ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿ ಐದು ಜನರಿಗೆ ಮಾತ್ರ ಕೊಠಡಿಗೆ ಪ್ರವೇಶ – ಜಿಲ್ಲಾ ಚುನಾವಣಾಧಿಕಾರಿ

ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿ ಐದು ಜನರಿಗೆ ಮಾತ್ರ ಕೊಠಡಿಗೆ ಪ್ರವೇಶ - ಜಿಲ್ಲಾ ಚುನಾವಣಾಧಿಕಾರಿ

ದಾವಣಗೆರೆ: ದಾವಣಗೆರೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಆಯಾ ಕ್ಷೇತ್ರ ಚುನಾವಣಾಧಿಕಾರಿಗಳು ಬೆಳಗ್ಗೆ 10 ಗಂಟೆಗೆ ಪ್ರಪತ್ರ-1 ಅಧಿಸೂಚನೆ ಪ್ರಕಟಿಸುವರು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಅವರು ಬುಧವಾರ ಏ.12 ಅವರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್ಲಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಇವರು 103.ಜಗಳೂರು ತಾಲ್ಲೂಕು ಕಚೇರಿ, 105.ಹರಿಹರ ತಹಶೀಲ್ದಾರರ ಕೊಠಡಿ, 106.ದಾವಣಗೆರೆ ಉತ್ತರ ಮಹಾನಗರ ಪಾಲಿಕೆ ಒಂದನೆ ಮಹಡಿಯ ಕೊಠಡಿ 10 ರಲ್ಲಿ ಮತ್ತು 107. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪಾಲಿಕೆಯ ನೆಲ ಮಹಡಿ ಕೊಠಡಿ.3 ರಲ್ಲಿ ಮತ್ತು 108.ಮಾಯಕೊಂಡ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಾವಣಗೆರೆ ತಹಶೀಲ್ದಾರರ ಕಚೇರಿ ತಹಶೀಲ್ದಾರರ ಕೊಠಡಿಯಲ್ಲಿ, 109.ಚನ್ನಗಿರಿ ತಹಶೀಲ್ದಾರರ ಕೊಠಡಿ, 110.ಹೊನ್ನಾಳಿ ತಹಶೀಲ್ದಾರರ ಕೊಠಡಿಯಲ್ಲಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುತ್ತದೆ.

ನಾಮಪತ್ರಗಳನ್ನು ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದ್ದು ಏ.21 ರಂದು ನಾಮಪತ್ರಗಳ ಪರಿಶೀಲನೆ, ಏ.24 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿರುತ್ತದೆ. ಮತದಾನವು ಮೇ.10 ರಂದು ನಡೆಯಲಿದೆÉ ಎಂದರು.

ಮಿತಿ ಮತ್ತು ನಮೂನೆ; ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿ ಆವರಣದ ನೂರು ಮೀಟರ್ ವ್ಯಾಪ್ತಿಯಲ್ಲಿ ಪ್ರತಿ ಅಭ್ಯರ್ಥಿಗೆ ಮೂರು ವಾಹನಗಳಲ್ಲಿ ಮಾತ್ರ ಆಗಮಿಸಲು ಅವಕಾಶ ಇರುತ್ತದೆ. ನಾಮಪತ್ರಗಳನ್ನು ಸಲ್ಲಿಸುವ ವೇಳೆ ಅಭ್ಯರ್ಥಿ ಸೇರಿ 5 ಜನಕ್ಕಿಂತ ಹೆಚ್ಚು ಇರಬಾರದು. ನಾಮಪತ್ರಗಳನ್ನು ನಮೂನೆ-2ಬಿ ರಲ್ಲಿ ಸಲ್ಲಿಸಬೇಕು, ಗರಿಷ್ಠ ಒಬ್ಬರು 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಇದೆ. ಮಾನ್ಯತೆ ಪಡೆದ ಪಕ್ಷದಿಂದ ಸ್ಪರ್ಧಿಸಿದಲ್ಲಿ ಆಯಾ ಕ್ಷೇತ್ರ ವ್ಯಾಪ್ತಿಯ ಒಬ್ಬರು ಸೂಚಕರು ಕಡ್ಡಾಯ, ಮಾನ್ಯತೆ ಪಡೆಯದ ಪಕ್ಷ ಅಥವಾ ಸ್ವತಂತ್ರವಾಗಿ ಸ್ಪರ್ಧಿಸಿದರೆ 10 ಜನ ಮತದಾರರು ಸೂಚಕರಿರಬೇಕು.

