ಸ್ಮಾರ್ಟ್ ಸಿಟಿಗೆ ಸ್ಮಾರ್ಟ್ ರೈಲ್ವೆ ನಿಲ್ದಾಣ, 17.50 ಕೋಟಿಯ ಸುಸಜ್ಜಿತ ರೈಲ್ವೆ ನಿಲ್ದಾಣಕ್ಕೆ ಚಾಲನೆ ನೀಡಿದ ಸಂಸದ ಜಿ.ಎಂ.ಸಿದ್ದೇಶ್ವರ

ದಾವಣಗೆರೆ:ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆ ಆದ ಮೇಲೆ ಸ್ಮಾರ್ಟ್ ಸಿಟಿಗೆ ಸರಿಹೊಂದುವ ರೈಲ್ವೆ ನಿಲ್ದಾಣ ಆಗಬೇಕು ಹಾಗೂ ತಿಂಗಳಲ್ಲಿ ಸರಾಸರಿ 1.5 ಕೋಟಿಯಷ್ಟು ವರಮಾನ ಬರುವ ದಾವಣಗೆರೆ ರೈಲ್ವೆ ನಿಲ್ದಾಣ ಅತ್ಯಾಧುನಿಕ ಕಟ್ಟಡ ಹೊಂದಬೇಕು ಎಂಬ ನನ್ನ ಆಶಯ ಇಂದು ಈಡೇರಿದೆ ಎಂದು ಸಂಸದರಾದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಡಿಸಿಎಂ ಬಡಾವಣೆ ಬಳಿಯ ನವೀಕೃತ ರೈಲ್ವೆ ಕೆಳ ಸೇತುವೆ (ಯುಆರ್‍ಬಿ) ಹಾಗೂ ರೈಲ್ವೆ ನಿಲ್ದಾಣದ ನೂತನ ಕಟ್ಟಡವನ್ನು ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನನ್ನ ಲೋಕಸಭಾ ಅವಧಿಯಲ್ಲಿ ನನಗೆ ತೃಪ್ತಿ ನೀಡಿದ ಕೆಲಸಗಳಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವೂ ಕೂಡ ಒಂದು. ಕೋವಿಡ್ ಆರ್ಥಿಕ ಸಂಕಷ್ಟದ ನಡುವೆಯೂ ಕೂಡ ರೈಲ್ವೆ ಇಲಾಖೆಯ ಸಾಮಥ್ರ್ಯ ಸ್ವಲ್ಪವೂ ಕಡಿಮೆಯಾಗಿಲ್ಲ. ಕೋವಿಡ್ ನಿಂದ ಲಾಕ್‍ಡೌನ್ ಆದ ಸಮಯದಲ್ಲಿ ಹಗಲಿರುಳೆನ್ನದೇ ಕಾಯನಿರ್ವಹಿಸಿದ್ದ ರೈಲ್ವೆ ನೌಕರರಿಗೆ ಅಭಿನಂದಿಸಿದರು. ನಗರದಲ್ಲಿ ರೂ. 17.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನವೀಕೃತ ರೈಲ್ವೆ ನಿಲ್ದಾಣವನ್ನು ಮುಂದಿನ 2 ವರ್ಷಗಳಲ್ಲಿ ಜಿ ಪ್ಲಸ್ 2 ಮಾದರಿ ಕಟ್ಟಡವಾಗಿ ಪರಿವರ್ತಿಸುವ ಗುರಿ ಹೊಂದಿದ್ದೇವೆ ಎಂದರು.
ನಗರದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿ ಇನ್ನೂ ಮುಗಿದಿಲ್ಲ. ಆದರೆ ರೈಲ್ವೆ ನಿಲ್ದಾಣ ಕೈಗೆತ್ತಿಕೊಂಡ ಒಂದು ವರ್ಷದಲ್ಲೇ ಪೂರ್ಣಗೊಳಿಸಲಾಗಿದೆ. ಇದಕ್ಕೆ ಕೇಂದ್ರದ ಮಾಜಿ ಸಚಿವ ಸುರೇಶ್ ಅಂಗಡಿ ಕಾರಣೀಭೂತರು ಎಂದು ಅವರನ್ನು ಸ್ಮರಿಸಿದರು.
