ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ..!!

ಕಾರ್ಕಳ: ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಕುದ್ರೊಟ್ಟು ಎಂಬಲ್ಲಿ ಕಾರಿನೊಳಗೆ ಪೆಟ್ರೋಲ್ ಸುರಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ ತಡರಾತ್ರಿ ನಡೆದಿದೆ.
ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಕುದ್ರೊಟ್ಟು ನಿವಾಸಿ ಕೃಷ್ಣ ಮೂಲ್ಯ( 48) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.
ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ತನ್ನ ಮಾರುತಿ ಓಮ್ನಿ ಕಾರಿನ ಒಳಗೆ ಕುಳಿತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಕೃಷ್ಣ ಸಫಲಿಗ ನಿನ್ನೆ ರಾತ್ರಿ ಪಕ್ಕದ ಅಕ್ಕನ ಮನೆಯಲ್ಲಿ ಅಕ್ಕನ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬಳಿಕ ಅಣ್ಣ ತಮ್ಮಂದಿರಿಗೆ ಜಮೀನಿನ ವಿಷಯದಲ್ಲಿ ತಕರಾರು ನಡೆದಿದ್ದು, ಮಾನಸಿಕವಾಗಿ ನೊಂದ ಕೃಷ್ಣ ಮೂಲ್ಯ ಸಚ್ಚೇರಿಪೇಟೆಯ ಬಸ್ಸು ತಂಗುದಾಣ ಹಾಗೂ ಇನ್ನಿತರ 2-3 ಕಡೆಗಳಲ್ಲಿ ಡೆತ್ನೋಟ್ ಬರೆದು ಅಂಟಿಸಿದ್ದು, ಅದರಲ್ಲಿ 3-4 ಮಂದಿಯಿಂದ ತನಗೆ ಲಕ್ಷಾಂತರ ರೂಪಾಯಿ ವಂಚನೆ ನಡೆದಿದೆ ಎಂದು ಪ್ರಸ್ತಾಪಿಸಿದ್ದಾನೆ. ಅಲ್ಲದೇ ಜಮೀನಿನ ವಿಷಯದಲ್ಲಿ ಮಧ್ಯವರ್ತಿಯೊಬ್ಬ ವಂಚಿಸಿದ್ದಾನೆ ಎಂದು ಜಾರಿಗೆಕಟ್ಟೆಯಲ್ಲಿರುವ ಆತನ ಕಚೇರಿಗೂ ಬೆಂಕಿ ಹಚ್ಚಿದ್ದು, ಹೆಚ್ಚಿನ ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ತಾನು ತನ್ನ ಕಾರು ಸಹಿತ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಕಾರ್ಕಳ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.