ಠೇವಣಿ; ಸಾಮಾನ್ಯ ವರ್ಗದವರಿಗೆ ರೂ.10 ಸಾವಿರ ಮತ್ತು ಪರಿಶಿಷ್ಟ ಜಾತಿ, ಪ.ಪಂಗಡದವರಿಗೆ ರೂ.5 ಸಾವಿರ ಠೇವಣಿಯನ್ನು ನೀಡಬೇಕಾಗುತ್ತದೆ. ನಂತರ ಚುನಾವಣಾ ವೆಚ್ಚಕ್ಕೆ ಪ್ರತ್ಯೇಕವಾದ ಖಾತೆಯನ್ನು ತೆರೆಯಬೇಕಿದ್ದು ವೆಚ್ಚ ಮಿತಿ ರೂ.40 ಲಕ್ಷದವರೆಗೆ ಇರುತ್ತದೆ.

ನಾಮಪತ್ರ ಆನ್‍ಲೈನ್; ಆನ್‍ಲೈನ್ ಮೂಲಕವೂ https;//suvidha.eci.gov.in ನಲ್ಲಿಯು ನಾಮಪತ್ರಗಳನ್ನು ಸಲ್ಲಿಸಿ ಪ್ರತಿಗಳನ್ನು ಚುನಾವಣಾಧಿಕಾರಿಗೆ ಸಲ್ಲಿಸಬಹುದು. ನಾಮಪತ್ರ ಸಲ್ಲಿಸಿದ ನಂತರ ನಮೂನೆ-26 ರಲ್ಲಿ ಪ್ರಮಾಣೀಕರಿಸಬೇಕಾಗುತ್ತದೆ.

ಕ್ರಿಮಿನಲ್ ಹಿನ್ನಲೆ ಪ್ರಚಾರ; ಕ್ರಿಮಿನಲ್ ಹಿನ್ನೆಲೆಯುಳ್ಳವರು ಘೋಷಣೆಗಳನ್ನು ಸಲ್ಲಿಸಿ ವ್ಯಾಪಕ ಪ್ರಸಾರವಿರುವ ಪತ್ರಿಕೆಗಳಲ್ಲಿ ಮೂರು ಹಂತದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಪ್ರಚುರಪಡಿಸಬೇಕಾಗುತ್ತದೆ. ಮೊದಲು ನಾಮಪತ್ರ ವಾಪಸ್ ಪಡೆಯುವ 4 ದಿನ ಮೊದಲು, ಮುಂದಿನ 5 ರಿಂದ 8 ದಿನಗಳೊಳಗಾಗಿ ಒಂದು ಭಾರಿ ಮತ್ತು 9 ನೇ ದಿನದಿಂದ ಪ್ರಚಾರದ ಕೊನೆಯ ದಿನದೊಳಗೆ ಪ್ರಚುರಪಡಿಸಬೇಕು.

ಕಟ್ಟುನಿಟ್ಟಿನ ಚುನಾವಣೆಗೆ ತಂಡಗಳ ನೇಮಕ; ಚುನಾವಣೆಯನ್ನು ಪಾರದರ್ಶಕ, ನ್ಯಾಯ ಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ವಿವಿಧ ತಂಡಗಳನ್ನು ನೇಮಕ ಮಾಡಲಾಗಿದೆ. 7 ಕ್ಷೇತ್ರಗಳಿಂದ 164 ಸೆಕ್ಟರ್ ಅಧಿಕಾರಿಗಳು, ಪೊಲೀಸ್ ಸೇರಿದಂತೆ 63 ಪ್ಲೈಯಿಂಗ್ ಸ್ಕ್ವಾಡ್, 29 ಚೆಕ್‍ಪೋಸ್ಟ್, 15 ವೀಡಿಯೋ ಸರ್ವಲೆನ್ಸ್ ತಂಡ, 7 ವೀಡಿಯೋ ವೀಕ್ಷಣಾ ತಂಡ, 7 ಸಹಾಯಕ ವೆಚ್ಚ ವೀಕ್ಷಣಾ ಅಧಿಕಾರಿಗಳು, 7 ಲೆಕ್ಕಪರಿಶೋಧನಾ ತಂಡಗಳನ್ನು ನೇಮಕ ಮಾಡಲಾಗಿದೆ.

ಮಾಧ್ಯಮ ಕಣ್ಗಾವಲಿಗೆ ಎಂಸಿಎಂಸಿ; ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ವೇಳೆ ಕಾಸಿಗಾಗಿ ಸುದ್ದಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡುವುದನ್ನು ವೀಕ್ಷಣೆ ಮಾಡಲು ಮಾಧ್ಯಮ ನಿಗಾ ತಂಡವನ್ನು ನೇಮಕ ಮಾಡಲಾಗಿದೆ. ವಿದ್ಯುನ್ಮಾನ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತು ನೀಡಲು ಎಂಸಿಎಂಸಿಯಿಂದ ಪೂರ್ವ ಪ್ರಮಾಣೀಕರಣ ಕಡ್ಡಾಯವಾಗಿರುತ್ತದೆ ಎಂದರು.

