ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿ ಚುನಾವಣಾಧಿಕಾರಿ ಶ್ರೀಮತಿ ದುರ್ಗಾಶ್ರೀ

ದಾವಣಗೆರೆ :ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನೀತಿಸಂಹಿತೆ ಜಾರಿಯಾಗಿದೆ. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ನೀತಿಸಂಹಿತೆ ಪಾಲನೆಗೆ ನಿಗಾ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಹಾಗೂ 108-ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶ್ರೀಮತಿ ದುರ್ಗಾಶ್ರೀ ತಿಳಿಸಿದರು.
ಗುರುವಾರ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಹೊರಡಿಸಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಪ್ಲೆಕ್ಸ, ಬ್ಯಾನರ್, ಪೊಸ್ಟರ್, ಬಂಟಿಂಗ್ ಹಾಗೂ ಗೋಡೆ ಬರಹಗಳನ್ನು ತೆರವುಗೊಳಿಸಲಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾವಹಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ. ವೀಡಿಯೋ ಸರ್ವಲೆನ್ಸ ತಂಡ, ಫ್ಲೆಯಿಂಗ್ ಸ್ಕ್ವಾಡ್ ತಂಡ, ವೀಡಿಯೋ ವ್ಹಿವಿಂಗ್ ತಂಡ, ಲೆಕ್ಕ ಪರಿಶೋಧನಾ ತಂಡಗಳನ್ನು ರಚಿಸಲಾಗಿದೆ. ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಬ್ಬಾಳ ಟೋಲ್, ಹೆಚ್ ಬಸಾಪುರ ಮತ್ತು ಕಾರಿಗನೂರು ಕ್ರಾಸ್‌ಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.
ದಾಖಲೆಗಳಿಲ್ಲದೆ ಯಾವುದೇ ಬೆಲೆಬಾಳುವ ವಸ್ತು, ನಗದು, ಉಡುಗೊರೆಗಳು ಕಂಡು ಬಂದಲ್ಲಿ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು. ಯಾವುದೇ ಅಕ್ರಮಗಳು, ಕಾನೂನು ಬಾಹೀರ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ಬಿ ಅಶ್ವತ್ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು, ಸಮಾರಂಭಗಳಲ್ಲಿ ಪಕ್ಷಗಳ ಅಥವಾ ಜನ ಪ್ರತಿನಿಧಿಗಳನ್ನು ಬೆಂಬಲಿಸುವಂತಹ ಯಾವುದೇ ಪ್ರಚಾರ ಮಾಡಲು ಅವಕಾಶ ಮಾಡಿಕೊಡುವುದಿಲ್ಲ. ಅನುಮತಿ ಇಲ್ಲದೆ ಸರ್ಕಾರಿ ಮತ್ತು ಖಾಸಗಿ ಆಸ್ತಿಗಳ ಮೇಲೆ ಚುನಾವಣಾ ಪ್ರಚಾರ ಸಾಮಗ್ರಿಗಳು, ಗೋಡೆ ಬರಹಗಳು, ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು..
ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 94074 ಮಹಿಳೆಯರು, 95831 ಪುರುಷ ಮತದಾರರು ಒಳಗೋಡಂತೆ ಒಟ್ಟಾರೆ 189911 ಮತದಾರರಿದ್ದಾರೆ. 2570 ವಿಶೇಷ ಚೇತನ ಮತದಾರರಿದ್ದಾರೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನ ಮತದಾರರಿಗೆ ಮನೆಯಲ್ಲೇ ಮತದಾನ ಮಾಡಲು ಅವಕಾಶವಿದೆ. ನಿಗಧಿತ ಅರ್ಜಿ ನಮೂನೆಯಲ್ಲಿ ಮನವಿ ಸಲ್ಲಿಸಿದರೆ ಅವರ ಇಚ್ಚೆಯಂತೆ ಮತಗಟ್ಟೆಗೆ ಕರೆದೊಯ್ಯುವ ಅಥವಾ ಅವರ ಮನೆಗಳಿಗೆ ಅಧಿಕಾರಿಗಳ ತಂಡವೇ ಹೋಗಿ ಮತದಾನ ಮಾಡಲು ವಿಶೇಶ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದರು.
ಭಾರತ ಚುನಾವಣಾ ಆಯೋಗ ಸೂಚಿಸಿರುವಂತೆ ಮತದಾರರಿಗೆ ಆಮಿಷ ಒಡ್ಡುವ ವಸ್ತುಗಳು, ನಗದು ಹಂಚಿಕೆಗೆ ಇತರೆ ದೂರುಗಳಿಗೆ ಸಂಬಂಧಿಸಿದಂತೆ, ವೀಡಿಯೋ ಮತ್ತು ಛಾಯಾ ಚಿತ್ರವನ್ನು ಸಿ ವಿಜಿಲ್ ಆಪ್ ಮೂಲಕವೂ ಸಾರ್ವಜನಿಕರು ಅಪ್‌ಲೋಡ್ ಮಾಡಿ ದೂರುಗಳನ್ನು ಸಲ್ಲಿಸಬಹುದಾಗಿದೆ ಎಂದರು. ಪತ್ರಿಕಾ ಗೋಷ್ಠಿಯಲ್ಲಿ ದಾವಣಗೆರೆ ತಾ. ಪಂ. ಇ.ಒ ಆನಂದ್ ಇತರರು ಉಪಸ್ಥಿತರಿದ್ದರು.