ಹರ ಜಾತ್ರೆಯಲ್ಲಿ ನನ್ನ ನಿಲುವು ಏನೆಂಬುದನ್ನು ಹೇಳುತ್ತೇನೆ

ಹರಿಹರ : ಹರಜಾತ್ರೆ ಸಮಾವೇಶದಲ್ಲಿ ಮೀಸಲಾತಿ ವಿಚಾರದಲ್ಲಿ ತಮ್ಮ ನಿಲುವು ಏನೆಂಬುದನ್ನು ತಿಳಿಸುತ್ತೇನೆ ಎಂದು ಹರಿಹರ ಪೀಠದ ವಚನಾನಂದ ಶ್ರೀ ಹೇಳಿದರು.
ಹರಿಹರ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ಸರಕಾರ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಸರಕಾರ ಮಾಡಿರುವ ಪ್ರಕಟಣೆ ಬಗ್ಗೆ ಸದ್ಯ ಸ್ವಾಗತ ಮಾಡುತ್ತೇವೆ..ಹರ ಯಾವುದಕ್ಕೂವಿರೋಧವಿಲ್ಲ. ಹಾಗೆಯೇ ಯಾವುದಕ್ಕೂ ಮುಂದಾಗುವುದಿಲ್ಲ. ಈ ಕುರಿತು ಕಾನೂನು ತಜ್ಞರ ಬಳಿ ಚರ್ಚಿಸಿ, ಹಿಂದುಳಿದ ಅಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ನೀಡಿರುವ ಮಧ್ಯಂತರ ವರದಿ ಪರಿಶೀಲಿಸಿ, ಹರಜಾತ್ರೆಯ ಮೀಸಲು ಜಾಗೃತಿ ಸಮಾವೇಶದಲ್ಲಿ ತಮ್ಮ ನಿಲುವು ಘೋಷಣೆ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.
ಮೀಸಲಾತಿ ಕುರಿತು ಪ್ರವರ್ಗ 3ಬಿ ಯಿಂದ 2ಡಿ ಗೆ ಸೇರಿಸುವ ಬಗ್ಗೆ ಸರಕಾರ ಹೇಳಿದೆ. ಇದು ಹೇಗೆ, ಏನು? ನಮ್ಮ ಸಮುದಾಯಕ್ಕೆ ಸಿಗುವ ಅನುಕೂಲ ಎಲ್ಲದರ ಕುರಿತು ಕಾನೂನು ತಜ್ಞರು, ಸಮಾಜದ ಹಿರಿಯರ ಜತೆ ಚರ್ಚಿಸಿ ನಂತರವೇ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
ಪ್ರತಿ ವರ್ಷದಂತೆ ಈ ಬಾರಿಯೂ ಜನವರಿ 14 ಮತ್ತು 15 ರಂದು ಈ ಸಾಲಿನ ಹರಜಾತ್ರೆ ನಡೆಯಲಿದೆ, ಈ ಪ್ರಯುಕ್ತ ಬೃಹತ್ ಮೀಸಲಾತಿ ಜನಜಾಗೃತಿ ಸಮಾವೇಶದ ಜತೆ ರೈತರತ್ನ, ಯುವರತ್ನ, ಪೀಠಾರೋಹಣ ಕಾರ್ಯಕ್ರಮಗಳು ಜರುಗಲಿವೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.
,‘ರಾಜ್ಯ ಹಾಗೂ ಹೊರ ರಾಜ್ಯಗಳು ಸೇರಿದಂತೆ ವಿಶ್ವದಾದ್ಯಂತ ಗುರುತಿಸಿಕೊಂಡಿರುವ ಅಖಂಡ ಪಂಚಮಸಾಲಿ ಸಮಾಜವನ್ನು ಒಗ್ಗೂಡಿಸುವುದು ಪ್ರತಿ ವರ್ಷ ನಡೆಯುವ ಹರಜಾತ್ರೆ ಉದ್ದೇಶವಾಗಿದೆ’’ ಎಂದು ತಿಳಿಸಿದರು.
ಜ.14 ರಂದು ಸಮಸ್ತ ವೀರಶೈವ ಪಂಚಮಸಾಲಿ ಸಮಾಜದ ಬಾಂಧವರು ಬೃಹತ್ ಸಂಖ್ಯೆಯಲ್ಲಿ ಹರಿಹರ ನಗರದ ಪ್ರಮುಖ ಬೀದಿಗಳಲ್ಲಿ ತಲೆ ಮೇಲೆ ರೊಟ್ಟಿ ಬುತ್ತಿ ಹೊತ್ತು ಮೆರವಣಿಗೆ ಮೂಲಕ ಸಮಾವೇಶ ನಡೆಯುವ ಸ್ಥಳದವರೆಗೆ ಮೆರವಣಿಗೆ ಆಗಮಿಸುತ್ತಾರೆ. ಆ ಮೂಲಕ ಮೀಸಲಾತಿ ಹೋರಾಟಕ್ಕೆ ಸಮಸ್ತರನ್ನು ಸಜ್ಜುಗೊಳಿಸಲು ಜಾಗೃತಿ ಮೂಡಿಸಲಾಗುವುದು. ಅಂದು ಸಂಜೆ ರೈತರ ಸಮಾವೇಶ ನಡೆಯಲಿದೆ ಎಂದರು.
ಜ.15 ರಂದು ಬೆಳಗ್ಗೆ 5ನೇ ವರ್ಷದ ಪೀಠಾರೋಹಣ ಕಾರ್ಯಕ್ರಮ, ಯುವ ರತ್ನ ಸಮಾವೇಶ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು. ಸಮಾಜದ ಹಿರಿಯರು, ರೈತರು, ವ್ಯಾಪಾರಸ್ಥರು, ನೌಕರರು ಹಾಗೂ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಹರ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ನ್ಯಾಯವಾದಿ ಪ್ರಕಾಶ್ ಪಾಟೀಲ್, ಪ್ರಧಾನ ಧಮದರ್ಶಿ ಬಿ.ಸಿ. ಉಮಾಪತಿ, ನಿಕಟಪೂರ್ವ ರಾಜ್ಯಾಧ್ಯಕ್ಷ ಬಾವಿ ಬೆಟ್ಟಪ್ಪ, ಬಸವರಾಜ್ ದಿಂಡೂರ್, ಧರ್ಮದರ್ಶಿಗಳಾದ ಪಿ.ಡಿ ಶಿರೂರ್, ಚಂದ್ರಶೇಖರ ಪೂಜಾರ, ಹಾವೇರಿ ಜಿಲ್ಲೆ ಅಧ್ಯಕ್ಷ ನಾಗೇಂದ್ರ ಕಡಕೋಳ, ಹರಪನಹಳ್ಳಿ ಮಲ್ಲಿಕಾರ್ಜುನ ಸೇರಿ ನಾನಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

 
                         
                       
                       
                       
                       
                       
                       
                      