ತೈಲಬೆಲೆ ಏರಿಕೆಗೆ ಖಂಡನೆ ಕಾಂಗ್ರೆಸ್ ಮುಖಂಡರು- ಕಾರ್ಯಕರ್ತರ ಪ್ರತಿಭಟನೆ

ದಾವಣಗೆರೆ,ಜು.8: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರ ದೇವತೆ ದುರ್ಗಾಂಭಿಕ ದೇವಸ್ಥಾನದ ಬಳಿ ಪ್ರತಿಭಟನೆ ನಡೆಸಿದರು.
ನಗರ ದೇವತೆ ದುರ್ಗಾಂಭಿಕಾ ದೇವಸ್ಥಾನದಿಂದ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರತಿಭಟನೆ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿಕ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಎಲ್ಲಾ ವಿಷಯದಲ್ಲೂ ವಿಫಲವಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಯಿಂದ ರೈತರು ನೆಮ್ಮದಿಕಳೆದುಕೊಂಡು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ರೈತ ಉತ್ತಿ, ಬಿತ್ತಿ ಬೆಳೆಯಬೇಕಾದರೆ ಟ್ರಾö್ಯಕ್ಟರ್ ಮತ್ತು ಪವರ್ ಟ್ರಲ್ಲರ್ ಅವಶ್ಯಕವಾಗಿ ಬೇಕಾಗಿವೆ. ಆದರೆ, ಇದಕ್ಕೆ ತುಂಬಿಸಬೇಕಾದ ಇಂಧನ ದರ ಗಗನಮುಖಿ ಆಗುತ್ತಿರುವುದರಿಂದ ಕೋವಿಡ್‌ನಿಂದ ಆರ್ಥಿಕ ನಷ್ಟ ಅನುಭವಿಸಿರುವ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ದೂರಿದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಾದ ಮೇಲೆ ಸಾಕಷ್ಟು ದುರಂತಗಳಾಗಿವೆ. ತೈಲ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಇದಕ್ಕೆ ಬಿಜೆಪಿಯ ಜನವಿರೋಧಿ ನೀತಿಯೇ ಕಾರಣವಾಗಿದೆ. ಬೆಲೆಯನ್ನು ಹತೋಟಿಯಲ್ಲಿಡಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.
ಈ ಸಂದರ್ಭದಲ್ಲಿ
ಕಾಂಗ್ರೆಸ್ ಮುಖಂಡರಾದ ಗುರಪ್ಪ ನಾಯ್ಡು, ಸುಂದರೇಶ್, ಅಮೃತೇಶ್, ಡಿ.ಬಸವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಸದಸ್ಯರಾದ ಚಮನ್‌ಸಾಬ್, ಅಬ್ದುಲ್ ಲತೀಫ್, ಗಡಿಗುಡಾಳ್ ಮಂಜುನಾಥ್, ವಿನಾಯಕ ಪೈಲ್ವಾನ್, ಸುಧಾ ಇಟ್ಟಿಗುಡಿ ಮಂಜುನಾಥ್, ಜೆ.ಡಿ.ಪ್ರಕಾಶ್, ಮತ್ತಿತರರಿದ್ದರು.