ಅನುಕಂಪದ ಆಧಾರದ ನೇಮಕಾತಿಗೆ ನೂತನ ಸುತ್ತೋಲೆ ಹೊರಡಿಸಿದ ಸರ್ಕಾರ

ಬೆಂಗಳೂರು: ಮಕ್ಕಳಿಲ್ಲದ ವಿಚ್ಚೇದಿತ ಪುರುಷ ಅಥವಾ ಮಹಿಳೆ ಸರ್ಕಾರಿ ನೌಕರಿಯಲ್ಲಿ ಇರುವಾಗಲೇ ಮೃತಪಟ್ಟರೆ, ಅವರ ಅವಲಂಬಿತ ಸಹೋದರ, ಸಹೋದರಿಯರಿಗೆ ಅನುಕಂಪದ ಆಧಾರದ ನೇಮಕಾತಿಗೆ ಪರಿಗಣಿಸಬಹುದು ಎಂದು ಸರ್ಕಾರ ಬುಧವಾರ ಹೊರಡಿಸಿದ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ.
ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಿ 2021ರ ಏ.9ರಂದು ಆದೇಶ ಹೊರಡಿಸಲಾಗಿದ್ದು, ಅದಕ್ಕೆ ಈ ನಿಯಮವೂ ಅನ್ವಯಿಸುತ್ತದೆ. ನೇಮಕಾತಿಗೆ ಪರಿಗಣಿಸುವ ಮೊದಲು ಮೃತರ ಮೇಲೆ ಅವಲಂಬಿತವಾಗಿರುವ, ಅವರ ಜತೆ ವಾಸಿಸುತ್ತಿರುವ ಕುರಿತು ದೃಢೀಕರಿಸಬೇಕು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ.
ಮೃತ ವಿಚ್ಚೇದಿತ ನೌಕರರಿಗೆ ಮಕ್ಕಳಿದ್ದರೆ, ನಿಯಮದಂತೆ ಅಂತಹ ಮಕ್ಕಳು ಅವರ ಮೇಲೆ ಅವಲಂಬಿತರಾಗಿರಬೇಕು. ಅವರ ಜತೆ ವಾಸಿಸುತ್ತಿರಬೇಕು. ವಿವಾಹಿತ ನೌಕರರು ಮೃತಪಟ್ಟರೆ ಅವರ ಪತಿ ಅಥವಾ ಪತ್ನಿ, ಮಕ್ಕಳು, ಅವಿವಾಹಿತರಾಗಿದ್ದರೆ ಅವರ ಸಹೋದರ, ಸಹೋದರಿಯರು ಅನುಕಂಪದ ನೇಮಕಾತಿಗೆ ಅರ್ಹರಾಗಿರುತ್ತಾರೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

 
                         
                       
                       
                       
                       
                      