ಪಡಿತರ ಅಕ್ಕಿ, ರಾಗಿ ಜಪ್ತಿ : ಡಿ. 23 ರಂದು ಬಹಿರಂಗ ಹರಾಜು

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಳ್ಳಲಾಗಿದ್ದ ಪಡಿತರ ಅಕ್ಕಿ ಹಾಗೂ ರಾಗಿಯನ್ನು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಪತ್ತೆ ಮಾಡಿ, ಜಪ್ತಿ ಮಾಡಿಕೊಳ್ಳಲಾದ ಧಾನ್ಯವನ್ನು ಡಿ.23 ರಂದು ದಾವಣಗೆರೆಯ ಎಪಿಎಂಸಿ ಆವರಣದಲ್ಲಿನ ಕೆಎಸ್‍ಸಿಎಫ್‍ಸಿ ಸಗಟು ಮಳಿಗೆ 1 ರಲ್ಲಿ ಬಹಿರಂಗ ಹರಾಜು  ಆಯೋಜಿಸಲಾಗಿದೆ.
ದಾವಣಗೆರೆ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 11.98 ಕ್ವಿಂ. ಅಕ್ಕಿ ಮತ್ತು 1.98 ಕ್ವಿಂ. ರಾಗಿಯನ್ನು ಕಳೆದ ಆಗಸ್ಟ್ 28 ರಂದು ಆಹಾರ ನಿರೀಕ್ಷಕರು ಭಾಗ-1 ಮತ್ತು ಪೊಲೀಸ್ ಉಪನಿರೀಕ್ಷಕರು ಪತ್ತೆ ಮಾಡಿ, ಜಪ್ತಿ ಮಾಡಿಕೊಂಡಿದ್ದರು.
ಜಪ್ತಿ ಮಾಡಿಕೊಳ್ಳಲಾಗಿರುವ ಅಕ್ಕಿ ಮತ್ತು ರಾಗಿಯನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ, ಡಿ.23 ರಂದು ಬೆಳಿಗ್ಗೆ 10.30 ಆಯಾ ಪ್ರಮಾಣಕ್ಕೆ ಅನುಗುಣವಾಗಿ ವಿವಿಧ ಸಮಯದಲ್ಲಿ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ 1, ಎ.ಪಿ.ಎಂ.ಸಿ ಆವರಣ, ದಾವಣಗೆರೆ ಇಲ್ಲಿ ಸಹಾಯಕ ನಿರ್ದೇಶಕರ ಸಮಕ್ಷಮದಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಹರಾಜಿನಲ್ಲಿ ಭಾಗವಹಿಸುವ ಬಿಡ್ಡುದಾರರು ಎಪಿಎಂಸಿ ಟ್ರೇಡ್ ಲೈಸೆನ್ಸ್‍ನೊಂದಿಗೆ ಹಾಜರಾಗಬೇಕು.  ಬಿಡ್ಡುದಾರರು ಹರಾಜು ದಿನ ಒಂದು ಗಂಟೆ ಮುಂಚೆ ಬಂದು ಶೇ. 10 ರಷ್ಟು ಮೊಬಲಗನ್ನು ಮುಂಗಡ ಠೇವಣಿಯಾಗಿ ಇಡಬೇಕು.  ತಪ್ಪಿದಲ್ಲಿ ಅಂತಹವರಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶವಿಲ್ಲ.  ಹೆಚ್ಚಿನ ಮಾಹಿತಿಯನ್ನು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!