ಕೋವಿಡ್ ನಿಯಂತ್ರಣಕ್ಕಾಗಿ  ಈದ್ಗಾದಲ್ಲಿ ಪ್ರಾರ್ಥನೆಗೆ ಅವಕಾಶವಿಲ್ಲ- ಮಹಾಂತೇಶ್ ಬೀಳಗಿ

IMG-20210707-WA0010

 

ದಾವಣಗೆರೆ ಜು.7; ಕೋವಿಡ್ ನಿಯಂತ್ರಣ ಉದ್ದೇಶದಿಂದ ಹಾಗೂ ಸರ್ಕಾರದ ಮಾರ್ಗಸೂಚಿಯನ್ವಯ ಇದೇ ಜು. 20 ಅಥವಾ 21 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಅಂಗವಾಗಿ ಈ ಬಾರಿಯೂ ಈದ್ಗಾದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲು ಅವಕಾಶವಿಲ್ಲ, ಹೀಗಾಗಿ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸುವ ಮೂಲಕ ಕೋವಿಡ್ ಹರಡುವುದನ್ನು ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಬಕ್ರೀದ್ ಆಚರಣೆಯ ಹಿನ್ನೆಲೆಯಲ್ಲಿ  ಜಿಲ್ಲಾಡಳಿತ ಭವನದ ತುಂಗಾಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರಿಕ ಶಾಂತಿ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ವರ್ಷ ಇಡೀ ಜಗತ್ತಿಗೆ ವ್ಯಾಪಿಸಿದ ಕೋವಿಡ್ ಸೋಂಕು ನಮ್ಮೆಲ್ಲ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಎಲ್ಲ ಬಗೆಯ ಸಾಂಪ್ರದಾಯಿಕ ಆಚರಣೆಗಳಿಗೆ ತಡೆಹಾಕಿದೆ. ಕೊರೊನಾ ಸೋಂಕು ಪ್ರಕರಣಗಳು ಸದ್ಯ ನಿಯಂತ್ರಣದಲ್ಲಿ ಇದ್ದರೂ, ಇನ್ನೂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಮರಣ ಪ್ರಕರಣಗಳೂ ಕೂಡ ಕಡಿಮೆಯಾಗಿಲ್ಲ. ಸೋಂಕು ಹೇಗೆ ಹರಡುತ್ತಿದೆ, ಸಾವು ಯಾವಾಗ ಸಂಭವಿಸುತ್ತದೆ ಎಂಬುದನ್ನು ಅಂದಾಜಿಸಲಾಗುತ್ತಿಲ್ಲ. ನಾವು ಇನ್ನೂ ಕೋವಿಡ್‌ನಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಇದರ ನಡುವೆ ಕೋವಿಡ್‌ನ 3ನೇ ಅಲೆ ಬರುವ ಸಾಧ್ಯತೆಗಳಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸದ್ಯ ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದ್ದರೂ ಕೂಡ ವಾಣಿಜ್ಯ ಸೇರಿದಂತೆ ಎಲ್ಲ ಬಗೆಯ ಚಟುವಟಿಕೆಗಳಿಗೂ ಷರತ್ತು ಬದ್ಧ ಅನುಮತಿಯನ್ನು ಮಾತ್ರ ನೀಡಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಕ್ರೀಡೆ ಸೇರಿದಂತೆ ಹೆಚ್ಚು ಜನ ಸೇರುವ ಯಾವುದೇ ಕಾರ್ಯಕ್ರಮ, ಸಮಾರಂಭಗಳಿಗೆ ಅವಕಾಶವಿಲ್ಲ. ಹೀಗಾಗಿ ನಾವು ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ. ರಾಜ್ಯ ವಕ್ಫ್ ಬೋರ್ಡ್ ಕೊರೊನಾವನ್ನು ನಿಯಂತ್ರಿಸುವ ಉದ್ದೇಶದಿಂದ ಹೊರಡಿಸಿರುವ ಮಾರ್ಗಸೂಚಿಯನ್ವಯ ಬಕ್ರೀದ್ ಹಬ್ಬದ ದಿನದಂದು ಯಾವುದೇ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಕಳೆದ ವರ್ಷದಂತೆ ಈ ವರ್ಷವೂ ಎಲ್ಲ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಮನೆಗಳಲ್ಲಿಯೇ ಆಚರಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಹಾಗೂ ಕಾನೂನಿಗೆ ಗೌರವ ನೀಡಬೇಕು. ಯಾರೂ ಕೂಡ ಕಾನೂನು ಹಾಗೂ ಮಾರ್ಗಸೂಚಿ ನಿಯಮಗಳನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.

ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ನಿಯಮಗಳು ಜು. 19 ರವರೆಗೆ ಜಾರಿಯಲ್ಲಿದ್ದು, ಜು. 20 ರ ನಂತರ ಅನುಸರಿಸಬೇಕಾದ ಕ್ರಮಗಳ ಕುರಿತು ಸರ್ಕಾರ ಮತ್ತೊಂದು ಮಾರ್ಗಸೂಚಿ ಹೊರಡಿಸುವ ಸಾಧ್ಯತೆಗಳಿವೆ. ಆದಾಗ್ಯೂ ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಆಯಾ ಜಿಲ್ಲಾಡಳಿತಕ್ಕೆ ಸರ್ಕಾರ ಅಧಿಕಾರ ನೀಡಿದ್ದು, ಕೋವಿಡ್ 3ನೇ ಅಲೆ ತಡೆಗಟ್ಟಲು ನಾವು ರಕ್ಷಣಾತ್ಮಕವಾಗಿ ಕಾರ್ಯಕ್ರಮ ಹಾಕಿಕೊಳ್ಳಬೇಕಿದೆ. ಜಿಲ್ಲೆಯಲ್ಲಿ ಎಲ್ಲ ಕೋಮು, ಧರ್ಮದವರು ಅಣ್ಣ ತಮ್ಮಂದಿರAತೆ ಸೌಹಾರ್ದತೆಯಿಂದ ಬಾಳ್ವೆ ನಡೆಸುತ್ತಿದ್ದಾರೆ. ದೇವನಗರಿ ಶಾಂತಿಯ ನಾಡು, ಎಲ್ಲ ಧರ್ಮದವರೂ ಇಲ್ಲಿ ಶಾಂತಿಪ್ರಿಯರು. ಜಾತಿ, ಧರ್ಮಗಳ ಎಲ್ಲೆಯನ್ನು ದಾಟಿ, ಮಠ ಮಾನ್ಯರಿಂದ ಹಿಡಿದು, ಎಲ್ಲ ವರ್ಗದವರೂ ಕೋವಿಡ್ ನಿಯಂತ್ರಣಕ್ಕಾಗಿ ಹಾಗೂ ಕೋವಿಡ್ ಸಂಕಷ್ಟಕ್ಕೆ ಸಿಲುಕಿದವರನ್ನು ಪಾರುಮಾಡಲು ತಮ್ಮದೇ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಅನವಶ್ಯಕವಾಗಿ ಹೊರಗಡೆ ಅಲೆದಾಡುವುದರಿಂದ ಎಲೆ ಅಡಿಕೆ ಕೊಟ್ಟು ಕೊರೊನಾವನ್ನು ಮನೆಗೆ ಆಹ್ವಾನಿಸಿದಂತೆ. ಅವಶ್ಯಕತೆ. ಮಾಸ್ಕ್, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಪಾಲಿಸಬೇಕು. ಕಾನೂನನ್ನು ಪಾಲನೆ ಮಾಡುವುದರ ಜೊತೆಗೆ ಕಾನೂನಿಗೆ ಗೌರವ ಕೊಟ್ಟು 3ನೇ ಅಲೆ ಬರದಂತೆ ನೋಡಿಕೊಳ್ಳಬೇಕು, ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಕೋವಿಡ್‌ನಿಂದಾಗಿ ಕಳೆದ ವರ್ಷದಿಂದ ಈವರೆಗೆ ಸಾಕಷ್ಟು ಸಾವು, ನೋವು ಕಂಡಿದ್ದೇವೆ. ವ್ಯಾಪಾರಿಗಳು, ಕೂಲಿಕಾರ್ಮಿಕರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಎಲ್ಲರ ಸಹಕಾರದಿಂದಲೇ ಸದ್ಯ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆದರೆ ಕೋವಿಡ್ ಇನ್ನೂ ಮುಗಿದಿಲ್ಲ, ಈಗಾಗಲೆ ನೆರೆಯ ರಾಜ್ಯಗಳಲ್ಲಿ ಕೋವಿಡ್‌ನ 3ನೇ ಅಲೆ ಪ್ರಾರಂಭವಾಗಿದೆ. ಹೀಗಾಗಿ ನಾವೆಲ್ಲರೂ ಎಚ್ಚರಿಕೆ ವಹಿಸುವುದು ಅಗತ್ಯ. ಈ ಬಾರಿಯೂ ಬಕ್ರೀದ್ ಹಬ್ಬವನ್ನು ಎಲ್ಲರೂ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣ, ಎಲ್ಲ ಹಬ್ಬಗಳನ್ನು ಮುಂದೆಯೂ ವಿಜೃಂಭಣೆಯಿAದ ಆಚರಿಸಲು ಅವಕಾಶಗಳಿವೆ. ಕೋವಿಡ್ ನಿಯಂತ್ರಣಕ್ಕಾಗಿ ಹಾಗೂ ಬಕ್ರೀದ್ ಹಬ್ಬದ ಆಚರಣೆಗೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು, ಜಿಲ್ಲೆಯಲ್ಲಿ ಯಾವುದೇ ಬಗೆಯ ಅಹಿತಕರ ಘಟನೆಗಳು ಆಗುವುದು ಬೇಡ ಎಂದರು.