1435709 ಮತದಾರರು; ಜಿಲ್ಲೆಯ 7 ಕ್ಷೇತ್ರಗಳಿಂದ ಇಲ್ಲಿಯವರೆಗೆ 1436175 ಮತದಾರರು ನೊಂದಾಯಿಸಿದ್ದು ಇದರಲ್ಲಿ 718953 ಪುರುಷ, 716640 ಮಹಿಳಾ, 116 ಲಿಂಗತ್ವ ಅಲ್ಪಸಂಖ್ಯಾತರು, 466 ಸೇವಾ ಮತದಾರರಿದ್ದಾರೆ. ವಿಕಲಚೇತನರು 19647 ಇದ್ದು 11485 ಪುರುಷ, 8162 ಮಹಿಳಾ ಮತದಾರರಿದ್ದಾರೆ. ಒಟ್ಟು ಮತದಾರರಲ್ಲಿ 18-19 ವಯೋಮಾನ 33410, 20 ರಿಂದ 29 ವಯೋಮಾನ 284688, 30 ರಿಂದ 39 ರ ವಯೋಮಾನ 341563, 40 ರಿಂದ 49 ರ ವಯೋಮಾನ 305781, 50 ರಿಂದ 59 ರ ವಯೋಮಾನ 227543, 60 ರಿಂದ 69 ರ ವಯಸ್ಸು 143628, 70 ರಿಂದ 79 ರ ವಯಸ್ಸು 71518, 80 ರಿಂದ 89 ರ ವಯಸ್ಸು 23365, 90 ರಿಂದ 99 ರ ವಯಸ್ಸು 4000 ಮತ್ತು 100 ವರ್ಷ ದಾಟಿದ ಶತಕವೀರರು 213 ಮತದಾರರು ಸೇರಿ 80 ವರ್ಷ ಮೇಲ್ಪಟ್ಟ ಒಟ್ಟು 27578 ಮತದಾರರಿದ್ದಾರೆ.

ಮತದಾನ ನೇರ ವೀಕ್ಷಣೆ; ಮತದಾನ ದಿನದಂದು ಮತದಾನದ ಪ್ರಕ್ರಿಯೆಗಳನ್ನು ನೇರ ಸೇರೆಯಿಡಿಯಲು ಶೇ 50 ರಷ್ಟು ಮತಗಟ್ಟೆಗಳಲ್ಲಿ ವೆಬ್‍ಕಾಸ್ಟಿಂಗ್ ಮಾಡಲಾಗುತ್ತದೆ. ಇದರಲ್ಲಿ ಜಗಳೂರು 262 ಮತಗಟ್ಟೆಗಳಲ್ಲಿ 128, ಹರಿಹರ 228 ರಲ್ಲಿ 142, ದಾವಣಗೆರೆ ಉತ್ತರ 242 ರಲ್ಲಿ 121, ದಾವಣಗೆರೆ ದಕ್ಷಿಣ 214 ರಲ್ಲಿ 106, ಮಾಯಕೊಂಡ 240 ರಲ್ಲಿ 120, ಚನ್ನಗಿರಿ 254 ರಲ್ಲಿ 127 ಮತ್ತು ಹೊನ್ನಾಳಿಯ 245 ಮತಗಟ್ಟೆಗಳಲ್ಲಿ 125 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯ 1685 ಮತಗಟ್ಟೆಗಳಲ್ಲಿ 869 ವೆಬ್‍ಕಾಸ್ಟಿಂಗ್ ಮಾಡಲಾಗುತ್ತದೆ.

ಮತದಾನ ಸಿಬ್ಬಂದಿಗೆ ತರಬೇತಿ; ಚುನಾವಣೆಗೆ 2022 ಮತಗಟ್ಟೆ ಅಧ್ಯಕ್ಷಾಧಿಕಾರಿ, 2022 ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ, 4044 ಮತಗಟ್ಟೆ ಅಧಿಕಾರಿಗಳು ಸೇರಿದಂತೆ 8088 ಚುನಾವಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು ಈಗಾಗಲೇ ಏಪ್ರಿಲ್ 11 ರಂದು ಮೊದಲ ಹಂತದ ತರಬೇತಿ ನೀಡಲಾಗಿದೆ. ಎರಡನೇ ಹಂತದ ತರಬೇತಿಯು ಏಪ್ರಿಲ್ 30 ರಂದು ನಡೆಯಲಿದೆ ಎಂದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!