ಕಲಾವಿದರತ್ತ 500 ರೂ. ನೋಟುಗಳನ್ನು ಎಸೆದ ಡಿಕೆಶಿ ಮಂಡ್ಯ ಜಿಲ್ಲೆಯಲ್ಲಿನ ಪ್ರಜಾಧ್ವನಿ ಯಾತ್ರೆವೇಳೆ ನಡೆದ ಘಟನೆ

ಮಂಡ್ಯ: ಪ್ರಜಾಧ್ವನಿ ಯಾತ್ರೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಲಾವಿದರತ್ತ 500 ರೂ. ಮುಖಬೆಲೆಯ ನೋಟುಗಳನ್ನು ಎಸೆದ ಘಟನೆ ನಡೆದಿದೆ.
ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಜಾಧ್ವನಿ ಯಾತ್ರೆವೇಳೆ ನಡೆದ ಈ ಘಟನೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಡಿಕೆ ಶಿವಕುಮಾರ್ ಕಲಾವಿದರ ಕಡೆ ಹಣ ಎಸೆದಿರುವ ದೃಶ್ಯದ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಿಕೆ ಶಿವಕುಮಾರ್ ಅವರಿಗೆ ಹಣ ದುರಹಂಕಾರ. ಕಲಾವಿದರಿಗೆ ಗೌರವ ಕೊಡುವುದು ಕಲಿಯಿರಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ಪ್ರಜಾಧ್ವನಿ ಯಾತ್ರೆ ನಿಗದಿಯಾಗಿತ್ತು.
ಅದರಂತೆ ಮಂಡ್ಯ ತಾಲೂಕು ಕ್ಯಾತುಂಗೆರೆ ಬಳಿಯಿಂದ ಯಾತ್ರೆ ಆರಂಭಿಸಿದ ಡಿಕೆ ಶಿವಕುಮಾರ್ ಅವರು ಬಸ್ನಲ್ಲೇ ಬೇವಿನಹಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಆಗ ಬಸ್ನ ರೂಪ್ಟಾಪ್ ಮೂಲಕ ರೋಡ್ ಶೋ ಮಾಡುತ್ತಾ ಜನರತ್ತ ಕೈ ಬೀಸುತ್ತಾ ಸಾಗುತ್ತಿದ್ದರು. ಆ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕಲಾವಿದರು ಡಿ.ಕೆ.ಶಿವಕುಮಾರ್ ಅವರು ಕೂಗುತ್ತಾ ಹಣಕ್ಕಾಗಿ ಮನವಿ ಮಾಡಿದ್ದಾರೆ.
ಆಗ ಡಿಕೆಶಿ ಅವರು ತಮ್ಮ ಜೇಬಿನಿಂದ ಒಂದಷ್ಟು ಹಣವನ್ನು ತೆಗೆದು, ಒಂದೊಂದೇ ನೋಟುಗಳನ್ನು ಬಸ್ ಮೇಲಿನಿಂದ ಕೆಳಗೆ ಬಿಟ್ಟಿದ್ದಾರೆ. ಆಗ ಅದು ನೇರವಾಗಿ ಕಲಾವಿದರ ಕೈಸೇರದಿದ್ದಾಗ ಒಂದಷ್ಟು ನೋಟುಗಳನ್ನು ಮಡಿಚಿ, ಕಲಾವಿದರತ್ತ ತೂರಿದ್ದಾರೆ. ಬಳಿಕ ಕೈಯಲ್ಲಿದ್ದ ಉಳಿದ ನೋಟುಗಳನ್ನು ಜೇಬಿಗೆ ಹಾಕಿಕೊಂಡು, ಜನರತ್ತ ಕೈ ಬೀಸುತ್ತಾ ಯಾತ್ರೆಯಲ್ಲಿ ಮುಂದೆ ಸಾಗಿದರು.