ಸೌಹಾರ್ದತೆಯ ಪರ್ವ: ಕ್ರೈಸ್ತರ ಹಬ್ಬಕ್ಕೆ ಹಿಂದೂ-ಮುಸ್ಲಿಂ ಯುವಕರಿಂದ ‘ಗೋದಲಿ’ ನಿರ್ಮಾಣ..

ಬೆಳ್ತಂಗಡಿ: ಜಗತ್ತಿಗೆ ಶಾಂತಿಯ ಸಂದೇಶ ಸಾರಿರುವ ಭಗವಾನ್ ಏಸು ಕ್ರಿಸ್ತನ ಜನ್ಮ ದಿನದ ಸಡಗರವು ನಾಡಿನ ತುಂಬೆಲ್ಲಾ ಆವರಿಸಿದೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಹಬ್ಬದ ಸಂಭ್ರಮ ಮನೆ ಮಾಡಿದೆ.
ಕ್ರಿಸ್ಮಸ್ ಹಬ್ಬವು ಪ್ರಾರ್ಥನೆ, ಭಕ್ಷ್ಯ-ಭೋಜನಕ್ಕಷ್ಟೇ ಸೀಮಿತವಾಗಿರದೆ, ಮನುಕುಲದ ಒಳಿತಿಗಾಗಿ ಸಂಕಲ್ಪ ಮಾಡುವ ಸುದಿನವೂ ಹೌದು. ಈ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಕ್ರಿಸ್ಮಸನ್ನು ಪವಿತ್ರ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ.
ಮನೆಗಳಿಗೆ ಸಿಂಗಾರ, ಕ್ರಿಸ್ಮಸ್ ಟ್ರೀ ಅಲಂಕಾರಕ್ಕೆ ನಕ್ಷತ್ರಗಳ ಆಕರ್ಷಣೆ ಸಿಗುತ್ತದೆಯಾದರೂ ಗೋದಲಿಗಿರುವ ಮಹತ್ವವೇ ಬೇರೆ. ಮಾನವನ ಸರಳ ಬದುಕಿನ ಆದ್ಯ ಅರ್ಥವನ್ನು ಪ್ರತಿಬಿಂಬಿಸುವ ರೀತಿ ಕ್ರೈಸ್ತರು ತಮ್ಮ ಮನೆಗಳಲ್ಲಿ ‘ಗೋದಲಿ’ ನಿರ್ಮಿಸುತ್ತಾರೆ. ಕ್ರಿಸ್ತನು ಕುರಿಗಳ ಕೊಟ್ಟಿಗೆಯಲ್ಲಿ ಹುಟ್ಟಿದ್ದ ಎಂಬ ನಂಬಿಕೆಯ ಸನ್ನಿವೇಶದ ಪ್ರತಿಬಿಂಬವಾಗಿ ಈ ‘ಗೋದಲಿ’ಯನ್ನು ನಿರ್ಮಿಸಲಾಗುತ್ತದೆ.
ಇದೀಗ ಈ ಹಬ್ಬದ ಸಡಗರ ಕ್ರೈಸ್ತರಿಗಷ್ಟೇ ಅಲ್ಲ, ಇಡೀ ಮನುಕುಲವೇ ಶ್ರದ್ದಾ ಭಕ್ತಿಯಿಂದ ಆಚರಿಸುತ್ತದೆ. ಇದಕ್ಕೆ ಉದಾಹರಣೆಯಾಗಿದ್ದಾರೆ ದಕ್ಷಿಣಕನ್ನಡದ ಬೆಳ್ತಂಗಡಿಯ ಹುಡುಗರು. ಹಿಂದೂ ಯುವಕರ ಸಮೂಹವು ಕ್ರಿಸ್ತ ಹಬ್ಬದ ಸಡಗರದಲ್ಲಿ ಮಿಂದೆದ್ದ ಸನ್ನಿವೇಶ ನಾಡಿನ ಗಮನಸೆಳೆದಿದೆ.
ಹಿಂದೂ–ಮುಸ್ಲಿಂ ಯುವಕರಿಂದ ಗೋದಲಿ ನಿರ್ಮಾಣವಾಗಿದ್ದು ಇದೀಗ ಅಚ್ಚರಿ ಹಾಗೂ ಕುತೂಹಲದ ಕೇಂದ್ರಬಿಂದುವಾಗಿದೆ. ಬೆಳ್ತಂಗಡಿ ಸಮೀಪದ ಮಡಂತ್ಯಾರ್ನಲ್ಲಿ ‘ಲೈವ್ ಗೋದಲಿ’ ನಿರ್ಮಿಸುವ ಮೂಲಕ ಸ್ಥಳೀಯ ಯುವಕರು ಗಮನಸೆಳೆದಿದ್ದಾರೆ.
ದನಕರು, ಮೇಕೆಗಳು, ಮೊಲಗಳನ್ನು ಗೋದಲಿಯಲ್ಲಿ ಬಳಕೆ ಮಾಡಲಾಗಿದೆ. ಸಂಪೂರ್ಣ ನೈಸರ್ಗಿಕ ವಸ್ತುಗಳನ್ನೇ ಬಳಕೆ ಮಾಡಲಾಗಿದೆ.
ಹನ್ನೆರಡು ಮಂದಿ ಹಿಂದೂ ಹಾಗೂ ಓರ್ವ ಮುಸ್ಲಿಂ ಯುವಕರ ತಂಡವು ಗೋದಲಿ ನಿರ್ಮಾಣ ಕಾರ್ಯದ ಮೂಲಕ ಸೌಹಾರ್ದತೆಯ ಪರ್ವಕ್ಕೆ ಮುನ್ನುಡಿ ಬರೆದಿದೆ..