ಮಾಧ್ಯಮ ಸಂವಾದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ಚುನಾವಣಾ ಅಕ್ರಮಗಳ ಚಟುವಟಿಕೆಗಳ ಬಗ್ಗೆ ಸಿ-ವಿಜಲ್ ಆಪ್ನಲ್ಲಿ ದೂರು ದಾಖಲಿಸಿ

ದಾವಣಗೆರೆ : ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳು, ಚುನಾವಣಾ ಅಕ್ರಮಗಳು ಕಂಡುಬದಲ್ಲಿ ಫೋಟೋ ತೆಗೆದು ಸಿ-ವಿಜಲ್ ದೂರ ಆಪ್ನಲ್ಲಿ ಅಪ್ಲೋಡ್ ಮಾಡಬಹುದು. ಚುನಾವಣಾ ಆಯೋಗ ಈ ದೂರುಗಳ ಕುರಿತಂತೆ ಸೂಕ್ತ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ತಿಳಿಸಿದರು.
ದಾವಣಗೆರೆ ನಗರದ ಪ್ರೆಸ್ ಕ್ಲಬ್ನಲ್ಲಿ ಶನಿವಾರ ಜರುಗಿದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣಾ ಅಕ್ರಮಗಳ ಕುರಿತಂತೆ ದೂರು ದಾಖಲಿಸಿದವರ ಮಾಹಿತಿಯನ್ನು ಗೌಪ್ಯವಾಗಿರಿಸಲಾಗುವುದು. ಸಹಾಯವಾಣಿ 1950 ಸಂಖ್ಯೆಗೆ ಉಚಿತ ಕರೆ ಮಾಡಿ ಮಾಹಿತಿ ನೀಡಬಹುದು ಹಾಗೂ ಮತದಾರರ ತಮ್ಮ ಹೆಸರು ಸೇರಿದಂತೆ ಚುನಾವಣಾ ಮಾಹಿತಿಗಾಗಿ ಮೊಬೈಲ್ನ ಪ್ಲೇಸ್ಟೋರ್ನಲ್ಲಿ ವೋಟರ್ ಹೆಲ್ಪ್ಲೈನ್ ಆಪ್ ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಜಿಲ್ಲೆಯ ಪ್ರತಿಯೊಬ್ಬ ಮತದಾರರು ನ್ಯಾಯಸಮ್ಮತ, ಪಾರದರ್ಶಕ ಚುನಾವಣೆಗೆ ಸಹಕರಿಸುವಂತೆ ಅವರು ಮನವಿ ಮಾಡಿಕೊಂಡರು.
ಚುನಾವಣಾ ಅಪರಾಧಗಳ ಬಗ್ಗೆ ತೀವ್ರ ನಿಗಾವಹಿಸಲಾಗಿದೆ. ಈಗಾಗಲೇ ಜಿಲ್ಲಾದ್ಯಂತ ಆಯ್ದ ಸ್ಥಳಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆಯನ್ನು ತೀವ್ರಗೊಳಿಸಿದೆ. ಪ್ರತಿ ಚಲನವಲಗಳ ಬಗ್ಗೆ ನಿಗಾವಹಿಸಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ತಂಡ, ಸ್ಥಿರ ಕಣ್ಗಾವಲು ತಂಡ, ಸೆಕ್ಟರ್ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದರು.
ವಿಧಾನಸಭಾ ಸಾರ್ವತ್ರಿಕ ಚುನಾಚವಣೆಯ ನೀತಿ ಸಂಹಿತೆ ಜಾರಿಯಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು ರೂ 93,42,496 ಮೊತ್ತದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ರೂ 2,53,400 ಮೊತ್ತದ 6627 ಲೀಟರ್ ಮದ್ಯ, ಸೂಕ್ತ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ರೂ. 42,6,208 ನಗದು, ರೂ 56,100 ಮೌಲ್ಯದ 3.2 ಕೆ.ಜಿ ನಿಕೋಟಿನ್ಸ್ ಮತ್ತು ಅಕ್ರಮವಾಗಿ ಸಾಗಿಸುತ್ತಿದ್ದ 66.7 ಕೆ.ಜಿ ಬೆಳ್ಳಿ ವಶಪಡಿಸಿಕೊಂಡಿರುವ ಕುರಿತಂತೆ ಮಾಹಿತಿ ನೀಡಿದರು.