ರೈಲ್ವೆ ನಿಲ್ದಾಣವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಫುಟ್‍ಓವರ್ ಬ್ರಿಡ್ಜ್, ವಿಶಾಲವಾದ ಫ್ಲಾಟ್‍ಫಾರ್ಮ್ ಶೆಲ್ಟರ್, ಸ್ಟೇಷನ್ ಕಟ್ಟಡ, ಪಾರ್ಕಿಂಗ್ ಹಾಗೂ ಗಾರ್ಡನ್ ವ್ಯವಸ್ಥೆ, ಲಿಫ್ಟ್, ಪಿ.ಆರ್‍ಎಸ್ ಸೌಲಭ್ಯ, ವಿಐಪಿ ಲಾಡ್ಜ್, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕಾಯುವ ಸಭಾಂಗಣ, ಅತ್ಯಾಧುನಿಕ ಮಿಸಲಾತಿ ವ್ಯವಸ್ಥೆ, ಬಸ್‍ಬೇ, ವಿಶ್ರಾಂತಿ ಕೊಠಡಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಗೂ ರೈಲ್ವೆ ಪ್ಲಾಟ್‍ಫಾರ್ಮ್ ಟಿಕೆಟ್ ಅನ್ನು ರೂ.10 ಕ್ಕೆ ಸೀಮಿತಗೊಳಿಸಲಾಗಿದೆ ಎಂದು ಸೂಚಿಸಿದರು.
ರೈಲ್ವೆ ಕಟ್ಟಡದ ಹೊರಗಡೆ ವಿಶಾಲವಾದ ಆಗಮನ ಮತ್ತು ನಿರ್ಗಮನ ರಸ್ತೆಗಳು, ವಾಹನ ನಿಲುಗಡೆ ಪ್ರದೇಶ, ಸೆಲ್ಪಿ ಪಾಯಿಂಟ್ (ಐ ಲವ್ ಡಿವಿಜಿ), ಆಟೋ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಮುಖ್ಯ ಪ್ರವೇಶ ದ್ವಾರ ಎದುರಿಗೆ ನಿರ್ಮಿಸಿರುವ 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರುತ್ತಿರುವ ಬೃಹತ್ ರಾಷ್ಟ್ರಧ್ವಜ, ಸುಂದರವಾದ ಗೋಡೆ ನಿರ್ಮಾಣ, ಟಿಕೇಟ್ ಕೌಂಟರ್, ಅತ್ಯಧುನಿಕ ಶೌಚಾಲಯ ಸೇರಿದಂತೆ ವಿವಿಧ ಸವಲತ್ತುಗಳು ಪ್ರಯಾಣಿಕರಿಗೆ ಸಂತಸ ತರಲಿದೆ ಎಂದರು.
ರೈಲು ನಿಲ್ದಾಣದ ಆವರಣದಲ್ಲಿ ವಿಮಾನ ನಿಲ್ದಾಣದಲ್ಲಿರುವ ಬೆಳಕು ವಿನ್ಯಾಸ ಮಾದರಿಯಲ್ಲಿ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಲಾಗಿದ್ದು, ಇದರಿಂದ ಬಹಳಷ್ಟು ವಿದ್ಯುತ್ ಉಳಿತಾಯವಾಗಲಿದೆ. ಹಾಗೂ ರೈಲು ನಿಲ್ದಾಣದ ನೂತನ ಕಟ್ಟಡದ ಮೇಲೆ ಇನ್ನೊಂದು ಮಹಡಿಯನ್ನು ನಿರ್ಮಿಸಿ, ಅಭಿವೃದ್ಧಿಗೊಳಿಸುವ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಅದಕ್ಕೂ ಮಂಜೂರಾತಿ ದೊರೆಯಲಿದೆ. ಕಟ್ಟಡ ನಿರ್ಮಾಣದ ನಂತರ ಮಹಡಿ ಮೇಲೆ ಸೌರ ಫಲಕಗಳನ್ನು ಅಳವಡಿಸಿ ನಿಲ್ದಾಣಕ್ಕೆ ಅಗತ್ಯ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ರೈಲು ನಿಲ್ದಾಣದ ಪಕ್ಕದ ಉಪವಿಭಾಗಾಧಿಕಾರಿ ಕಚೇರಿಯ ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ಉದ್ದೇಶಿಸಲಾಗಿದೆ. ಈ ಜಾಗಕ್ಕೆ ಪರ್ಯಾಯವಾಗಿ ರೈಲ್ವೆ ಇಲಾಖೆಯು ದೊಡ್ಡಬಾತಿ ಬಳಿ ಜಾಗ ನೀಡಲಿದೆ. ಉಪವಿಭಾಗಾಧಿಕಾರಿ ಕಚೇರಿ ನಿರ್ಮಿಸಲು ರೂ. 5 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ನೂತನ ಕಚೇರಿಯನ್ನು ನಿರ್ಮಿಸಲಾಗುವುದು. ಈಗಿರುವ ಉಪವಿಭಾಗಾಧಿಕಾರಿ ಕಚೇರಿ ಜಾಗದಲ್ಲಿ ರೈಲು ನಿಲ್ದಾಣಕ್ಕೆ ಪ್ರವೇಶ ದ್ವಾರ ನಿರ್ಮಿಸಲಾಗುವುದು. ಜೊತೆಗೆ ಪಾರ್ಕಿಂಗ್ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು.
