ಋಣಾತ್ಮಕ ಭಾವನೆ ಯಿಂದ ಹೊರಬರುವುದು ಹೇಗೆ..? – ವೆಂಕಟೇಶ್ ಬಾಬು

ದಾವಣಗೆರೆ: ಇತ್ತೀಚೆಗೆ ಹೀಗೆ ಏನೊ ಓದುತ್ತಾ ಕುಳಿತುಕೊಂಡಾಗ ನನ್ನ ಮೊಬೈಲ್ ಗೆ ಸಂದೇಶವೊಂದು ಬಂದಿತ್ತು. ಏನೋ ಜಾಹಿರಾತಿನ ಸಂದೇಶ ಇರಬೇಕೆಂದು ಅದರ ಕಡೆ ಹೆಚ್ಚು ಗಮನ ಕೊಡದೆ ಓದೋದ್ರಲ್ಲಿ ತಲ್ಲೀನನಾದೆ. ಮತ್ತೊಮ್ಮೆ ಸಂದೇಶದ ಶಬ್ದ ಗುಣುಗುಟ್ಟಿತು ಆಗ ಮೊಬೈಲ್ ನ ತೆಗೆದು ಸಂದೇಶ ತೆರೆದಾಗ ನನ್ನ ಹಳೆಯ ವಿದ್ಯಾರ್ಥಿಯೊಬ್ಬ ಕಳುಹಿಸಿದ ಸಂದೇಶ ಬಂದಿತ್ತು. ಹಾಗೆ ಸಂದೇಶ ಏನಿರಬಹುದೆಂದು ಓದುತ್ತಾ ಹೋದೆ ಓದುವಾಗ ಅಷ್ಟೇನೂ ಬಹುಮುಖ್ಯ ವಾದದ್ದು ಎನಿಸಲಿಲ್ಲ ಆದರೆ ಇದರಲ್ಲಿ ಏನೋ ಇದೆ ಎನ್ನಿಸಿತು ಆಗ ಮತ್ತೊಮ್ಮೆ ನಿಧಾನವಾಗಿ ಓದಿದೆ ಆ ಸಂದೇಶ ಹೀಗಿತ್ತು.
ಎಲ್ಲಾ ಮನುಷ್ಯರ ಗುರಿ ಆಕಾಂಕ್ಷೆ ಮತ್ತು ಕೆಲಸಗಳು ಅವರಲ್ಲಿರುವ ಗ್ರಹಿಕೆ, ನಂಬಿಕೆ, ಮತ್ತು ಶ್ರದ್ಧೆಗಳ ಸಂಕೀರ್ಣದ ಮಿಶ್ರಣಗಳಾಗಿರುತ್ತವೆ. ಯಾವಾಗ ಈ ಮೂರೂ ಅಂಶಗಳು ಮನಸ್ಸಿನಲ್ಲಿ ಧನಾತ್ಮಕ ರೀತಿಯಲ್ಲಿ ಮಾರ್ಗವನ್ನು ಪಡೆಯುತ್ತವೆಯೋ ಆಗ ಗ್ರಹಿಕೆ, ಜ್ಞಾನ, ಮತ್ತು ಜಾಣ್ಮೆ ನಂಬಿಕೆ ಮನಃಶಕ್ತಿ ಮತ್ತು ಉತ್ಸುಕತೆಯಾಗಿಯೂ ಹಾಗೂ ಶ್ರದ್ಧೆ ಸಾಮರ್ಥ್ಯಗಳು ಪ್ರೇರಣೆಯಾಗಿಯೂ ಪರಿವರ್ತನೆಗೊಳ್ಳುತ್ತವೆ. ಆದರೆ ಈ 3 ಅಂಶಗಳು ಋಣಾತ್ಮಕ ರೀತಿಯಲ್ಲಿ ಮಾರ್ಗವನ್ನು ಮನಸ್ಸಿನಲ್ಲಿ ಪಡೆದರೆ ತಪ್ಪುಗ್ರಹಿಕೆ ಅಜ್ಞಾನ ಮತ್ತು ಅಸಮರ್ಥತೆಯಾಗಿ ಅಪನಂಬಿಕೆ ದುರ್ಬಲತೆ ಮತ್ತು ನ್ಯೂನತೆಗಳಾಗಿ ಹಾಗೂ ಸಂಶಯ ಪರಿಮಿತ ತೆಯಾಗಿ ಪರಿವರ್ತನೆಗೊಳ್ಳುತ್ತವೆ.
