ಪೆಟ್ರೋಲ್, ಡಿಸೆಲ್, ಸಿಲಿಂಡರ್ ದರ ಹೆಚ್ಚಳ ವಿರೋಧಿಸಿ SUCI ಯಿಂದ ಪ್ರತಿಭಟನೆ

ದಾವಣಗೆರೆ: ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ಸಿಲಿಂಡರ್, ಅಡುಗೆ ಎಣ್ಣೆ ಹಾಗೂ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ನಗರದಲ್ಲಿ ಇಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಜಿಲ್ಲಾ ಸಂಘಟನಾ ಸಮಿತಿಯಿಂದ
ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಸ್ ಯುಸಿಐ ರಾಜ್ಯ ಸಮಿತಿ ಸದಸ್ಯ ಡಾ. ಸುನಿತ್ ಕುಮಾರ್ ಮಾತನಾಡುತ್ತಾ, ಪ್ರಜೆಗಳು ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ನಡೆಸುವ ಆಡಳಿತವನ್ನು ಪ್ರಜಾಪ್ರಭುತ್ವ ಎನುತ್ತಾರೆ, ಆದರೂ ಇಲ್ಲಿಯ ಪ್ರಜೆಗಳು ಇಷ್ಟೊಂದು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುವಂತಾಗಿದೆ. ಇಷ್ಟೊಂದು ಸಾವು-ನೋವುಗಳು ಸಂಭವಿಸುತ್ತಿದ್ದು, ನಿಜವಾಗಿಯೂ ಇದು ಪ್ರಜಾಪ್ರಭುತ್ವವೇ. ಹಾಗಾದರೆ ಇದು ಯಾರ ಪ್ರಭುತ್ವ ಎಂದರು.
ಕಳೆದ ಎರಡು ವರ್ಷಗಳಿಂದ ಕರೋನ ಸಾಂಕ್ರಾಮಿಕ ಕಾಯಿಲೆಯಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ, ಕೋಟ್ಯಾಂತರ ಜನರು ಬೀದಿ ಪಾಲಾಗಿದ್ದಾರೆ, ಉದ್ಯೋಗ ಕಳೆದುಕೊಂಡಿದ್ದಾರೆ, ಲಕ್ಷಾಂತರ ಪ್ರಮಾಣದಲ್ಲಿ ಜೀವ ಹಾನಿಗಳು ಸಂಭವಿಸಿದೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ, ಇಂತಹ ಸಂದರ್ಭದಲ್ಲಿ ಶ್ರೀಸಾಮಾನ್ಯರ ಬೆನ್ನಿಗೆ ನಿಲ್ಲಬೇಕಾಗಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೆಲೆ ಏರಿಕೆ ಮಾಡುವ ಮೂಲಕ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿವೆ ಎಂದು ಆಕ್ಷೇಪಿಸಿದರು.
ದಿನನಿತ್ಯ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ. ದೈನಂದಿನ ಜೀವನಕ್ಕೆ ಬಳಸುವ ಅಡುಗೆ ಎಣ್ಣೆ, ಎಲ್‍ಪಿಜಿ ಸಿಲಿಂಡರ್ ಬೆಲೆ ಗಗನಕ್ಕೇರಿದೆ ಹಾಗೂ ಪೆಟ್ರೋಲ್ ಡೀಸೆಲ್ ಬೆಲೆಗಳಂತು ದಿನನಿತ್ಯ ಏರಿಕೆಯಾಗುತ್ತಲೇ ಇವೆ, ಇದರಿಂದಾಗಿ ಅಗತ್ಯ ವಸ್ತುಗಳ ಹಣ್ಣು-ತರಕಾರಿ, ಬೇಳೆ ಕಾಳುಗಳ ಪ್ರತಿಯೊಂದರ ಬೆಲೆ 100, 200 ರ ಗಡಿದಾಟಿದೆ, ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದರೆ ಎಲ್‍ಪಿಜಿ ಸಿಲಿಂಡರ್ ಸಾವಿರ ರೂ. ಗಳ ಗಡಿಗೆ ಬಂದು ನಿಂತಿದೆ, ಒಂದು ಕಡೆ ಕರೋನ ದಂತಹ ಮಹಾಮಾರಿಯ ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದರು ಬೆಲೆ ಏರಿಕೆಯಂತಹ ಮಹಾಭೂತದ ಕಪಿಮುಷ್ಟಿಯಿಂದ ತಪ್ಪಿಸಿಕೊಳ್ಳಲಾಗದೆ ಜನರ ಜೀವನ ಹೈರಣಾಗಿದೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾ. ಮಂಜುನಾಥ್ ಕೈದಾಳೆ ಮಾತನಾಡುತ್ತಾ, ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದ ಜನರು ವೈದ್ಯಕೀಯ ಸೌಲಭ್ಯವಿಲ್ಲದೆ, ಆಹಾರವಿಲ್ಲದೆ, ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಈ ದೇಶದ ಉದ್ಯಮಪತಿಗಳು ಅಂಬಾನಿ ಮತ್ತು ಅದಾನಿ ಏಷ್ಯಾ ಖಂಡದಲ್ಲಿ ಅತ್ಯಂತ ದೊಡ್ಡ ಕ್ರಮವಾಗಿ ಮೊದಲನೇ ಮತ್ತು ಎರಡನೇ ಶ್ರೀಮಂತರಾಗಿದ್ದಾರೆ, ಆಶ್ಚರ್ಯವಾದರೂ ಇದು ಕಹಿಸತ್ಯ, ಹಾಗಿದ್ದರೆ ಇದು ಯಾರ ಪ್ರಭುತ್ವ, ಇಂತಹ ಉದ್ಯಮಿಪತಿಗಳ ಕಪಿಮುಷ್ಠಿಯಲ್ಲಿರುವ ಈ ತೈಲ ಕಂಪನಿಗಳು ದಿನ ದಿನ ಬೆಲೆ ಏರಿಕೆ ಮಾಡುವ ಮೂಲಕ ಸಾವಿರಾರು ಕೋಟಿ ಲಾಭ ಗಳಿಸುತ್ತಿದ್ದಾರೆ, ಆದರೆ ಅದರ ಬಿಸಿ ಮಾತ್ರ ಬಡವರನ್ನು ಸುಡುತ್ತಿದೆ. ನಮ್ಮನ್ನಾಳುವ ಸರ್ಕಾರಗಳು ಜನಸಾಮಾನ್ಯರನ್ನು ಸಂಪೂರ್ಣವಾಗಿ ಕಡೆಗಣಿಸಿ ಸಿರಿವಂತರ ಸೇವೆಗಾಗಿ ಕಂಕಣತೊಟ್ಟಿವೆ, ಇಂತಹ ಸಂದರ್ಭದಲ್ಲಿ ಎಣ್ಣೆ, ಎಲ್‍ಪಿಜಿ ಸಿಲಿಂಡರ್, ಡೀಸೆಲ್, ಪೆಟ್ರೋಲ್ ಹಾಗೂ ವಿದ್ಯುತ್ ದರವನ್ನು ಹೆಚ್ಚಿಸಿರುವ ಸರ್ಕಾರಗಳ ಕ್ರಮ ಸರಿಯಲ್ಲ ಎಂದರು.
ಬಂಡವಾಳಶಾಹಿಗಳ ಪರವಾಗಿ ಜನವಿರೋಧಿ ನೀತಿಗಳನ್ನು ತರುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಬಲಿಷ್ಠ ಚಳುವಳಿ ಕಟ್ಟಲು ಜನಸಾಮಾನ್ಯರಿಗೆ ಕರೆ ನೀಡಿದರು .
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುನಾಥ್ ಕೈದಾಳೆ, ರಾಜ್ಯ ಸಮಿತಿ ಸದಸ್ಯರಾದ ಸುನೀತ್ ಕುಮಾರ್, ಮಂಜುನಾಥ ಕುಕ್ಕುವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಭಾರತಿ, ನಾಗಜ್ಯೋತಿ, ಪೂಜಾ, ಪರಶುರಾಮ್, ಕಾವ್ಯ, ನಾಗಸ್ಮಿತ, ಗುರು, ಮಮತ, ಪುಷ್ಪ ಇತರರು ಹಾಜರಿದ್ದರು