ಮಹಾನಗರಪಾಲಿಕೆಯ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಎಲ್ಲರೂ ಈ ನಾಡಿನ ಕಾನೂನು ಪಾಲಿಸಿದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಎಲ್ಲರೂ ಜವಾಬ್ದಾರಿ ಅರಿತು ಕಾನೂನು ಪಾಲನೆ ಮಾಡಿದಲ್ಲಿ ಸೌಹಾರ್ದತೆ ಕೆಡುವುದಿಲ್ಲ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಗೋಶಾಲೆ, ಬಿಡಾಡಿ ದನಗಳು, ನಾಯಿ, ಹಂದಿಗಳ ಹಾವಳಿ ಪ್ರಮುಖ ಸಮಸ್ಯೆಯಾಗಿದೆ. ಈಗಾಗಲೆ ಹಂದಿ ಹಾವಳಿ ಹಾಗೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರ ಸಮಸ್ಯೆ ಬಗೆಹರಿಯಲಿದೆ. ಚಿಕನ್ ಮಟನ್ ತ್ಯಾಜ್ಯ ವಿಲೇವಾರಿಯನ್ನು ಖಾಸಗಿ ಏಜೆನ್ಸಿಗೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದ್ದು, ಶೀಘ್ರ ಟೆಂಡರ್ ಕರೆಯಲಾಗುವುದು. ಎಲ್ಲರೂ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ, ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಜೀವ ಇದ್ದರೆ ಜೀವನ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಿಯೇ ಎಲ್ಲ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಬೇರೆಯವರಿಗೆ ತೊಂದರೆಯಾಗುವ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯಿಂದ, ಕಾನೂನು ನಿಯಮಗಳನ್ನು ಪಾಲಿಸಿ, ಕೋವಿಡ್ ಹರಡುವುದನ್ನು ತಡೆಗಟ್ಟಲು ಸಹಕರಿಸಿ ಎಂದರು.

