ಚುನಾವಣಾ ವೆಚ್ಚ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ಚುನಾವಣಾ ವೆಚ್ಚದ ನಿಖರ ಮಾಹಿತಿ ನೀಡಿ
ಚಿತ್ರದುರ್ಗ :ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ನಿಖರವಾದ ಮಾಹಿತಿಯನ್ನು ಸರಿಯಾದ ನಮೂನೆಗಳ ಮೂಲಕ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಚುನಾವಣಾ ತರಬೇತಿ ನಿರ್ವಹಣಾ ಕೋಶದ ವತಿಯಿಂದ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಚುನಾವಣಾ ವೆಚ್ಚ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಚುನಾವಣೆಗಳು ಹೊಸ ಚುನಾವಣೆಗಳು ಎಂದು ಭಾವಿಸಬೇಕು. ಚುನಾವಣಾ ಕರ್ತವ್ಯವನ್ನು ಮೊದಲ ಆದ್ಯತಾ ಕರ್ತವ್ಯ ಎಂದು ಭಾವಿಸಿ, ಪ್ರತಿಯೊಂದು ತಂಡದವರು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಮುಂಚಿತವಾಗಿ ಹಾಜರಿದ್ದು, ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ನಿಖರವಾದ ಮಾಹಿತಿಯನ್ನು ಸರಿಯಾದ ನಮೂನೆಗಳ ಮೂಲಕ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು.
ಮುಖ್ಯ ಲೆಕ್ಕಾಧಿಕಾರಿಗಳು, ಜಿಲ್ಲಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿಗಳು ಹಾಗೂ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಡಿ.ಆರ್.ಮಧು ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ತರಬೇತಿ ನೀಡಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿ ಎನ್.ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಜಿಲ್ಲಾ ಖಜಾನೆ ಉಪನಿರ್ದೇಶಕಿ ರತ್ನಕುಮಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶ ನಿರ್ದೇಶಕ ಎಂ.ಮಹೇಂದ್ರಕುಮಾರ್, ಡಯಟ್ ಹಿರಿಯ ಉಪನ್ಯಾಸಕ ಅಯುಬ್ ಸೊರಬ ಹಾಗೂ ಎಲ್ಲ ವಿಧಾನಸಭಾ ಕ್ಷೇತ್ರಗಳ ಜಿಲ್ಲಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿಗಳು, ಸಹಾಯಕ ವೆಚ್ಚ ಉಸ್ತುವಾರಿ ವೀಕ್ಷಕರು, ವಿಡಿಯೋ ಕಣ್ಗಾವಲು ತಂಡದ ಅಧಿಕಾರಿಗಳು, ವಿಡಿಯೋ ವೀಕ್ಷಣ ತಂಡದ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್ ಅಧಿಕಾರಿಗಳು ಇದ್ದರು.