ವರದಿಗಾರರ ಕೂಟದ ಕ್ರಿಕೇಟ್ ತಂಡಕ್ಕೆ ಜಿ.ಎಸ್. ಶ್ಯಾಮ್‌ರಿಂದ ಸಮವಸ್ತ್ರ ವಿತರಣೆ

ದಾವಣಗೆರೆ: ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಕ್ರಿಕೇಟ್ ತಂಡಕ್ಕೆ ಸೋಮವಾರ ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿರುವ ಜಿ.ಎಸ್. ಶ್ಯಾಮ್ ಅವರು ಸಮವಸ್ತ್ರ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಮಾಧ್ಯಮದವರು ಸಾಕಷ್ಟು ಒತ್ತಡಗಳ ನಡುವೆ ಕಾರ್ಯನಿರ್ವಹಿಸುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಕ್ರಿಕೇಟ್ ತಂಡ ಕಟ್ಟಿಕೊಂಡು ಆಡಲು ಮುಂದಾಗಿರುವುದು ಸಂತಸದ ಸಂಗತಿ. ಕ್ರಿಕೇಟ್‌ನ ತಂಡದಲ್ಲಿರುವವರಿಗೆ ತಾವು ಸಂತೋಷದಿಂದಲೇ ಸಮವಸ್ತ್ರ ನೀಡುತ್ತಿರುವುದಾಗಿ ತಿಳಿಸಿದರು.
ಮುಂದಿನ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಮಾಯಕೊಂಡ ಕ್ಷೇತ್ರಕ್ಕೆ ತಾವು ಆಕಾಂಕ್ಷಿಯಾಗಿದ್ದು, ಕ್ಷೇತ್ರದಲ್ಲಿನ ದೀನ ದಲಿತರ, ನಿರ್ಗತಿಕರ, ಕಾರ್ಮಿಕ ವರ್ಗದವರ ಅಭಿವೃದ್ಧಿಗೆ ತಾವು ಸದಾ ಸಿದ್ಧವಿದ್ದು, ಸಂಸದ ಸಿದ್ದೇಶ್ವರ್, ಉತ್ತರ ಶಾಸಕ ಎಸ್.ಎ. ರವೀಂದ್ರನಾಥ್, ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲೆಯ ಮತ್ತು ರಾಜ್ಯದ ವರಿಷ್ಠರು ಈ ಬಾರಿ ಮಾಯಕೊಂಡಕ್ಕೆ ತಮಗೆ ಟಿಕೇಟ್ ಕೊಡುತ್ತಾರೆ ಎಂಬ ನಂಬಿಕೆಯಿದೆ. ಈಗಿನ ಮಾಯಕೊಂಡ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಇರಾದೆ ನನಗಿದೆ. ಆದ್ದರಿಂದ ಪಕ್ಷದ ವರಿಷ್ಠರು, ಕ್ಷೇತ್ರದ ಜನರು ನನ್ನನ್ನು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಬಿಜೆಪಿ ಮುಖಂಡ ಬಿ.ಟಿ. ಸಿದ್ದಪ್ಪ ಮಾತನಾಡಿ, ತಾವು ಇಷ್ಟು ವರ್ಷಗಳ ಕಾಲ ಸಾಮಾಜಿಕ ಸೇವೆ ಮಾಡುತ್ತಲೇ ಬಂದಿದ್ದು, ಅದರಂತೆ ನನ್ನ ಪುತ್ರ ಜಿ.ಎಸ್. ಶ್ಯಾಮ್ ಕೂಡ ಸಮಾಜ ಸೇವೆ ಮಾಡಬೇಕೆಂಬ ಆಶಯ ಇಟ್ಟುಕೊಂಡಿದ್ದಾನೆ. ಹಾಗಾಗಿ, ಈ ಬಾರಿ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಿ ಶಾಸಕನಾಗಿ ಆಯ್ಕೆಯಾಗುವ ಮೂಲಕ ಮಾಯಕೊಂಡ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂಬ ಆಶಯ ಹೊಂದಿದ್ದಾನೆ. ಅಲ್ಲದೇ, ಪತ್ರಕರ್ತರಿಗೂ ನಿವೇಶನ ನೀಡಬೇಕೆಂಬ ಬಯಕೆಯನ್ನೂ ಹೊಂದಿದ್ದಾನೆ ಎಂದರು.
ಈ ಸಂದರ್ಭದಲ್ಲಿ ಕೂಟದ ಅಧ್ಯಕ್ಷರಾದ ಕೆ. ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಸಿ. ವರದರಾಜ್, ಖಜಾಂಚಿ ಮಧುನಾಗರಾಜ್ ಕುಂದುವಾಡ, ಮಾಜಿ ಮೇಯರ್, ಹಾಲಿ ಸದಸ್ಯ ಎಸ್.ಟಿ. ವೀರೇಶ್, ಶೋಷಿತವರ್ಗಗಳ ಒಕ್ಕೂಟದ ಅಧ್ಯಕ್ಷ ಆನಂದರಾಜು, ಟಿಂಕರ್ ಮಂಜಣ್ಣ ಮತ್ತಿತರಿದ್ದರು.

 
                         
                       
                       
                       
                       
                       
                       
                      