ತರಳಬಾಳು ಹುಣ್ಣಿಮೆ: ಸಿರಿಗೆರೆ ಮಠ ಹಾಗೂ ಉಜ್ಜೈನಿ ಪೀಠದ ಭಕ್ತರ ನಡುವೆ ಕಲ್ಲು ತೂರಾಟ.!
ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ : ಮಾರ್ಗ ಮಧ್ಯೆ ನಡೆಯಿತು ಕಲ್ಲು ತೂರಾಟ, ಮಹಿಳೆ ಸೇರಿದಂತೆ , ಪೊಲೀಸರಿಗೂ ಗಾಯ
ದಾವಣಗೆರೆ : ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ 9 ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ತರಳಬಾಳು ಹುಣ್ಣಿಮೆಗೆ ಕೆಲ ದುಷ್ಕರ್ಮಿಗಳಿಂದ ಭಂಗ ತಂದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಉಜ್ಜಿನಿ ಪೀಠದ ಭಕ್ತರು, ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಪೀಠದ ಭಕ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಉಜ್ಜಿನಿ ಬಳಿ ಇರುವ ಕಾಳಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಏಳು ಗಂಟೆ ಹೊತ್ತಿಗೆ ನಡೆದಿದೆ. ಈ ವೇಳೆ ಕಲ್ಲು ತೂರಾಟ ಕೂಡ ನಡೆದಿದೆ. ಅಲ್ಲದೇ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಘಟನಾ ಸಂಬಂಧ ಇಬ್ಬರು ಮಹಿಳೆಯರು, ಪೊಲೀಸ್ ಪೇದೆ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಜತೆಗೆ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಕಾಳಾಪುರ ಗ್ರಾಮದ ಬಸಕ್ಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಪೇದೆ ಲಿಂಗಯ್ಯ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಯಲ್ಲಿದ್ದವರಿಗೆ ಬಂದು ಹೊಡೆದಿದ್ದಾರೆಂದು ಗಾಯಾಳುಗಳು ಆರೋಪಿಸಿದ್ದಾರೆ. ದಾಳಿಯ ವೇಳೆ ದುಷ್ಕರ್ಮಿಗಳು ಗ್ರಾಮಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪವು ಬಂದಿದೆ.
ಏತಕ್ಕಾಗಿ ಗಲಾಟೆ ? : ತರಳಬಾಳು ಹುಣ್ಣಿಮೆ ಸಂಬಂಧ ದಾವಣಗೆರೆಯಿಂದ ಶಿವಸೈನ್ಯ ಸಂಘಟನೆ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡಿತ್ತು. ಈ ರ್ಯಾಲಿಗೆ ದಾವಣಗೆರೆಯಲ್ಲಿ ಚಾಲನೆ ಸಿಕ್ಕಿತ್ತು. ನಂತರ ಸಿರಿಗೆರೆಗೆ ಹೋಗಿ ಅಲ್ಲಿಂದ ಕೊಟ್ಟೂರು ಮಾರ್ಗವಾಗಿ ಹೋಗಲಾಗಿತ್ತು. ಹೀಗಿರುವಾಗ ಸಿರಿಗೆರೆ ಮಠದ ಭಕ್ತರು ಹಮ್ಮಿಕೊಂಡ ಬೈಕ್ ರಾಲಿ ಕಾಳಾಪುರ ಪ್ರವೇಶ ಮಾಡಿದಾಗ ಬೈಕ್ ರಾಲಿಯಲ್ಲಿ ಪಾಲ್ಗೊಂಡವರು ಹಾಗೂ ಕಾಳಾಪುರ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಮಾಡಿ, ದುಷ್ಕರ್ಮಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಸದ್ಯ ಕಾಳಾಪುರದಲ್ಲಿ ಶಾಂತಿ ಸುವ್ಯವಸ್ಥೆ ಇದ್ದು, ಯಾವುದೇ ಸಮಸ್ಯೆ ಇಲ್ಲ. ಆದರೆ ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಉಜ್ಜಿನಿಯ ಮರಳುಸಿದ್ದೇಶ್ವರ ದೇವಸ್ಥಾನ ಸಾಧು ಸದ್ಧರ್ಮ ಪೀಠದ ಆರಾಧ್ಯ ದೈವವಾಗಿದ್ದು, ಈ ಪೀಠ ಸಿರಿಗೆರೆ ಮಠಕ್ಕೆ ಸೇರಬೇಕೆಂದು ಹಲವು ದಿನಗಳಿಂದ ಹೋರಾಟ ನಡೆದೇ ಇದೆ. ಅಲ್ಲದೇ ಮರಳು ಸಿದ್ದರನ್ನು ಸಾಧು ಸದ್ಧರ್ಮರನ್ನು ದೈವಸ್ಥಾನದಲ್ಲಿ ಇಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಕೊಟ್ಟೂರಿನಲ್ಲಿಯೇ ತರಳಬಾಳು ಹುಣ್ಣಿಮೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ವಿಚಾರ ಮುನ್ನೆಲೆಗೆ ಬಂದಿದೆ. ಇನ್ನು ಕಾಳಾಪುರದಲ್ಲಿ ಉಜ್ಜಿನಿಯ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ 9 ಪಾದುಕೆಗಳು ಇದ್ದು, ಭರತ ಹುಣ್ಣಿಮೆ ವೇಳೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ಭಾಗವಾಗಿ ಇಲ್ಲಿ ಮಹತ್ತರ ಪೂಜಾ ವಿಧಿ ವಿಧಾನ ನಡೆಯುತ್ತಿವೆ. ಇದೇ ಕಾರಣಕ್ಕೆ ಕೆಲವರು ದಾಳಿಮಾಡಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ ಅಲ್ಲದೇ, ಮಾರಾಮಾರಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಉಜ್ಜೈನಿ ಮಠ ಮತ್ತು ಉಜ್ಜೈನಿ ಗ್ರಾಮಕ್ಕೆ ತರಳುಬಾಳು ಸಿರಿಗೇರಿ ಮಠದವರು ತೆರಳ ಬಾರದು ಎನ್ನುವ ಅಲಿಖಿತ ನಿಯಮವಿದೆ.
ಬೈಕ್ ರ್ಯಾಲಿ ವೇಳೆ ಉಜ್ಜೈನಿ ಗ್ರಾಮಕ್ಕೆ ತೆರಳಬಾರದು ಎನ್ನುವ ನಿಯಮವಿದ್ರು, ಕಾಳಪುರ ಕ್ರಾಸ್ ಬಳಿಯಿಂದ ಉಜ್ಜೈನಿ ಪೀಠವಿರೋ ಉಜ್ಜೈನಿ ಗ್ರಾಮಕ್ಕೆ ಕೆಲವರು ನುಗ್ಗಲು ಯತ್ನಿಸಿದ್ದಾರೆ, ಈ ವೇಳೆ ಕಾಳಪುರ ಗ್ರಾಮದ ಜನರ ಮೇಲೆ ಕಲ್ಲು ತೂರಾಟ ಮಾಡಲಾಗಿದೆ, ಗ್ರಾಮದ ಕೆಲ ಮನೆ, ಬೈಕ್, ಜೀಪ್, ಅಲ್ಲದೆ ಮಹಿಳೆಯರ ಜೊತೆಗೆ ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿದೆ
ಕಾಳಪುರ ಗ್ರಾಮದಲ್ಲಿ ಕಲ್ಲು ತೂರಾಟ ಹಿನ್ನೆಲೆಯಲ್ಲಿ ನಾಲ್ಕು ಜನರಿಗೆ ಸಣ್ಣ ಪುಟ್ಟ ಗಾಯ ಆಗಿದೆ. ಎಸ್ಪಿ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ವಿಜಯನಗರ ಡಿಸಿ ವೆಂಕಟೇಶ ಹೇಳಿದ್ದಾರೆ.
ತರಳಬಾಳು ಹುಣ್ಣಿಮೆ ಹಿನ್ನೆಲೆಯಲ್ಲಿ ಬೈಕ್ ಬ್ಯಾಲಿ ನಡೆಯುತ್ತಿತ್ತು. ರ್ಯಾಲಿ ವೇಳೆ ಉಜ್ಜನಿ ಮತ್ತು ಕಾಳಪುರ ಗ್ರಾಮಸ್ಥರ ಮಧ್ಯೆ ಸಂಘರ್ಷ ಆಗಿದೆ. ನಾಲ್ಕು ಜನರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮನೆಗಳಿಗೆ ನುಗ್ಗಿ ಕಲ್ಲು ತೂರಾಟ, ಬೈಕ್‌ಗಳಿಗೆ ಬೆಂಕಿ ಹಚ್ಚಿರುವ ಕುರಿತು ಎಸ್ಪಿ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ವಿಜಯನಗರ ಡಿಸಿ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಎಸಿ, ಎಸ್ಪಿ ಭೇಟಿ ನೀಡಿದ್ದಾರೆ, ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣ ತರಲಾಗಿದೆ, ಎಸ್ಪಿ, ಕೊಟ್ಟೂರು ತಹಶಿಲ್ದಾರ ಸ್ಥಳದಲ್ಲಿ ಮುಕ್ಕಾಂ ಹೂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.