ಬಕ್ರೀದ್ ಹಬ್ಬ ಆಚರಣೆ ಕುರಿತಂತೆ ವಿವಿಧ ಸಮಾಜಗಳ ಮುಖಂಡರು ಸಲಹೆ ಸೂಚನೆಗಳನ್ನು ನೀಡಿದರು. ಕೋಳಿ ಇಬ್ರಾಹಿಂ ಮಾತನಾಡಿ, ಕೋವಿಡ್ ಭೀತಿಯಿಂದಾಗಿ ಈದ್ಗಾಗೆ ಹೋಗಿ ನಮಾಜ್ ಮಾಡದೆ ವರ್ಷಗಳೇ ಉರುಳಿವೆ. ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸುವ ಮೂಲಕ ಹಬ್ಬವನ್ನು ಆಚರಿಸುತ್ತೇವೆ, ಸರ್ಕಾರದ ನಿಯಮ ಪಾಲಿಸಲು ನಾವು ಬದ್ಧರಾಗಿದ್ದೇವೆ ಎಂದರು. ಪಾಲಿಕೆ ಸದಸ್ಯ ಸಯ್ಯದ್ ಚಾರ್ಲಿ ಮಾತನಾಡಿ, ಹಬ್ಬ ಆಚರಣೆ ನಿಮಿತ್ಯ ಕಾನೂನು ಬದ್ಧ ಆದೇಶವನ್ನು ಪಾಲಿಸುತ್ತೇವೆ ಎಂದರು. ಶಂಕರನಾರಾಯಣ ಮಾತನಾಡಿ, ಕೋವಿಡ್ ಕಾರಣದಿಂದಾಗಿ ಎಲ್ಲ ಧರ್ಮೀಯರು ಹಬ್ಬಗಳನ್ನು ವಿಜೃಂಭಣೆಯಿAದ ಆಚರಿಸಲು ಆಗದಿರುವುದು ನೋವಿನ ಸಂಗತಿ. ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದ್ದರೂ, ಮೈಮರೆಯುವಂತಿಲ್ಲ, 3ನೇ ಅಲೆ ಯಾವಾಗ ಬೇಕಾದರೂ ಅಪ್ಪಳಿಸಬಹುದು, ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಹಾನಗರಪಾಲಿಕೆ, ಸ್ವಚ್ಛತೆ, ನೀರಿನ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ ಸಮರ್ಪಕವಾಗಿಸಲಿ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಹಬ್ಬ ಆಚರಿಸೋಣ, ಈ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದರು. ಸತೀಶ್ ಪೂಜಾರ್ ಮಾತನಾಡಿ, ಕೋವಿಡ್ ಹರಡುವ ಭೀತಿ ಇದ್ದರೂ, ಜನರು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಮೊದಲು ನಮ್ಮ ಮನೆ, ನಗರ, ಜಿಲ್ಲೆಯನ್ನು ಸುರಕ್ಷಿತವಾಗಿಸಿಕೊಳ್ಳೋಣ. ತ್ಯಾಗ, ಬಲಿದಾನಗಳ ಸಂಕೇತ ಬಕ್ರೀದ್ ಹಬ್ಬ. ಸರ್ಕಾರ ಈಗಾಗಲೆ ಗೋಹತ್ಯೆಯನ್ನು ನಿಷೇಧಿಸಿದೆ. ಈ ನಾಡಿನ ಕಾನೂನನ್ನು ನಾವು ಗೌರವಿಸೋಣ ಎಂದರು. ಚನ್ನಗಿರಿ ಮುಸ್ಲಿಂ ಮುಖಂಡರಾದ ಸರ್ದಾರ್ ಮಾತನಾಡಿ, ಕೋವಿಡ್‌ನ 3ನೇ ಅಲೆ ಬರುವುದು ಬೇಡ. ನಮ್ಮ ಆರೋಗ್ಯದ ದೃಷ್ಠಿಯಿಂದ ಶಾಂತಿಯುತವಾದ ಹಬ್ಬ ಆಚರಿಸುತ್ತೇವೆ. ನಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕೆಂದು ಎಚ್ಚರಿಸಿದ್ದಕ್ಕೆ ಜಿಲ್ಲಾಡಳಿತಕ್ಕೆ ಧನ್ಯವಾದ ಎಂದರು. ಶ್ರೀಕಾಂತ್ ಮಾತನಾಡಿ, ಬಿಡಾಡಿ ದನಗಳನ್ನು ನಿಯಂತ್ರಿಸಿ, ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸಬೇಕು. ಚಿಕನ್, ಮಟನ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮಹಾನಗರಪಾಲಿಕೆ ಕ್ರಮ ವಹಿಸಬೇಕು. ಮಟನ್, ಮೀನು ಮಾರುಕಟ್ಟೆಯಂತೆಯೇ ಚಿಕನ್ ಮಾರುಕಟ್ಟೆಯನ್ನೂ ಸೂಕ್ತ ಸ್ಥಳದಲ್ಲಿ ಪ್ರಾರಂಭಿಸಬೇಕು ಎಂದರು.

ಉಳಿದಂತೆ ಸೋಮಲಾಪುರ ಹನುಮಂತಪ್ಪ, ಮಲ್ಲೇಶ್, ಸಾಧಿಕ್ ಪೈಲ್ವಾನ್, ಗೌಡ್ರ ಚನ್ನಬಸಪ್ಪ, ಪಾಲಿಕೆ ಸದಸ್ಯ ಶಾಂತಕುಮಾರ್, ಆವರಗೆರೆ ವಾಶು, ಫೈರೋಜ್ ಮಾತನಾಡಿ, ಶಾಂತಿ ಸೌಹಾರ್ದತೆಯಿಂದ ಸರ್ಕಾರದ ಮಾರ್ಗಸೂಚಿ ಪಾಲಿಸುವ ಮೂಲಕ ಬಕ್ರೀದ್ ಹಬ್ಬ ಆಚರಣೆ ಮಾಡುವ ಕುರಿತು ಮಾತನಾಡಿದರು.

ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‌ಒ ಡಾ.ನಾಗರಾಜ್, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿವೈಎಸ್‌ಪಿ ಬಸವರಾಜ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಸಮಾಜಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!