ಬೀದಿ ಬದಿ ವ್ಯಾಪಾರಕ್ಕೆ ಪೋಲಿಸರ ಅಡ್ಡಿ ಬೇಡ

ದಾವಣಗೆರೆ.ಜು.೧೨; ನಗರದ ಫುಟ್ ಪಾತ್ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಿ ಜೀವನ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ದಾವಣಗೆರೆ ಜಿಲ್ಲಾ ಫುಟ್ ಪಾತ್ ವ್ಯಾಪಾರಿಗಳ ಸಂಘದ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಗರದಲ್ಲಿ 5 ಸಾವಿರಕ್ಕೂ ಹೆಚ್ಚು
ಫುಟ್‌ಪಾತ್ ವ್ಯಾಪಾರಿಗಳು ಬೀದಿ ವ್ಯಾಪಾರ ಅವಲಂಬಿಸಿ ದಿನನಿತ್ಯ ಜೀವನ ನಡೆಸುತ್ತಿದ್ದಾರೆ ಕೊರೋನಾದಿಂದಾಗಿ ಅತಂತ್ರ ಪರಿಸ್ಥಿತಿಯಲ್ಲಿ ಫುಟ್ ಪಾತ್ ವ್ಯಾಪಾರಿಗಳ ಜೀವನ ಸಾಗಿಸಿದ್ದರೆ ಇಂತಹ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಫುಟ್‌ಪಾತ್ ವ್ಯಾಪಾರಿಗಳಿಗೆ ವ್ಯಾಪಾರ ಮಾಡದಂತೆ ನೋಟೀಸ್ ಕೊಟ್ಟಿದ್ದಾರೆ . ಫುಟ್‌ಪಾತ್ ವ್ಯಾಪಾರಿಗಳು 5 ಸಾವಿರ ಇದ್ದು , ಇವರನ್ನೇ ನಂಬಿರುವ 35 ಸಾವಿರ ಕುಟುಂಬ ಬೀದಿ ಪಾಲಾಗುತ್ತದೆ , ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕೆಂದರು.
ಫುಟ್‌ಪಾತ್ ವ್ಯಾಪಾರಿಗಳು ಸಣ್ಣಪುಟ್ಟ ಸಾಲವನ್ನು ಬಡ್ಡಿಯಂತೆ ತಂದು ಬಿಸಿಲು , ಗಾಳಿ , ಚಳಿ , ಮಳೆ ಎನ್ನದೇ ದುಡಿದು ಬಡ್ಡಿ ಕಟ್ಟುತ್ತಾ ಜೀವನ ನಡೆಸುತ್ತಿದ್ದಾರೆ . ವಿದ್ಯಾಭ್ಯಾಸ ಮಾಡಿದರು ಬೇರೆ ಉದ್ಯೋಗ ಇಲ್ಲದೇ ಬೀದಿ ಬದಿ ವ್ಯಾಪಾರ ನಡೆಸುತ್ತಿದ್ದಾರೆ . ಗೌರವದಿಂದ ವ್ಯಾಪಾರ ನಡೆಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ . ಆದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.ಈ ವೇಳೆ ಆವರಗೆರೆ ವಾಸು ಮತ್ತಿತರರಿದ್ದರು.