ಅಲೆಮಾರಿಗಳಿಗೆಶೇ.2 ರಷ್ಟು ಮೀಸಲಾತಿ ನೀಡದಿದ್ದರೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ದಾವಣಗೆರೆ: ಅಲೆಮಾರಿ ಬುಡಕಟ್ಟುಗಳ ಸಮುದಾಯಕ್ಕೆ ಸಿಗುವ ಮೀಸಲಾತಿಯಲ್ಲಿ ಹೊಸದಾಗಿ ಸೇರಿಸಿರುವ ಜಾತಿಗಳನ್ನು ಹೊರಹಾಕಿ, ಅಲೆಮಾರಿಗಳಿಗೆಶೇ.2 ರಷ್ಟು ಮೀಸಲಾತಿಯನ್ನು ನೀಡದಿದ್ದರೆ ಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ, ಅಲೆಮಾರಿ ಬುಡಕಟ್ಟು ಮಹಾಸಭಾ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ವಿ. ಸಣ್ಣ ಅಜ್ಜಯ್ಯ ಮತ್ತು ಕಾನೂನು ಸಲಹೆಗಾರ ಕೆ. ವೀರೇಶ್ ಕುಮಾರ್ ಮಾತನಾಡಿ, ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಒಳಮೀಸಲಾತಿ ವರದಿ ಜಾರಿ ಮಾಡುವ ಅವೈಜ್ಞಾನಿಕ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಕಿಡಿಕಾರಿದರು.
ಅಲೆಮಾರಿ ಸಮುದಾಯದ ಜನರು ಈವರೆಗೂ ಸಮಾಜದ ಮುಖ್ಯವಾಹಿನಿಗೆ ಬರದೇ ಧಾರ್ಮಿಕ ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದು, ಅವರಿಗೆ ಶಿಕ್ಷಣ ಮರೀಚಿಕೆಯಾಗಿದೆ. ಆಧಾರ್, ಪಡಿತರ ಇಂಥ ದಾಖಲೆಯಗಳ ಬಗ್ಗೆಯೂ ಅವರಿಗೆ ಅರಿವಿಲ್ಲ. ಅಲೆಮಾರಿ ಸಮುದಾಯದೊಂದಿಗೆ ವರ್ಗ 4ರಲ್ಲಿ 88 ಸಮುದಾಯಗಳನ್ನು ಗುರುತಿಸಿ ಕೇವಲ ಶೇ.1ರಷ್ಟು ಮೀಸಲಾತಿ ನೀಡಿರುವುದು ಅತ್ಯಂತ ಅವೈಜ್ಞಾನಿಕವಾಗಿದ್ದು, ಸರ್ಕಾರ ನಮ್ಮನ್ನು ಮತ್ತೆ ನಾಡಿನಿಂದ ಕಾಡಿಗೆ ಅಟ್ಟುವ ಹುನ್ನಾರ ನಡೆಸಿದಂತೆ ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿಯನ್ನು ವರ್ಗೀಕರಣ ಮಾಡದೆ, ಶಿಕ್ಷಣ, ಉದ್ಯೋಗ, ರಾಜಕೀಯ, ಸಾಮಾಜಿಕವಾಗಿ ಹಿಂದುಳಿದ ಅಲೆಮಾರಿ, ಅರೆ ಅಲೆಮಾರಿ ಮತ್ತಿತರ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳೆಂದು ಗುರುತಿಸಿ ಸರಿಯಾದ ನಿರ್ಧಾರ ಕೈಗೊಂಡು ಮೀಸಲಾತಿ ನೀಡಬೇಕು. ಅಲೆಮಾರಿ, ಅರೆ ಅಲೆಮಾರಿ ಮತ್ತಿತರ ಸೂಕ್ಷ್ಮ ಸಮುದಾಂiಗಳ 48 ಜಾತಿಗಳಿಗೆ ವರ್ಗ ಎಂದು ಹೊಸದಾಗಿ ಸೇರ್ಪಡೆ ಮಾಡಿ ಈ ಸಮುದಾಯಕ್ಕೆ ಶೇ.3ರಷ್ಟು ಮೀಸಲು ನೀಡಬೇಕೆಂದು ಒತ್ತಾಯಿಸಿದರು.
ಸರ್ಕಾರ ನಮ್ಮ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸದಿದ್ದರೆ ಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬಹಿಷ್ಕರಿಸಿ, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ವೀರೇಶ್ ಕುಮಾರ್, ಕಿರಣ ಕುಮಾರ್, ಪಿ. ರಆಮಪ್ಪ, ಎನ್.ಡಿ. ಮಂಜಪ್ಪ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.