ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಉಚಿತ ಲಸಿಕೆ ನೀಡುವಂತೆ ಲಿಯಾಖತ್ ಅಲಿ ಆಗ್ರಹ

ದಾವಣಗೆರೆ: ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ಕೂಡಲೇ ಉಚಿತ ಲಸಿಕೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ನ ಜಿಲ್ಲಾ ಕಾರ್ಯಾಧ್ಯಕ್ಷ ಲಿಯಾಖತ್ ಅಲಿ ಆಗ್ರಹಿಸಿದ್ದಾರೆ.
ಕೊರೊನ ಎರಡನೇ ಅಲೆಯ ಲಾಕ್ಡೌನ್ ಮುಗಿದಿರುವುದರಿಂದ ಎಲ್ಲಾ ಕಾರ್ಮಿಕ ವರ್ಗದವರು ಪೂರ್ಣ ಪ್ರಮಾಣದಲ್ಲಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಆದ್ದರಿಂದ ತಕ್ಷಣ ಅವರಿಗೆ ಲಸಿಕೆ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಗೃಹ ನಿರ್ಮಾಣ ಕಾರ್ಮಿಕರು, ಕೂಲಿ ಕಾರ್ಮಿಕರು, ಹಮಾಲರು ಮತ್ತು ಮೆಕ್ಯಾನಿಕ್ ಗಳು, ಚಾಲಕರು, ನಿರ್ವಾಹಕರು, ಕ್ಲೀನರ್ ಗಳು ಮುಂತಾದ ಕಾರ್ಮಿಕರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ಹಲವಾರು ಜನಗಳ ಮಧ್ಯೆ ಬೆರೆತು ತಮ್ಮ ಕೆಲಸವನ್ನ ನಿರ್ವಹಿಸಬೇಕಾಗುತ್ತದೆ.
ಹಾಗೂ ಈ ವರ್ಗದವರಲ್ಲಿ ಅತ್ಯಂತ ಬಡವರು, ಅನಕ್ಷರಸ್ಥರಿದ್ದು ಇವರಿಗೆ ಜಾಗೃತಿ ಇಲ್ಲದ ಕಾರಣ ಅಪಾಯದ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ ಇವರಿಗೆ ಲಸಿಕೆ ನೀಡಿದರೆ ನಿರ್ಭಯವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಬಹುದಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಹಲವಾರು ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ತಮ್ಮ ಸಿಬ್ಬಂದಿ ವರ್ಗದವರಿಗೆ ಈಗಾಗಲೇ ಲಸಿಕೆಯನ್ನು ಕೊಡಿಸಿದ್ದು, ಅವರೆಲ್ಲರೂ ನಿರ್ಭಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ನಮ್ಮ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಯಾವುದೇ ಮಾರ್ಗದರ್ಶನವಿಲ್ಲದೆ ಇನ್ನು ಹಲವಾರು ಕಾರ್ಮಿಕರು ವದಂತಿಗಳಿಗೆ ಹೆದರಿ ಇನ್ನೂ ಸಹ ಲಸಿಕೆ ಪಡೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಈ ವರ್ಗದ ಕಾರ್ಮಿಕರಿಗೆ ವಿಶೇಷ ವಾಗಿ ಲಸಿಕಾ ಅಭಿಯಾನ ಪ್ರಾರಂಭಿಸುವ ಜತೆಗೆ ಲಸಿಕೆ ಕಡ್ಡಾಯ ಎಂದು ಘೋಷಿಸಬೇಕು ಎಂದು ಮನವಿ ಮಾಡಿದ್ದಾರೆ.