ಗಣಿ ಸಚಿವ ನಿರಾಣಿ ಭೇಟಿ ಮಾಡಿದ ಸಂಸದೆ ಸುಮಲತಾ: ಅಕ್ರಮ ಗಣಿಗಾರಿಕೆ ರದ್ದತಿಗೆ ಮನವಿ

ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಕೂಡಲೇ ರದ್ಧುಗೊಳಿಸುವಂತೆ ಸಂಸದೆ ಸುಮಲತಾ ಅಂಬರೀಶ್ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್.ಆರ್.ನಿರಾಣಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅಕ್ರಮ ಗಣಿಗಾರಿಕೆಯಿಂದ ದೊಡ್ಡ ಮಟ್ಟದಲ್ಲಿ ಪರಿಸರ ಹಾನಿಯಾಗುತ್ತಿದೆಯಲ್ಲದೇ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ ಕೃಷ್ಣರಾಜಸಾಗರ ಅಣೆಕಟ್ಟೆಗೆ ಹಾನಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರಾಜಧನ ನಷ್ಟವಾಗುತ್ತಿರುವ ಕಾರಣ ಕೂಡಲೇ ಅಕ್ರಮ ಗಣಿಗಾರಿಕೆ ರದ್ದುಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.
ಇತ್ತೀಚಿಗೆ ಪಾಂಡವಪುರ ಉಪವಿಭಾಗಾಧಿಕಾರಿಗಳು, ಹಿರಿಯ ಭೂ ವಿಜ್ಞಾನಿಗಳು ಸೇರಿದಂತೆ ಸಂಬಂಧಪಟ್ಟ ಆಧಿಕಾರಿಗಳೊಂದಿಗೆ ಖುದ್ದಾಗಿ ಶ್ರೀರಂಗಪಟ್ಟಣ ತಾಲೂಕಿನ ಚನ್ನನಕೆರೆ ಮತ್ತು ಹಂಗರವಳ್ಳಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗಳ ಸ್ಥಳ ಪರಿವೀಕ್ಷಣೆ ನಡೆಸಿದ ಸಂದರ್ಭದಲ್ಲಿ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟವಾಗಿರುವ ವಾಸ್ತವಾಂಶಗಳು ಕಂಡುಬಂದಿದ್ದು, ಈ ವೇಳೆ ಅಕ್ರಮ ಕಲ್ಲು ಗಣಿಗಾರಿಕೆಗಳ ಪ್ರದೇಶಕ್ಕೆ ಪರಿವೀಕ್ಷಣೆ ನಡೆಸಲು ತೆರಳದಂತೆ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಕಲ್ಲು ಗಣಿಮಾಲೀಕರು ರಸ್ತೆಗೆ ತಡೆಯೊಡ್ಡಿದ್ದರು.
ಅಕ್ರಮ ಕಲ್ಲು ಗಣಿಗಾರಿಕೆಗಳ ಮಾಲೀಕರ ಬೆಂಬಲಿಗರು ಗಣಿ ಪ್ರದೇಶಕ್ಕೆ ಭೇಟಿ ನೀಡದಂತೆ ನಿರ್ಬಂಧಿಸಿ ಮುಷ್ಕರ ನಡೆಸಿದರು ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಕೃಷ್ಣರಾಜಸಾಗರ ಅಣೆಕಟ್ಟೆಯ ಸುರಕ್ಷತಾ ಹಿತದೃಷ್ಟಿಯಿಂದ ಅಣೆಕಟ್ಟಿನ ಸುತ್ತಮುತ್ತಲ ಪ್ರದೇಶದಲ್ಲಿ ಹಾಗೂ ಮಂಡ್ಯ ಜಿಲ್ಲೆಯ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಗಳನ್ನು ಈ ಕೂಡಲೇ ರದ್ದುಗೊಳಿಸಲು ಅವರು ಆಗ್ರಹಿಸಿದ್ದಾರೆ.
ಕಲ್ಲು ಗಣಿಗಾರಿಕೆಗಳಿಗೆ ಈಗಾಗಲೇ ತಮ್ಮ ಇಲಾಖೆಯ ವತಿಯಿಂದ ಹತ್ತು ಹಲವು ನೋಟಿಸ್ ಜಾರಿ ಗೊಟ್ಟಿಸಿದ್ದು, ಅಕ್ರಮ ಕಲ್ಲು ಗಣಿಗಾರಿಕೆಗಳಿಂದ ಈಗಾಗಲೇ ಸುಮಾರು 1200 ಕೋಟಿ ರಾಜಧನ ಮತ್ತು ದಂಡ ಬಾಕಿ ಇದ್ದು, ಡ್ರೋಣ್ ಸರ್ವೆ ನಡೆಸಿ ಬಾಕಿಯಿರುವ ರಾಜಧನ ಮತ್ತು ದಂಡವನ್ನು ವಸೂಲಾತಿ ಮಾಡುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ತುಂಬಿಸುವ ಕುರಿತು ತ್ವರಿತಗತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸುಮಲತಾ ಕೋರಿದ್ದಾರೆ.