ದಾವಣಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದಿನಕ್ಕೆ ಕನಿಷ್ಠ 18 ಲಕ್ಷ ಲಂಚ ವಸೂಲಿ – ಬಿಎಂ ಸತೀಶ್ ಆರೋಪ

ದಾವಣಗೆರೆ: ಸೆಪ್ಟೆಂಬರ್ 27 ರಂದು ನೀವು ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿದೆ. ಪ್ರತಿ ನೋಂದಣಿಗೂ ಮಧ್ಯವರ್ತಿಗಳು ವ್ಯವಹಾರಿಸುತ್ತಾರೆ ಎಂದು ದೂರನ್ನ ನೀಡಲಾಗಿತ್ತು.
ನೀವು ಸಬ್ ರಿಜಿಸ್ಟ್ರಾರ್ ಹೇಮಂತ್ ರವರನ್ನು ಸ್ಥಳಕ್ಕೆ ಕರೆಸಿಕೊಂಡು, ನೋಂದಣಿಗೆ ಸಂಬಂಧಪಟ್ಟವರು ಮಾತ್ರ ನಿಮ್ಮ ಕಚೇರಿಯೊಳಗೆ ಬರಬೇಕು. ಮಧ್ಯವರ್ತಿಗಳು ನಿಮ್ಮ ಕಚೇರಿ ಒಳಗೂ ಹೊರಗೂ ಓಡಾಡದಂತೆ ನಿರ್ಬಂಧಿಸಬೇಕು. ಇಲ್ಲವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಟ್ಟು ನಿಟ್ಟಿನ ಆದೇಶ ಮಾಡಿದ್ದೀರಿ.
ಆದರೆ ನಿಮ್ಮ ಆದೇಶಕ್ಕೆ ಕಿಂಚಿತ್ತೂ ಮನ್ನಣೆ ನೀಡಿಲ್ಲ. ಇವತ್ತಿಗೂ ಪ್ರತಿ ನೋಂದಣಿಯೂ ಮಧ್ಯವರ್ತಿಗಳ ಮೂಲಕವೇ ನಡೆಯುತ್ತಿದೆ.
ಮಧ್ಯವರ್ತಿಗಳು ಸಬ್ ರಿಜಿಸ್ಟ್ರಾರ್ ಮತ್ತು ಜನರ ಮಧ್ಯೆ ಮಧ್ಯವರ್ತಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಸ್ತಿ ನೋಂದಣಿ ಮತ್ತು ಇ.ಸಿ ಇತರೆ ಕೆಲಸಗಳಿಗೆ ಜನರು ಮಧ್ಯವರ್ತಿಗಳ ಬಳಿ ಹೋಗಬೇಕಾಗಿದೆ. ಇತರೆ ಸರ್ಕಾರಿ ಕಚೇರಿಗಳಲ್ಲಿ ಇರುವಂತೆ ನೇರವಾಗಿ ಅರ್ಜಿ ಕೊಡುವ ಪರಿಪಾಠ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಇಲ್ಲ.
ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಪರೀತ ಭ್ರಷ್ಟಾಚಾರ ನಡೆಯುತ್ತಿದೆ. ಸಬ್ ರಿಜಿಸ್ಟ್ರಾರ್ ಅಂಟಿ ಚೆಂಬರ್ ಮಾಡಿಕೊಂಡು, ಹಣ ಪಡೆಯುತ್ತಾರೆ.
ಪ್ರತಿ ದಿನ ಕನಿಷ್ಠ 100 ರಿಂದ 120 ನೋಂದಣಿ ಆಗುತ್ತವೆ. ಎಲ್ಲಾ ನೋಂದಣಿಗಳು ಮಧ್ಯವರ್ತಿಗಳ ಮೂಲಕವೇ ಆಗುತ್ತದೆ. ಪ್ರತಿ ನೋಂದಣಿ ಮೌಲ್ಯಕ್ಕೆ ಇಂತಿಷ್ಟು ಹಣ ನಿಗದಿ ಮಾಡಿ, ಮಧ್ಯವರ್ತಿಗಳು ಹಣ ಪಡೆಯುತ್ತಾರೆ. ಎಲ್ಲಾ ನೋಂದಣಿಗಳಿಗೂ ಸಬ್ ರಿಜಿಸ್ಟ್ರಾರ್ ರೊಂದಿಗೆ ಮಧ್ಯವರ್ತಿಗಳೇ ವ್ಯವಹರಿಸುತ್ತಾರೆ. ಸಹಿ ಮಾಡುವಾಗ ಮಾತ್ರ ಆಸ್ತಿ ನೋಂದಣಿಗೆ ಸಂಬಂಧಪಟ್ಟವರನ್ನು ಕರೆಯುತ್ತಾರೆ. ಜನರಿಗೆ ಎಷ್ಟು ಸರ್ಕಾರಿ ಶುಲ್ಕ ಪಾವತಿಸಿದ್ದೇವೆ. ಎಷ್ಟು ರೂಪಾಯಿಗಳ ಸ್ಟ್ಯಾಂಪ್ ಪೇಪರ್ ಖರೀದಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಪಾಲು ಎಷ್ಟು, ಮಧ್ಯವರ್ತಿಗಳ ಪಾಲು ಎಷ್ಟು ಎಂಬ ಮಾಹಿತಿ ಗೊತ್ತಾಗುವುದಿಲ್ಲ.
ಒಟ್ಟಿಗೆ ಎಲ್ಲಾ ಸೇರಿ ಮಧ್ಯವರ್ತಿಗಳು ಪಡೆದಿರುತ್ತಾರೆ. ನಂತರ ಹಂಚಿಕೆ ಮಾಡುವುದು ಅವನ ಜವಾಬ್ದಾರಿ ಆಗಿರುತ್ತದೆ. ಒಂದು ನೋಂದಣಿಗೆ ಸರಾಸರಿ 15 ಸಾವಿರ ಲಂಚ ವಸೂಲಿ ಮಾಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಒಂದು ದಿನಕ್ಕೆ ಸುಮಾರು ಇಬ್ಬರು ಸಬ್ ರಿಜಿಸ್ಟ್ರಾರ್ ಗಳು ಸೇರಿ ಸುಮಾರು 120 ನೋಂದಣಿ ಮಾಡುತ್ತಾರೆ. ಒಟ್ಟಿಗೆ ಪ್ರತಿ ದಿನ ಕನಿಷ್ಠ 18 ಲಕ್ಷ ರೂಪಾಯಿ ಲಂಚ ವಸೂಲಿ ಆಗುತ್ತದೆ ಎಂಬ ಅಂದಾಜಿದೆ.
ಆದ್ದರಿಂದ ದಯಮಾಡಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು ಎಂದು ಕೋರಿದೆ.
ಬಿ ಎಂ ಸತೀಶ್
ಬಿಜೆಪಿ ರೈತ ಮೋರ್ಚಾ ರಾಜ್ಯ ಸಂಚಾಲಕ,
ಮಾಜಿ ಎಪಿಎಂಸಿ ಅಧ್ಯಕ್ಷ ಕೊಳೇನಹಳ್ಳಿ