ಅಂಚೆ ಮತದಾನ ಸೇವೆ: ಚುನಾವಣಾ ಆಯೋಗದ ಈ ಭಾರಿ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ರೈಲ್ವೆ, ದೂರದರ್ಶನ, ಆರೋಗ್ಯ ಇಲಾಖೆ, ಅಗ್ನಿಶಾಮಕ ಠಾಣೆ, ಕರ್ನಾಟಕ ರಾಜ್ಯ ರಸ್ತೆ ನಿಗಮ, ವಾರ್ತಾ ಇಲಾಖೆ, ಸಂಚಾರಿ ಪೊಲೀಸ್, ತುರ್ತು ಆರೋಗ್ಯ ಸೇವೆ, ಬೆಂಗಳೂರು ವಿದ್ಯುತ್ ಸರಬರಾಜು ನಿಗಮ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಭಾರತೀಯ ದೂರಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಅಗತ್ಯ ಸೇವಾ ನಿರತ 12 ಇಲಾಖೆಗಳಿಗೆ ಅಂಚೆ ಮತದಾನ ವ್ಯವಸ್ಥೆ ಜಾರಿಗೆ ತಂದಿದೆ. ಮತದಾನ ದಿನ ಚುನಾವಣಾ ಕರ್ತವ್ಯದಲ್ಲಿ ನಿರತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಂಚೆ ಮತದಾನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ವಿಶೇಷ ಚೇತನ ಮತದಾರರಿಗೆ ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ಮತದಾರರಿಗೆ ಅವರು ಇಚ್ಛೆಪಟ್ಟರೆ ಮನೆಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಗಳಲ್ಲಿ ವಿಕಲಚೇತನರಿಗೆ ರ್ಯಾಂಪ್ ವ್ಯವಸ್ಥೆ, ವಾಹನ ವ್ಯವಸ್ಥೆ ಹಾಗೂ ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ಬೆಳಕು, ನೆರಳು, ಶೌಚಾಲಯ, ರ್ಯಾಂಪ್ ವ್ಯವಸ್ಥೆಗಳಿರುವಂತೆ ನೋಡಿಕೊಳ್ಳಲಾಗಿದೆ. ದಾವಣಗೆರೆ ನಗರದ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರದಲ್ಲಿ ತಲಾ ಒಂದು ವಿಶೇಷ ಚೇತನರ ಮತಗಟ್ಟೆ, ದಾವಣಗೆರೆ ತಾಲೂಕಿನಲ್ಲಿ ಸ್ಥಳೀಐ ಸಂಸ್ಕøತಿಯ ಬಿಂಬಿಸುವ ರೀತಿಯಲ್ಲಿ ಲಂಬಾಣಿ ತಾಂಡಾವೊಂದರಲ್ಲಿ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ಹಾಗೂ ಯುವ ಜನರೆ ನಿರ್ವಹಿಸುವ ಮತಗಟ್ಟೆ ಹಾಗೂ ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಡಾ. ಬಿ.ಆರ್.ರಂಗನಾಥ್ ಕುಳಗಟ್ಟೆ, ಜಿಲ್ಲಾ ವರದಿಗಾರರ ಒಕ್ಕೂಟದ ಅಧ್ಯಕ್ಷರಾದ ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಡಾ.ಸಿ.ವರದರಾಜ್, ಖಜಾಂಚಿ ಮಧುನಾಗರಾಜ ಕುಂದವಾಡ, ಮತ್ತು ಜಿಲ್ಲಾ ಮಟ್ಟದ ವರದಿಗಾರರು ಉಪಸ್ಥಿತರಿದ್ದರು.