ಮೇಲಿನ ಸಂದೇಶ ಓದಿದಾಗ ಅಬ್ಬಾ ಎಂಥ ಅದ್ಭುತವಾದ ಸತ್ಯವಾದ ಹೇಳಿಕೆ ಎನ್ನಿಸಿತು. ಪ್ರತಿಯೊಬ್ಬರಿಗೂ ಒಳ್ಳೇದೇ ಆಗಬೇಕು ಒಳ್ಳೆಯದನ್ನೇ ಬಯಸಬೇಕು ಎನ್ನುವುದು ಪ್ರತಿಯೊಬ್ಬರ ಆಶಯ ಆದರೆ ಅದಕ್ಕೆ ಬೇಕಾಗುವ ಧನಾತ್ಮಕ ಅಂಶಗಳನ್ನು ನಾವು ಬೆಳೆಸಿಕೊಳ್ಳುತ್ತಿದ್ದೇವೆಯೇ? ಎಂಬುದನ್ನು ಆಗಾಗ ನಾವು ನಮ್ಮ ಅಂತರ್ಯವನ್ನು ಕೇಳಿಕೊಳ್ಳಬೇಕಾಗುತ್ತದೆ. ಧನಾತ್ಮಕ ಚಿಂತನೆ ಅಥವಾ ಆಶಾವಾದದ ದೃಷ್ಟಿ ನಮ್ಮನ್ನು ಕತ್ತಲಿನಿಂದ ಬೆಳಕಿನ ಕಡೆಗೆ ಕರೆದುಕೊಂಡು ಹೋಗುವ ಸಾಧನ. ಗ್ರಹಿಕೆ ನಂಬಿಕೆ ಮತ್ತು ಶ್ರದ್ಧೆಗಳ ಸರಿಯಾದ ದರ್ಶನ ನಮ್ಮನ್ನು ಆಕಾಶದೆತ್ತರಕ್ಕೆ ದಾರಿ ತೋರಿಸಿದರೆ ಅವುಗಳ ತಪ್ಪು ದಿಶೆಯಿಂದ ನಾವು ಪಾತಾಳ ಸೇರುವುದು ಕಟುಸತ್ಯ.
ಆದರೆ ಒಮ್ಮೆ ನಾವು ಯೋಚಿಸಿ ದಾಗ ನಮ್ಮ ದಿನ ನಿತ್ಯದ ವಿಡಂಬನಾತ್ಮಕ ಭಯಂಕರ ಆಗುಹೋಗುಗಳ ನಡುವೆ ನಾವು ಆಶಾವಾದಿಯಾಗಿರುವುದು ಹೇಗೆ ಸಾಧ್ಯ? ಎಂಬ ಭಾವನೆ ನಮ್ಮಲ್ಲಿ ಮೂಡುವುದು ಸಹಜ. ಅದಕ್ಕೆ ಪರಿಹಾರವಾಗಿ ಯೋಗ ಸೂತ್ರವೊಂದು ಹೀಗೆ ಹೇಳುತ್ತದೆ.
ಯಾವಾಗ ಋಣಾತ್ಮಕ ವಿಚಾರಗಳು ಮನವನ್ನು ಘಾಸಿಗೊಳಿಸುತ್ತಿರುವಾಗ ಅದಕ್ಕೆ ವಿರುದ್ಧವಾದ ಎಂದರೆ ಧನಾತ್ಮಕ ಅಂಶಗಳತ್ತ ಮನಸ್ಸನ್ನು ಬಲವಂತವಾಗಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಧನಾತ್ಮಕ ಅಂಶಗಳೆಂದರೆ ಧ್ಯಾನ ಮಾಡುವುದು ವ್ಯಾಯಾಮ ಮಾಡುವುದು ಯೋಗಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು ಒಳ್ಳೆಯ ಆಟಗಳಲ್ಲಿ ಭಾಗವಹಿಸುವುದು ಮನಸ್ಸನ್ನು ಪವಿತ್ರಗೊಳಿಸುವ ಸಂಗೀತವನ್ನು ಕೇಳುವುದು ಸಾಹಿತ್ಯವನ್ನು ಓದುವುದು ಬರವಣಿಗೆಯ ಅಭ್ಯಾಸ ಬೆಳೆಸಿಕೊಳ್ಳುವುದು. ಇತರರೊಂದಿಗೆ ಒಳ್ಳೆಯ ರೀತಿಯಲ್ಲಿ ಮಾತನಾಡುವುದು ಹೀಗೆ ರಚನಾತ್ಮಕ ಕ್ರಿಯೆಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಋಣಾತ್ಮಕ ಭಾವನೆಗಳ ಮೂಲವನ್ನು ಶೋಧಿಸಿ ಅದಕ್ಕೊಂದು ಒಳ್ಳೆಯ ಪರಿಹಾರ ಹುಡುಕುವುದು. ಈ ಎಲ್ಲಾ ಕಾರಣಗಳಿಂದ ನಾವು ಧನಾತ್ಮಕ ಭಾವನೆಗಳಿಂದ ಮುಕ್ತರಾಗಲು ಪ್ರಯತ್ನಿಸಬಹುದು.
