇರಿದಂತೆ ದಿನಕ್ಕೆ ಒಟ್ಟು ಐದು ಕಿಲೋ ಆಹಾರ ಕೊಡುತ್ತಾರೆ. ಬೇಸಿಗೆಯಲ್ಲಿ ಅಡಕೆ ಮರದ ಹಾಳೆ, ಹಸಿರೆಲೆ, ತೋಟದ ಹುಲ್ಲು, ಭತ್ತದ ಒಣಹುಲ್ಲು ನೀಡುತ್ತಾರೆ.
ಗಿರ್ ತಳಿ ಹಸುವಿನ ಮೊಸರಿನಲ್ಲಿ ಶೇ.50ರಷ್ಟು ಬೆಣ್ಣೆ ಇರುತ್ತದೆ. ಹಾಲು ವಿಶಿಷ್ಟ ಪರಿಮಳ, ರುಚಿಯಿಂದ ಕೂಡಿರುತ್ತದೆ. ತುಪ್ಪವೂ ಚೆನ್ನಾಗಿ ಇರುತ್ತದೆ ಎಂದು ಮಾಹಿತಿ ನೀಡುತ್ತಾರೆ ಅವರು. ಕರು ಹಾಕುವ ತನಕವೂ ಒಂದೇ ಅಳತೆಯಲ್ಲಿ ಹಾಲು ಕೊಡುವುದು ಈ ತಳಿಯ ವೈಶಿಷ್ಟ್ಯ. ಇನ್ನು ಮಜ್ಜಿಗೆಯನ್ನು ಹತ್ತು ರೂಪಾಯಿ ಲೀಟರ್, ಲೀಟರ್ ಗಂಜಲಗೆ ಹತ್ತು ರುಪಾಯಿಯಂತೆ ಮಾರಾಟ ಮಾಡುತ್ತಾರೆ ತಿಂಗಳಿಗೆ ಐದನೂರು ಲೀಟರ್ ಗಂಜಲ , ಐದು ಸಾವಿರ ಲೀಟರ್ ಮಜ್ಜಿಗೆ ಮಾರಾಟ ಮಾಡುತ್ತಾರೆ. ಇನ್ನು ಗೀರ್ ತಳಿ
ಸಗಣಿ ತಿಂಗಳಿಗೆ ಒಂಭತ್ತು ಸಾವಿರ ಕೆಜಿ ಬರುತ್ತದೆ. ಅಲ್ಲದೇ ತಿಂಗಳಿಗೆ ನಲವತ್ತೈದು ಲೀಟರ್ ತುಪ್ಪ ಬರುತ್ತದೆ. ತಿಂಗಳಿಗೆ ಅಂದಾಜು ಬೆಣ್ಣೆ, ತುಪ್ಪ ಮಾರಾಟದಿಂದ
ಒಂದು ಲಕ್ಷದ 12 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರೆ. ಖರ್ಚು ಕಳೆದು ನಲವತ್ತು ಸಾವಿರ ರೂ. ಲಾಭ ಬರುತ್ತದೆ. ದಿನಕ್ಕೆ ಒಂದು ಹಸುವಿಗೆ ಇಪ್ಪತ್ತರಿಂದ ಐವತ್ತು ರೂಪಾಯಿ ಖರ್ಚಾಗುತ್ತದೆ
ಇದರ ಜೀವಿತಾವಧಿ ಇಪತ್ತು ವರ್ಷವಿದ್ದು, ಬದುಕಿರುವ ತನಕ ತನ್ನ ಮಾಲೀಕನ ಕೈ ಬಿಡದು. ಇನ್ನು ಮೇವಿನಲ್ಲಿ ಹರಿಶಿನ ಬೆಳ್ಳುಳ್ಳಿ, ಮೆಂತ್ಯ, ಹತ್ತು ಗ್ರಾಂ ಶುಂಠಿ ಬಳಸುವ ಕಾರಣ ಹಾಲಿನಲ್ಲಿ ಪೋಷಕಾಂಶ ಹೆಚ್ಚು ಇರಲಿದೆ. ಈ ಹಾಲು ಕುಡಿಯುವುದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ಅಲ್ಲದೇ ಬ್ಯಾಡ್ ಕೋಲ್ ಸ್ಟ್ರಾಲ್ ಇರೋದಿಲ್ಲ.. ಇನ್ನು ಇವರಿಂದ ರಾಜ್ಯಪಾಲ ಗೆಹ್ಲೋಟ್ ಬೆಂಗಳೂರಿನ ಬ್ರೋಕರ್ ಮೂಲಕ ಶಹಾವರಿ, ಗೀರ್ ತಳಿಯ ಎಂಬ ಗುಣಮಟ್ಟದ ಹಸುವನ್ನು ಖರೀದಿಸಿ ತಮ್ಮ ಮನೆಯಲ್ಲಿ ಸಾಕುತ್ತಿದ್ದಾರೆ.ಒಟ್ಟಾರೆ ಗೀರ್ ತಳಿಯಿಂದ ಶ್ರೀ ಪಾದರ ಜೀವನ ಸುಖಮಯ ವಾಗಿರೋದು ಮಾತ್ರ ಸುಳ್ಳಲ್ಲ..
ಹೆಚ್ಚಿನ ಮಾಹಿತಿಗಾಗಿ 78991 17266 ಸಂಪರ್ಕಿಸಬಹುದು