ಕೋವಿಡ್ ನಿಯಂತ್ರಣದಲ್ಲಿ ವೆಂಟಿಲೇಟರ್ಗೆ ಒಬ್ಬ ಮಂತ್ರಿ; ಯು.ಟಿ.ಖಾದರ್ ವ್ಯಂಗ್ಯ

ಹರಪನಹಳ್ಳಿ.ಜು.೯; ಖಾಸಗೀಕರಣ ಮಾಡಿದವರು ದೇಶಪ್ರೇಮಿಗಳು, ರಾಷ್ಟ್ರೀಕರಣ ಮಾಡಿದವರು ದೇಶದ್ರೋಹಿಗಳೆಂದು ಬಿಜೆಪಿ ಸರ್ಕಾರ ಬಿಂಬಿಸುತ್ತಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಬಿಜೆಪಿ ವಿರುದ್ಧ ಹರಿಹಾಯ್ದರು.ಪಟ್ಟಣದ ಬಾಣಗೇರಿ ಬೈಪಾಸ್ ರಸ್ತೆಯಲ್ಲಿ ಕಾಂಗ್ರೆಸ್ ಪಕ್ಷದ ಬ್ಲಾಕ್ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಜನರಿಗೆ ಮೋಸ ಮಾಡುತ್ತಿದೆ ಕರುಣೆ, ಮಾನವೀಯತೆ ಗೊತ್ತಿಲ್ಲದ ಬಿಜೆಪಿಯ ಆಡಳಿತದಿಂದ ಬೇಸತ್ತಿರುವ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾದಿದ್ದಾರೆ ಎಂದರು.ಕೋವಿಡ್ನಿಂದ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಅವರಿಗೆ ದೃಢೀಕರಣ ಪತ್ರ ಕೊಡದ ಸರ್ಕಾರ ಪರಿಹಾರ ಕೊಡುವುದು ದೂರದ ಮಾತು. ಕೋವಿಡ್ ನಿಯಂತ್ರಣದಲ್ಲಿ ವೆಂಟಿಲೇಟರ್ಗೆ ಒಬ್ಬ ಮಂತ್ರಿ
ಬೆಡ್ಗೆ ಒಬ್ಬ ಆಕ್ಸಿಜನ್ ಮತ್ತು ಔಷಧ ನಿರ್ವಹಣೆಗೆ ಒಬ್ಬರಂತೆ ಮಂತ್ರಿ ಮಾಡಲಾಗಿದೆ. ಅನುದಾನದ ಬಿಲ್ಗೆ ಯಾರು ಸಹಿ ಮಾಡುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.ಬಿಜೆಪಿಗೆ ಹೈ ಇದೆ, ಕಮಾಂಡ್ ಇಲ್ಲದ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಯ ದುರಾಡಳಿತ ವನ್ನು ಜನರೆದುರು ತಿಳಿಸಬೇಕು. ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಖಾದರ್ ಹೇಳಿದರು.
ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅನಿಲ ದರ ಗಗನಕ್ಕೇರಿದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಬಿಜೆಪಿ ಸರ್ಕಾರದಿಂದ ಜನಸಾಮಾನ್ಯರ ಚರ್ಮ ಸುಲಿಯುವುದೊಂದೇ ಬಾಕಿ ಉಳಿದಿದೆ. ಬಲವಂತದ ತೆರಿಗೆ ಹೇರಲಾಗುತ್ತಿದೆ. ಕೋವಿಡ್ ನಿಯಂತ್ರಣ ಸಂದರ್ಭದಲ್ಲಿ ವೆಂಟಿಲೇಟರ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಿರಾಜ್ ಶೇಖ್, ವಿದಾನ ಪರಿಷತ್ ಸದಸ್ಯ ವಿಜಯ ಸಿಂಗ್, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಯೋಗಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾಲತಾ, ಬ್ಲಾಕ್ ಅಧ್ಯಕ್ಷ ಬೇಲೂರು ಅಂಜಪ್ಪ, ಮಂಜುನಾಥ್, ಹೆಚ್.ಬಿ. ಪರಶುರಾಮಪ್ಪ, ಡಾ.ಮಂಜುನಾಥ ಉತ್ತಂಗಿ, ಡಾ.ಉಮೇಶಬಾಬು, ವಾರದ ಗೌಸ್, ಮುತ್ತಿಗಿ ಜಂಬಣ್ಣ, ಶಶಿಧರ ಪೂಜಾರ್ ಇದ್ದರು.