ಈ ಎಲ್ಲ ನಂಬಿಕೆ ಭರವಸೆಗಳನ್ನು ಕಳೆದುಕೊಂಡು ಜೀವಿಸುವುದು ಹೇಗೆ.?
ಪ್ರಸಿದ್ಧ ಲೇಖಕ ಮತ್ತು ಚಿಂತಕ ಶಿವ್ ಖೇರಾ ಅವರ ಜೀವನ 1ದೊಡ್ಡ ಉದಾಹರಣೆ ಹತ್ತನೇ ತರಗತಿಯಲ್ಲಿ ಫೇಲಾದ ಅವರು ಮುಂದೆ ತಮ್ಮ ತರುಣ ವಯಸ್ಸಿನಲ್ಲಿಯೇ ತಮ್ಮೆಲ್ಲ ಆಸ್ತಿ ಪಾಸ್ತಿಯನ್ನು ಕಳೆದುಕೊಂಡರು. ಭಾರತ ಬಿಟ್ಟು ಕೆನಡಾಕ್ಕೆ ಬಂದು ಅಲ್ಲಿ ಜೀವನವನ್ನು ಹೊಸದಾಗಿ ಆರಂಭಿಸಿದರು ಕಾರುಗಳನ್ನು ತೊಳೆಯುವುದರಿಂದ ಆರಂಭಿಸಿ ಜೀವ ವಿಮೆಯ ಏಜೆಂಟ ರಾಗಿ ಸೇಲ್ಸ್ ಮ್ಯಾನ್ರಾಗಿ ದುಡಿದರು. ತಮ್ಮ ಜೀವನದ ಕಷ್ಟದ ಗಳಿಗೆಗಳಲ್ಲಿ ಅವರು ಯಾವುದೇ ರೀತಿ ಧೃತಿಗೆಡಲಿಲ್ಲ. ನಾರ್ಮನ್ ವಿನ್ಸೆಂಟ್ ಪೀಲೆಯವರಿಂದ ಪ್ರೇರಿತಗೊಂಡು ಕಷ್ಟದಲ್ಲಿದ್ದ ಜನರನ್ನು ಪ್ರೇರೇಪಿಸಿ ಮಾರ್ಗದರ್ಶನ ಮಾಡಿದರು. ಅನೇಕ ಜನರಿಗೆ ಸಲಹೆಯನ್ನು ಕೊಟ್ಟರು. ಅವರ ಬದುಕಿನ ಮಾರ್ಗವನ್ನು ಬದಲಿಸಿದರು. ಅವರು ಇಂದು ವಿಶ್ವದ ಖ್ಯಾತ ಪ್ರೇರಣಾತ್ಮಕ ಭಾಷಣಕಾರ ರಾಗಿ ಹೊರಹೊಮ್ಮಿದ್ದಾರೆ.
ತಾರುಣ್ಯದಲ್ಲಿಯ ಸಂಕಟಗಳೆದುರು ಸೋತು ಕೈ ಚೆಲ್ಲಿದ್ದರೆ ಅವರು ಖ್ಯಾತರಾಗಲು ಸಾಧ್ಯವಾಗುತ್ತಿರಲಿಲ್ಲ ಅವರು ತಮ್ಮ ಗ್ರಹಿಕೆ ನಂಬಿಕೆ ಮತ್ತು ಶ್ರದ್ಧೆಗಳನ್ನು ಧನಾತ್ಮಕ ಮಾರ್ಗದಲ್ಲಿ ತೆಗೆದುಕೊಂಡು ಹೋಗಿ ನೂರಾರು ಜನರಿಗೆ ದಾರಿದೀಪವಾದರು. ನಮ್ಮ ಗ್ರಹಿಕೆ ನಂಬಿಕೆ ಮತ್ತು ಶ್ರದ್ಧೆಗಳನ್ನು ನಾವು ಆಶಾವಾದದಿಂದ ಧನಾತ್ಮಕವಾಗಿ ತೆಗೆದುಕೊಂಡರೆ ಆಗ ಏನಾದರೂ ಸಾಧಿಸಲು ಸಾಧ್ಯ.
