ಕೋಮುವಾದವೇ ಬಿಜೆಪಿ ಆಡಳಿತಕ್ಕೆ ಆಕ್ಸಿಜನ್ ; ಕಿಮ್ಮನೆ ರತ್ನಾಕರ್

ಹೊಸನಗರ.ಜು.೯: ಪ್ರಸಕ್ತ ರಾಜ್ಯ ಹಾಗೂ ರಾಷ್ಟçದ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಕೋಮುವಾದವೇ ಆಕ್ಸಿಜನ್ ಆಗಿದೆ. ಧರ್ಮ-ಮತಗಳ ನಡುವೆ ಕೋಮುವಾದದ ವಿಷಬೀಜ ಬಿತ್ತುವ ಮೂಲಕ ಬಿಜೆಪಿ ಪಕ್ಷವು ಜೀವಂತಿಕೆ ಕಂಡುಕೊಳ್ಳುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾಡಿದರು.
ಪಟ್ಟಣದ ಗಾಂಧಿಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದಲ್ಲಿನ ಮಹಾಮಾರಿ ಕೋರೋನ ರೋಗಕ್ಕೆ ಬಲಿಯಾದವ ನೈಜ್ಯ ಚಿತ್ರಣ ನೀಡುವಲ್ಲಿ ವಿಫಲವಾಗಿದೆ. ಇದು ಸಾರ್ವಜನಿಕರಲ್ಲಿ ಹಲವು ಅನುಮಾನಗಳನ್ನು ಸಹ ಮೂಡಿಸಿದೆ. ಸರ್ಕಾರ ಹಾಗೂ ಮಾಧ್ಯಮಗಳು ನೀಡಿದ ಸಾವಿನ ಸಂಖ್ಯೆಯಲ್ಲಿ ಭಾರೀ ವ್ಯತ್ಯಯ ಇದೆ. ಈ ಹಿನ್ನಲೆಯಲ್ಲಿ ರಾಜ್ಯ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ರಾಜ್ಯವ್ಯಾಪ್ತಿ ಕಾಂಗ್ರೆಸ್ ಪಕ್ಷದಿಂದ ಕೊರೋನ ಸಂತ್ರಸ್ತರ ಸಂಪೂರ್ಣ ಅಂಕಿ-ಅಂಶ ಸಂಗ್ರಹಕ್ಕೆ ಪಕ್ಷ ಮುಂದಾಗುವ ಮೂಲಕ ಬಿಜೆಪಿ ಪಕ್ಷದ ನೈಜ್ಯ ಮುಖವಾಡ ಬಯಲು ಮಾಡಲು ಕಾಂಗ್ರೆಸ್ ಅಭಿಯಾನ ಕೈಗೊಂಡಿದೆ. ಮುಂದಿನ ನಾಲ್ಕು ದಿನಗಳ ಕಾಲ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೂ ಅಭಿಯಾನ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಸ್ಥಳೀಯವಾಗಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.
ಬಿಜೆಪಿಯಿಂದ ಲಸಿಕೆ ರಾಜಕಾರಣ; ಲಸಿಕೆ ಪಡೆಯಲು ಬರುವ ನಾಗರೀಕರಲ್ಲಿ ಬಿಜೆಪಿ ಪಕ್ಷದಿಂದ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಸರದಿ ಸಾಲಿನಲ್ಲಿ ಕಾಂಗ್ರೆಸ್ ಪಕ್ಷದ ಅನುಯಾಯಿಗಳು ಕಂಡುಬಂದಲ್ಲಿ ವಿನ:ಕಾರಣ ಗದ್ದಲ ಎಬ್ಬಿಸುವ ಮೂಲಕ ಲಸಿಕೆ ಅಭಿಯಾನವನ್ನು ತಾತ್ಕಾಲಿಕ ಬಂದ್ ಮಾಡುವ ಮೂಲಕ ಕಾಂಗ್ರೆಸಿಗರು ಲಸಿಕೆ ಪಡೆಯದಂತೆ ನೋಡಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದರು.
ಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಮಾಜಿ ಸದಸ್ಯ ಬಂಡಿ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ತಾ.ಪಂ. ಮಾಜಿ ಸದಸ್ಯರಾದ ಎರಗಿ ಉಮೇಶ್, ಬಿ.ಜಿ.ಚಂದ್ರಮೌಳಿ ಪ.ಪಂ.ಸದಸ್ಯ ಅಶ್ವಿನಿ ಕುಮಾರ್ ಇದ್ದರು.