ದಾವಣಗೆರೆಯಲ್ಲಿ ಕಟ್ಟಡ ಕಾರ್ಮಿಕರ ಹೋರಾಟ

ದಾವಣಗೆರೆ.ಜು.೧೨; ಲಾಕ್ ಡೌನ್ ನಗದು ಪರಿಹಾರ, ಕಿಟ್ ಖರೀದಿಯಲ್ಲಿ ಅಪಾರದರ್ಶಕತೆ, ಕೋವಿಡ್ ಪರಿಹಾರ, ಕಾರ್ಮಿಕರ ಕಲ್ಯಾಣ ಮಂಡಳಿಯ ಸವಲತ್ತುಗಳ ವಿಳಂಬ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಕಾರ್ಮಿಕ ಇಲಾಖೆ ಮುಂದೆ ಪ್ರತಿಭಟನೆ ನಡೆಸಿತು.
ನಗರದ ದೂಡಾ ಕಚೇರಿಯಲ್ಲಿ ಇರುವ ಜಿಲ್ಲಾ ಕಾರ್ಮಿಕ ಇಲಾಖೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಟ್ಟಡ ಕಾರ್ಮಿಕರು, ಕಟ್ಟಕ ನಿರ್ಮಾಣ ಕಾರ್ಮಿಕರ ವಿವಿಧ ಪರಿಹಾರಗಳು, ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಸಮಿತಿಯ ಸಂಚಾಲಕ, ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್, ಲಾಕ್ ಡೌನ್ ನಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ. ಕಟ್ಟಡ ಕಾರ್ಮಿಕ ಸಂಘಗಳು ಮಾಸಿಕ 10 ಸಾವಿರ ರೂಪಾಯಿ ಲಾಕ್‍ಡೌನ್ ಪರಿಹಾರ ಧನ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ಕಟ್ಟಡ ಕಾರ್ಮಿಕ ಸಂಘಗಳು ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದ ಕಲ್ಯಾಣ ಮಂಡಳಿಯಲ್ಲಿ 10 ಸಾವಿರ ಕೋಟಿ ಸೆಸ್ ಹಣ ಸಂಗ್ರಹವಾಗಿದ್ದರೂ ಕಾರ್ಮಿಕರಿಗೆ ಕೇವಲ 3 ಸಾವಿರ ನೆರವು ಪ್ರಕಟಿಸಿದೆ. ಅದೂ ಕೂಡ ಬಹುಪಾಲು ಕಾರ್ಮಿಕರಿಗೆ ತಲುಪಿಲ್ಲ. ಅಲ್ಲದೇ ಕಲ್ಯಾಣ ಮಂಡಳಿಗೆ ನೀಡಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗದೇ ಗೊಂದಲದ ಗೂಡಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್ ಕುಕ್ಕವಾಡ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಉಪಕರಣಗಳ ಕಿಟ್ಟನ್ನು ನೀಡಲಾಗುತ್ತಿದ್ದು, ಕೇವಲ ಕನಿಷ್ಠ ಬೆಲೆಯ 3ಸಾವಿರ ರೂ.ಗಳ ಕಿಟ್ ಖರೀದಿಸಿ ಅದನ್ನು 10ಸಾವಿರ ರೂ.ಗಳಿಗೆ ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇದರಲ್ಲೂ ಸಹ ಲಕ್ಷಾಂತರ ಹಣವನ್ನು ಲೂಟಿ ಹೊಡೆಯುವ ಜೊತೆಯಲ್ಲಿ ಕಾರ್ಮಿಕರ ಹೆಸರಿನಲ್ಲಿ ಇಲಾಖೆಯು ಭ್ರಷ್ಟಾಚಾರ ನಡೆಸುತ್ತಿದೆ.ಅಲ್ಲದೇ ಕೋವಿಡ್ ಸಮಯದಲ್ಲಿ ಮೃತ ಹೊಂದಿದ ನೊಂದಾಯಿತ ಕಾರ್ಮಿಕರಿಗೆ ಪರಿಹಾರ ನೀಡಬೇಕು. ಗುಣಮುಖ ಹೊಂದಿದ ಪಲಾನುಭವಿಗಳ ವೈದ್ಯಕೀಯ ವೆಚ್ಚವನ್ನು ಕಲ್ಯಾಣ ಮಂಡಳಿ ಭರಿಸಬೇಕು. ಅದರೆ, ಕಾರ್ಮಿಕ ಸಚಿವರು ಈವರೆಗೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘಟನೆ ಅಧ್ಯಕ್ಷ ಸತೀಶ್ ಅರವಿಂದ್ ಮಾತನಾಡಿ, ಮಂಡಳಿಯ ಘೋಷಿತ ಸವಲತ್ತುಗಳಾದ ವೈದ್ಯಕೀಯ ಸಹಾಯ ಧನ, ಮದುವೆ ಸಹಾಯ ಧನ, ಸಹಜ ಮರಣ ಪರಿಹಾರದ ಮೊತ್ತ, ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಣೆ, ಮನೆ ನಿರ್ಮಾಣಕ್ಕೆ ಐದು ಲಕ್ಷ ಸಹಾಯ ಧನ, ಅಡುಗೆ ಅನಿಲ, ಅಂಗವಿಕಲ ಪರಿಕರಗಳ ಖರೀದಿಗೆ ಸಹಾಯ ಧನಗಳನ್ನು ತುತ್ತಾಗಿ ಬಿಡುಗಡೆ ಮಾಡಬೇಕು. ಅಲ್ಲದೇ ಅರ್ಜಿಗಳ ವಿಳಂಬ ವಿಲೇವಾರಿ ಅಗುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ನಕಲಿ ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಟ್ಟಡ ಕಾರ್ಮಿಕ ಅಲ್ಲದವರೂ ಕಾರ್ಡನ್ನು ಮಾಡಿಸುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಸಹಾಯ ಮಾಡುವ ನೆಪದಲ್ಲಿ ಕಾರ್ಮಿಕ ಇಲಾಖೆ ಒಳಗೆ ಮಧ್ಯವರ್ತಿಗಳು ಬಾರದಂತೆ ತಡೆಗಟ್ಟಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ, ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ, ಶಿವಕುಮಾರ್ ಡಿ.ಶೆಟ್ಟರ್, ಭೀಮಾ ರೆಡ್ಡಿ, ಎಸ್. ಸಿದ್ದಲಿಂಗಪ್ಪ, ಎಸ್.ಎಂ.ಸಿದ್ದಲಿಂಗಪ್ಪ, ದಾದಾಪೀರ್, ಎಸ್.ಮುರುಗೇಶ್, ಫಯಾಜ್ ಅಹಮದ್, ಆದಿಲ್ ಖಾನ್, ಕೆ.ಹೆಚ್.ಆನಂದ ರಾಜ, ಗುಡ್ಡಪ್ಪ, ತಿಮ್ಮಪ್ಪ, ಐರಣಿ ಚಂದ್ರು, ಸುರೇಶ್ ಇತರರು ಇದ್ದರು. ನಂತರ ಮನವಿ ಸ್ವೀಕರಿಸಿದ ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಸಾಬ್ ಮುಂದಿನ ಕ್ರಮಕ್ಕೆ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗೆ ರವಾನಿಸುವ ಭರವಸೆ ನೀಡಿದರು.