ಕನ್ನಡದ ಕವಿ ಡಿ ವಿ ಗುಂಡಪ್ಪನವರು ಆಶಾವಾದ ಮನುಷ್ಯನ ಜೀವ ಗುಣ ಎಂದು ಬಣ್ಣಿಸಿದ್ದಾರೆ.
ಮನುಷ್ಯನ ಜೀವನದಲ್ಲಿ ಅದೆಷ್ಟೋ ತೊಂದರೆಗಳು ಬಂದರೂ ಮನುಷ್ಯನಲ್ಲಿ ಅನೇಕ ಆಶೆಗಳ ಉದಯವಾಗುತ್ತದೆ ಎಂತಹ ಕಟು ನುಡಿಗಳಲ್ಲಿ ಕೂಡ ಮನುಷ್ಯ ಒಳ್ಳೆಯ ದಿನಗಳನ್ನು ಜ್ಞಾಪಿಸಿಕೊಳ್ಳುತ್ತಾನೆ ಜೀವನದ ಎಲ್ಲ ಇಚ್ಛೆಗಳು ಪೂರೈಸಿದರೂ ಸಂತೃಪ್ತಗೊಂಡರೂ ಸೌಂದರ್ಯ ಮನುಷ್ಯನ ಮನಸ್ಸನ್ನು ಮತ್ತೆ ಮತ್ತೆ ಆಕರ್ಷಿಸುತ್ತದೆ. ಒಟ್ಟಿನಲ್ಲಿ ಆಶಾವಾದ ಮನುಷ್ಯನ ಜೀವ ಗುಣ ಎಂಬುದನ್ನು ಡಿವಿಜಿಯವರು ಒತ್ತಿ ಒತ್ತಿ ಹೇಳುತ್ತಾರೆ.
ಮನುಷ್ಯ ತನ್ನ ಜೀವನದ ಪ್ರತಿಯೊಂದು ಘಟ್ಟಗಳಲ್ಲಿ ಕಷ್ಟಗಳನ್ನು ಎದುರಿಸುತ್ತಾನೆ ಆದರೆ ಅವುಗಳನ್ನು ಋಣಾತ್ಮಕ ರೀತಿಯಲ್ಲಿ ತೆಗೆದುಕೊಳ್ಳದೆ ಆಶಾವಾದದಿಂದ ಧನಾತ್ಮಕ ದೃಷ್ಟಿಯಲ್ಲಿ ಕೊಂಡೊಯ್ದರೆ ತನ್ನ ಜೀವನದಲ್ಲಿ ಆಶಾ ಜೀವಿಯಾಗಿ ಬದುಕಲು ಸಾಧ್ಯ. ಮನುಷ್ಯನ ಋಣಾತ್ಮಕ ಭಾವನೆಗಳು, ಚಿಂತನೆಗಳು ಮನುಷ್ಯನನ್ನು ಕೊಲ್ಲುತ್ತದೆ.
ಧನಾತ್ಮಕ ಚಿಂತನೆ ಭಾವನೆ ಮನುಷ್ಯನನ್ನು ಬದುಕಿಸಿ ಇನ್ನಷ್ಟು ಜನರ ಬದುಕಿಗೆ ದಾರಿದೀಪವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಯಾವುದೇ ವಿಷಯಗಳನ್ನು ಧನಾತ್ಮಕ ರೀತಿಯಲ್ಲಿ ತೆಗೆದುಕೊಂಡರೆ ಜೀವನವನ್ನು ಹಸನ್ಮುಖಿಯಾಗಿಸ ಬಹುದು.
ವೆಂಕಟೇಶ್ ಬಾಬು ಎಸ್ ಸಹಾಯಕ ಪ್ರಾಧ್ಯಾಪಕರು ದಾವಣಗೆರೆ