ರಾಜನಹಳ್ಳಿ ಶಿವಕುಮಾರ್ ಗೆ ಶಾಮನೂರು ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ವಿನಾಯಕ ಪೈಲ್ವಾನ್

ದಾವಣಗೆರೆ : ಹೆದರಿಸಿ, ಬೆದರಿಸಿ ದೂಡಾ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ಗೆ ಶಾಮನೂರು ಶಿವಶಂಕರಪ್ಪನವರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಎಂದು ಮಹಾನಗರ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್ ಪ್ರಶ್ನಿಸಿದ್ದಾರೆ.
ಭೂತದ ಬಾಯಲ್ಲಿ ಭಗವತ್ ಗೀತೆ ಎಂಬಂತೆ ಬಸವಣ್ಣನವರ ವಚನ ಹೇಳುವ ಶಿವಕುಮಾರ್, ಕನಕದಾಸರು ಹೇಳಿದಂತೆ ಕುಲ – ಕುಲ ಎಂದು ಹೊಡೆದಾಡಬೇಡಿ ಎಂಬುದನ್ನು ತಿಳಿದು ಬದುಕಬೇಕೆ ವಿನಃ ಜಾತಿ – ಧರ್ಮದ ಹೆಸರಿನಲ್ಲಿ ಬಡ ಮಕ್ಕಳನ್ನು ಬಾವಿಗೆ ತಳ್ಳಿ ಅವರ ಸಮಾಧಿ ಮೇಲೆ ಅಧಿಕಾರ ನಡೆಸುವುದನ್ನು ಬಿಡಬೇಕು ಎಂದು ತಿರುಗೇಟು ನೀಡಿದ್ದಾರೆ.
ಡಾ. ಶಾಮನೂರು ಶಿವಶಂಕರಪ್ಪ ಅವರಿಗೆ ನಿಮ್ಮಿಂದ ಸಂಸ್ಕೃತಿ ಪಾಠ ಕಲಿಯುವ ಅಗತ್ಯವೂ ಇಲ್ಲ ಅವಶ್ಯಕತೆಯೂ ಇಲ್ಲ . ನಿಮ್ಮ ಹೋರಾಟ ನ್ಯಾಯಯುತವಾಗಿದ್ದರೆ ಕಾನೂನು ಮೂಲಕ ಮಾಡಿ . ಈ ರೀತಿ ಬೀದಿಯಲ್ಲಿ ತಮ್ಮದೇ ಸರ್ಕಾರದ ಕಚೇರಿಗೆ ನುಗ್ಗಿ ಗಲಾಟೆ ಮಾಡುವುದು ಮತ್ತೊಬ್ಬರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಇದು ನಿಮ್ಮ ಸಂಸ್ಕೃತಿ ಏನು ಎಂಬುದು ಜನತೆಗೆ ಗೊತ್ತಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಾಮನೂರು ಶಿವಶಂಕರಪ್ಪನವರಿಗೆ ಅನುಭವವಾದಷ್ಟು ವಯಸ್ಸು ಆಗದ ಶಿವಕುಮಾರ್ ಬಿಜೆಪಿ ಪಕ್ಷದ ನಾಯಕರ ಅಣತಿಯಂತೆ ಕುಣಿಯುವುದನ್ನ ಮೊದಲು ಬಿಡಬೇಕೆಂದು ತಿಳಿಹೇಳಿದ್ದಾರೆ . ಎಸ್ ಎಸ್ ಮಲ್ಲಿಕಾರ್ಜುನ್ ಅವರು ತಪ್ಪು ಮಾಡಿದ್ದರೆ ಅಧಿಕಾರಿಗಳೇ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು, ಬಿಜೆಪಿ ರಾಜಕೀಯ ಲಾಭ ಪಡೆಯಲು ಪ್ರತಿಭಟನೆ ಮಾಡುತ್ತಾ ಅಧಿಕಾರಿಗಳ ವಿರುದ್ಧ ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

 
                         
                       
                       
                       
                       
                       
                       
                      