ಬಾಣಾವರದಿಂದ ದಾವಣಗೆರೆ ಮಾರ್ಗವಾಗಿ ಹುಬ್ಬಳ್ಳಿವರೆಗೆ ರೈಲ್ವೆ ಲೈನ್ ಎಲೆಕ್ಟ್ರಿಫಿಕೇಷನ್ ಗಾಗಿ 160 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ದೇಶದಲ್ಲಿರುವ ಬಹುತೇಕ ಎಲ್ಲಾ ಮಾನವರಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ತೆರವುಗೊಳಿಸಲಾಗಿದೆ. ಹಾಗೂ ಆತ್ಮನಿರ್ಭರ ಭಾರತ್ ಇದರ ಉದ್ದೇಶಗಳನ್ನು ಈಡೇರಿಸಲು ರೈಲ್ವೆ ಇಲಾಖೆ ಈಗಲೂ ಬದ್ಧವಾಗಿದೆ ಎಂದರು.
2012-13 ರಲ್ಲಿ ಪ್ರತಿದಿನ 4 ರಿಂದ 5 ಕಿ.ಮೀ ರೈಲ್ವೆ ಟ್ರ್ಯಾಕ್ ನಿರ್ಮಾಣ ಆಗ್ತಾ ಇತ್ತು. ಆದರೆ ಈಗ ಪ್ರತಿನಿತ್ಯ ಸರಾಸರಿ 23 ಕಿ.ಮೀ. ರೈಲ್ವೆ ಟ್ರ್ಯಾಕ್ ನಿರ್ಮಾಣ ಆಗುತ್ತಿದೆ. ಅಲ್ಲದೇ ಪ್ರಧಾನಮಂತ್ರಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು 503 ಯೋಜನೆಗಳನ್ನು ಪೂರ್ಣಗೊಳಿಸುವ ಹಂತಕ್ಕೆ ತರಲಾಗಿದೆ. ಹರಿಹರ ನಗರದ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ. ಹರಿಹರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕೋವಿಡ್ ಕಾರಣಕ್ಕೆ ಉಂಟಾದ ಆರ್ಥಿಕ ಸಂಕಷ್ಟದಿಂದ ಮಂಜೂರಾತಿ ಸಿಗಲು ವಿಳಂಬವಾಗಿದೆ. ಮುಂಬರುವ ದಿನಗಳಲ್ಲಿ ಮಂಜೂರಾತಿ ಸಿಗಲಿದೆ ಎಂದರು. ಹಾಗೂ ಹರಿಹರದ ಅಮರಾವತಿ ಬಳಿ ರೈಲ್ವೆ ನಿಲ್ದಾಣಕ್ಕೆ 30 ಕೋಟಿ ವೆಚ್ಚದಲ್ಲಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು ಎಂದರು.
ಹನುಮನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯ ವ್ಯವಸ್ಥೆಯನ್ನು ಈ ಹಿಂದಿನಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಜಿ.ಎಂ.ಐ.ಟಿ ಕಾಲೇಜಿನ ಸಮೀಪದ ಕರೂರಿನಲ್ಲಿನ 203ನೇ ರೈಲ್ವೆ ಗೇಟ್ ಬಳಿ ಜುಲೈನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ರೂ. 15 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣದ ಆಧುನೀಕರಣ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ರೂ. 5 ಕೋಟಿ ವೆಚ್ಚದಲ್ಲಿ ಎಸ್ಕಲೇಟರ್ (ಚಲಿಸುವ ಮೆಟ್ಟಿಲು) ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಅದರಲ್ಲೂ ಎಸ್ಕಲೇಟರ್ ರಾಜ್ಯದ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಬೆಂಗಳೂರು, ಮೈಸೂರು ಬಿಟ್ಟರೆ ಇನ್ನಿತರ ಯಾವುದೇ ಜಿಲ್ಲೆಗಳಲ್ಲೂ ಇರಲಿಲ್ಲ. ಇದೀಗ ದಾವಣಗೆರೆಯಲ್ಲಿ ಆಗಿರುವುದು ಸಂತಸಕರ ಎಂದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದರುವ ಅಶೋಕ ರೈಲ್ವೆ ಗೇಟ್ ಬಳಿ ಅಂಡರ್ ಪಾಸ್ ನಿರ್ಮಿಸಲು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಜಮೀನಿನ ಮಾಲೀಕರೊಂದಿಗೆ ಜಿಲ್ಲಾಡಳಿತ ಮಾತುಕತೆ ನಡೆಸಿದ್ದು, ಶೀಘ್ರವೇ ಪರ್ಯಾಯ ಜಾಗವನ್ನು ಕೊಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುವುದು. ಹರಿಹರದಲ್ಲಿ 47 ಎಕರೆ ಜಮೀನಿನಲ್ಲಿ ಎಥನಾಲ್ ಘಟಕವು ಶೀಘ್ರದಲ್ಲೆ ಸ್ಥಾಪನೆಯಾಗಲಿದೆ. ಮಾಯಕೊಂಡದಿಂದ ಹರಿಹರದವರೆಗೆ ಈಗಾಗಲೇ ರೂ.250 ಕೋಟಿ ವೆಚ್ಚದಲ್ಲಿ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಮೆಗಾ ಜವಳಿ ಪಾರ್ಕ್ ನಿರ್ಮಿಸಲು 1038 ಎಕರೆ ಜಮೀನಿನ ಅಗತ್ಯವಿದ್ದು, ಇಲ್ಲಿಯವರೆಗೂ ಜಮೀನು ಸ್ವಾಧೀನ ನಡೆದಿಲ್ಲ. ಯಾವುದೇ ಕಾಮಗಾರಿ, ಯೋಜನೆಗಳನ್ನು ಪರಿಪೂರ್ಣಮಾಡಬೇಕೆಂದರೆ ಜಾಗದ ಕೊರತೆ ಇದೆ ಎಂದ ಅವರು ವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ತಕ್ಕಂತೆ ವಿಮಾನ ನಿಲ್ದಾಣ ಆರಂಭಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಪ್ರಪಂಚದಲ್ಲಿಯೇ ನಾಲ್ಕನೇ ಅತಿದೊಡ್ಡ ರೈಲ್ವೆ ನೆಟ್‍ವರ್ಕ್ ಎಂಬ ಖ್ಯಾತಿಯನ್ನು ನಮ್ಮ ಇಂಡಿಯನ್ ರೈಲ್ವೆ ಹೊಂದಿದೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಗೆ ತಕ್ಕ ಹಾಗೆ ಸ್ಮಾರ್ಟ್ ರೈಲ್ವೆ ನಿಲ್ದಾಣ ಆಗಿರುವುದು ಸಂತೋಷವಾಗಿದೆ. ಪ್ರಸ್ತುತ ದೇಶದ ಶೇಕಡ 33 ರಷ್ಟು ಸರಕು ಸಾಗಾಟ ರೈಲ್ವೆ ಮೂಲಕ ನಡೆಯುತ್ತಿದೆ. ಇದನ್ನು 2030 ರ ವೇಳೆಗೆ ಶೇಕಡ 50 ಕ್ಕೆ ಮುಟ್ಟಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.
ಬೇಡಿಕೆಗೆ ಮುಂಚೆಯೇ ಮೂಲಸೌಕರ್ಯ ಸಾಮಥ್ರ್ಯವನ್ನು ಸೃಷ್ಟಿಸುವುದು ರಾಷ್ಟ್ರೀಯ ರೈಲ್ವೆ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, 2030 ರೊಳಗೆ ದೇಶಾದ್ಯಂತ ಬ್ರಾಡ್‍ಗೇಜ್‍ನ್ನು ಸಂಪೂರ್ಣ ಎಲೆಕ್ಟ್ರಿಫಿಕೇಷನ್ ಮಾಡುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಈಗಾಗಲೇ ಶೇಕಡ 58 ರಷ್ಟು ಎಲೆಕ್ಟ್ರಿಫಿಕೇಶನ್ ಕಾರ್ಯ ಪೂರ್ಣಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಪೌರರಾದ ಎಸ್.ಟಿ.ವೀರೇಶ್, ದೂಡ ಅಧ್ಯಕ್ಷರಾದ ಶಿವಕುಮಾರ್, ವಿಭಾಗೀಯ ಮುಖ್ಯ ವ್ಯವಸ್ಥಾಪಕರಾದ ರಾಹುಲ್ ಅಗರ್‍ವಾಲ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮುಖಂಡರಾದ ಯಶವಂತರಾವ್ ಜಾದವ್, ವೀರೇಶ್ ಹನಗವಾಡಿ, ಲೋಕಿಕೆರೆ ನಾಗರಾಜ್, ಸುಧಾ ಜಯಪ್ರಕಾಶ್, ಲಿಂಗರಾಜ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.